ಯೋಗಿ ಆದಿತ್ಯನಾಥ್​ ಹುಟ್ಟುಹಬ್ಬದಂದು ಪ್ರಧಾನಿ ಮೋದಿ ಶುಭಕೋರದಿರಲು ಇದೇ ಕಾರಣನಾ?

Yogi
Published on

ನವದೆಹಲಿ: ತನ್ನ ಪಕ್ಷದ ಪ್ರಮುಖ ನಾಯಕರ ಹುಟ್ಟುಹಬ್ಬದಂದು ಮರೆಯದೇ ಟ್ವೀಟ್​ ಮಾಡಿ ಶುಭಕೋರುವ ಪ್ರಧಾನಿ ನರೇಂದ್ರ ಮೋದಿ, ನಿನ್ನೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹುಟ್ಟುಹಬ್ಬದಂದು ಶುಭಕೋರದೇ ಇರುವುದು ಎಲ್ಲರ ಹುಬ್ಬೇರಿಸಿದೆ.

ಮೂಲಗಳ ಪ್ರಕಾರ ಪ್ರಧಾನಿ ಮೋದಿ ಶನಿವಾರ ಆದಿತ್ಯನಾಥ್​ ಜತೆ ದೂರವಾಣಿ ಮೂಲಕ ಶುಭಕೋರಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ. ಕರೊನಾ ಎರಡನೇ ಅಲೆ ಬಂದಾಗಿನಿಂದ ಯಾರಿಗೂ ಪ್ರಧಾನಿ ಮೋದಿ ಟ್ವೀಟ್​ ಮಾಡಿಲ್ಲ. ಪ್ರತಿಪಕ್ಷದ ನಾಯಕರು ಸೇರಿದಂತೆ ಅವರಿಗೆ ನೀಡಲಾಗಿರುವ ಪ್ರಮುಖ ನಾಯಕರ ಪಟ್ಟಿಯಲ್ಲಿರುವ ಯಾರೊಬ್ಬರಿಗೂ ಕೆಲವು ವಾರಗಳಿಂದ ಹುಟ್ಟುಹಬ್ಬದಂದು ಶುಭಕೋರಿಲ್ಲ ಎಂದು ಪಿಎಂಒ ಸ್ಪಷ್ಟನೆ ನೀಡಿದೆ.

ಆದರೆ, ಇವೆಲ್ಲದರ ನಡುವೆ ಊಹಾಪೋಹವೊಂದು ಕೇಳಿಬರುತ್ತಿದೆ. ಕರೊನಾ ನಿರ್ವಹಣೆಯಲ್ಲಿ ಜನರು ಯೋಗಿ ಆದಿತ್ಯನಾಥ್​ ನೇತೃತ್ವದ ಸರ್ಕಾರವನ್ನು ಟೀಕಿಸುತ್ತಿರುವುದು ಬಿಜೆಪಿಯ ಪ್ರಮುಖ ನಾಯಕರಿಗೆ ಚಿಂತೆಯ ವಿಷಯವಾಗಿದೆ.

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನಾಯಕತ್ವ ಬದಲವಾವಣೆಯನ್ನು ಪರಿಗಣಿಸಲಾಗಿದೆ ಎಂಬ ವದಂತಿಯು ಇದೆ. 2024ರ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಬದಲಾವಣೆ ಒಳ್ಳೆಯದು ಎಂಬ ಮಾತು ಕೇಳಿಬರುತ್ತಿದೆ. ಏಕೆಂದರೆ, ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶವು ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನು ಈ ವದಂತಿಯನ್ನು ತಳ್ಳಿಹಾಕಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್​, ಯೋಗಿ ಸರ್ಕಾರ ಕೋವಿಡ್​ ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ರೀತಿ ನೋಡಿ ಗುರುವಾರ ಟ್ವೀಟ್​ ಮಾಡಿ ಹೊಗಳಿದ್ದಾರೆ.

ಆದರೂ, ಕೋವಿಡ್​ ನಿರ್ವಹಣೆಯಲ್ಲಿ ಉತ್ತರ ಪ್ರದೇಶದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬರುತ್ತಿರುವುದರಿಂದ ಯೋಗಿ ನಾಯಕತ್ವದ ಮೇಲೆ ನಾಯಕರಿಗೆ ಅಸಮಾಧಾನವಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net