ಬೆಂಗಳೂರು: ಕ್ರೀಡಾಭಿಮಾನಿಗಳು ಬಹಳ ಕಾತರದಿಂದ ಎದುರು ನೋಡುತ್ತಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದ್ಧೂರಿಯಾಗಿ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರೂ ತಂಡ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಆರ್‌ಸಿಬಿ ಗೆಲುವು ನಿಷ್ಠಾವಂತ ಅಭಿಮಾನಿಗಳ ಹರ್ಷೋದ್ಘಾರವನ್ನು ಇಮ್ಮಡಿಗೊಳಿಸಿದೆ. ಪಂದ್ಯಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಂಡದ ಆಟಗಾರರ ಸಾಮರ್ಥ್ಯವನ್ನು ಕೊಂಡಾಡಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ನಿನ್ನೆಯ ಗೆಲುವು ಮತ್ತಷ್ಟು ಎದೆಯುಬ್ಬಿಸಿ ನಡೆಯುವಂತೆ ಮಾಡಿದೆ.
ಆರ್‌ಸಿಬಿ ಅಭಿಮಾನಿಗಳ ಬಳಗ ದೇಶದಲ್ಲೇ ಅತಿದೊಡ್ಡ ಅಭಿಮಾನಿ ಬಳಗಗಳಲ್ಲಿ ಒಂದು. ಫಲಿತಾಂಶ ಏನೇ ಬರಲಿ ಅದು ಮುಖ್ಯವಲ್ಲ, ಸದಾ ತಮ್ಮ ತಂಡದ ಬೆನ್ನಿಗೆ ನಿಲ್ಲುವಂತ ಪ್ರಾಮಾಣಿಕ ಅಭಿಮಾನಿಗಳನ್ನು ಆರ್‌ಸಿಬಿ ಹೊಂದಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆ 2019ರ ಐಪಿಎಲ್ ವೇಳೆ ಆರ್ಸಿಬಿಗೆ ಉತ್ತೇಜನ ನೀಡಲು ಬಹುದೊಡ್ಡ ಅಭಿಮಾನಿ ಬಳಗವೇ ಕ್ರೀಡಾಂಗಣದಲ್ಲಿ ತುಂಬಿತ್ತು.
ಇದನ್ನೂ ಓದಿರಿ: ಯುಗಾದಿಗೆ ಹೊಸ ಬಟ್ಟೆಯ ಆಸೆ: ಸಂಬಳ ಬರಲಿ ಇರು ಮಗಳೆ ಅಂದ್ರೂ ಕೇಳದೆ ಬಾಲಕಿ ಆತ್ಮಹತ್ಯೆ!
2019ನೇ ಟೂರ್ನಿಯಲ್ಲಿ ಕಳಪೆ ಆಟದೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಕೆಳಗಡೆಯಿದ್ದರೂ ಅಭಿಮಾನಿಗಳಿಗೇನು ಕಮ್ಮಿ ಇರಲಿಲ್ಲ. ಹೀಗಿರುವಾಗ ಪಂದ್ಯವೊಂದರಲ್ಲಿ ಆರ್‌ಸಿಬಿ ಮಹಿಳಾ ಅಭಿಮಾನಿ ದೀಪಿಕಾ ಘೋಸ್ ಕ್ಯಾಮೆರಾ ಕಣ್ಣಿಗೆ ಬಿದ್ದು, ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದರು. ಆರ್‌ಸಿಬಿ ಜರ್ಸಿ ಧರಿಸಿ ಬಾವುಟ ಹಿಡಿದು ಕುಣಿದು ಕುಪ್ಪಳಿಸಿದ್ದ ಕೇವಲ 5 ಸೆಕೆಂಡ್ ವಿಡಿಯೋ ಭಾರಿ ವೈರಲ್ ಆಗಿ ಸೋಶಿಯಲ್ ಮೀಡಿಯಾ ಸ್ಟಾರ್ ಆದರು.
ಇದರ ಬೆನ್ನಲ್ಲೇ ದೀಪಿಕಾ ಅವರ ಇನ್ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆಯು ಸಹ ರಾಕೆಟ್ ವೇಗದಲ್ಲಿ ಹೆಚ್ಚಾಯಿತು. ಸಮಾಜದಲ್ಲಿ ಗುರುತಿಸಿಕೊಳ್ಳಲು ನಾನಾ ಕಸರತ್ತು ಮಾಡುವವರ ನಡುವೆ ದೀಪಿಕಾ ಸುಲಭವಾಗಿ ಚಿರಪರಿಚಿತರಾದರು. ಆದರೆ, ಈ ಪ್ರಚಾರವು ಧನಾತ್ಮಕತೆಗಿಂತ ಋಣಾತ್ಮಕ ಹಾದಿಯಲ್ಲಿ ಹೇಗೆ ದೀಪಿಕಾ ಮೇಲೆ ಪ್ರಭಾವ ಬೀರಿತು ಎಂಬುದನ್ನು ಸ್ವತಃ ಅವರೇ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನನ್ನ ಹೆಸರು ದೀಪಿಕಾ ಘೋಸ್ ಮತ್ತು ಬಹುಶಃ ನನ್ನ ಬಗ್ಗೆ ಹೇಳಲಾಗುತ್ತಿರುವ ಏಕೈಕ ವಿಷಯವು ಶೇ. 100 ರಷ್ಟು ಸತ್ಯ ಎಂದಿರುವ ದೀಪಿಕಾ, ನನಗೆ ಯಾವುದೇ ಗುರುತು ಬೇಕಿರಲಿಲ್ಲ. ನಾನೇನು ಸೆಲಿಬ್ರೆಟಿಯಲ್ಲ, ನಾನೊಬ್ಬಳು ಪಂದ್ಯವನ್ನು ಆನಂದಿಸುವ ಸಾಮಾನ್ಯ ಹುಡುಗಿಯಷ್ಟೇ. ಇಷ್ಟೊಂದು ಮಟ್ಟದಲ್ಲಿ ಗಮನಸೆಳೆಯುವಂಥದ್ದು ನಾನೇನು ಮಾಡಿಲ್ಲ. ನಾನಿದನ್ನು ಎದುರು ಸಹ ನೋಡಿರಲಿಲ್ಲ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.
ಮುಂದುವರಿದು ನನ್ನ ಗುರುತು, ಗೌಪ್ಯತೆ ಮತ್ತು ನನ್ನ ಜೀವನವನ್ನು ಕ್ಷಣಾರ್ಧದಲ್ಲಿ ಹ್ಯಾಕ್ ಮಾಡಲಾಯಿತು. ರಾತ್ರೋರಾತ್ರಿ ನನ್ನನ್ನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಿದವರಲ್ಲಿ ಕೆಲ ಪುರುಷರು ಕೆಟ್ಟದಾಗಿ ವರ್ತಿಸಿದರು. ಅಸಭ್ಯ ಹಾಗೂ ಅಸಹ್ಯ ಎನಿಸುವಂತೆ ಕಾಮೆಂಟ್ ಮಾಡಿದ್ದಾರೆ. ನನಗೆ ಸಂಪೂರ್ಣವಾಗಿ ಅಗೌರವ ತೋರಿದ್ದಾರೆಂದು ದೀಪಿಕಾ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿರಿ: ಚಾಣಕ್ಯನ ಪ್ರಕಾರ ಪತಿ-ಪತ್ನಿ ಸಂಬಂಧ ಚೆನ್ನಾಗಿರಬೇಕಾದ್ರೆ ಈ 3 ವಿಚಾರ ತುಂಬಾ ಮುಖ್ಯ..!
ಇನ್ನೂ ಆಘಾತಕಾರಿ ಸಂಗತಿಯೆಂದರೆ ಮಹಿಳೆಯರು ಸಹ ನನ್ನನ್ನು ದ್ವೇಷಿಸಿದರು. ನನಗೆ ತಿಳಿಯದೆ ನನ್ನ ಬಗ್ಗೆ ಏನೇನೋ ಮಾತನಾಡಲು ಆರಂಭಿಸಿದರು. ಎಲ್ಲರಲ್ಲಿ ನಾನು ಒಬ್ಬಳು ಎಂಬುದನ್ನು ಮರೆತು ವಿಚಿತ್ರವಾಗಿ ವರ್ತಿಸಿದರು ಎಂದಿದ್ದಾರೆ.
ಕೊನೆಯಲ್ಲಿ ಹೌದು ನಾನು ಆರ್‌ಸಿಬಿ ಹುಡುಗಿ ಆದರೆ, ನಾನು ಅದಕ್ಕಿಂತ ಹೆಚ್ಚು ಎಂದು ತನ್ನ ವೈಯಕ್ತಿಕ ಜೀವನವೇ ನನಗೆ ಮುಖ್ಯ ಎಂಬ ಸಂದೇಶವನ್ನು ಸಾರಿದ್ದಾರೆ. ನಿನ್ನೆ ಮುಂಬೈ ಮತ್ತು ಆರ್‌ಸಿಬಿ ವಿರುದ್ಧ ಉದ್ಘಾಟನಾ ಪಂದ್ಯ ಶುರುವಾಗುವ ಕೆಲ ಹೊತ್ತಿಗು ಮುಂಚೆಯೇ ಇನ್ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್)
ರಾಹುಲ್ ದ್ರಾವಿಡ್ಗೆ ಕೋಪ ಉಕ್ಕೇರಿದಾಗ ಬಂತು ಕನ್ನಡದ ನುಡಿ… ‘ಒಡೆದ್ಹಾಕ್ ಬಿಡ್ತೀನಿ….’