ಟ್ವಿಟರ್​ಗೆ ಕೊನೆಯ ಎಚ್ಚರಿಕೆ; ಹೊಸ ನಿಯಮ ಪಾಲಿಸದ ಕಾರಣ ಕೇಂದ್ರ ಸರ್ಕಾರ ಗರಂ

Twitter
Published on

ನವದೆಹಲಿ: ಡಿಜಿಟಲ್ ವೇದಿಕೆಗಳಿಗೆ ರೂಪಿಸಿರುವ ಹೊಸ ನಿಯಮ ಅನ್ವಯ ಆಕ್ಷೇಪಾರ್ಹ ಅಥವಾ ಅಪರಾಧಕ್ಕೆ ಕಾರಣ ವಾಗುವಂತಹ ಪೋಸ್ಟ್​ಗಳ ಮೂಲವನ್ನು ಹಂಚಿಕೊಳ್ಳುವುದು ಮತ್ತು ಕುಂದುಕೊರತೆ ಅಲಿಸಲು ಭಾರತೀಯ ಮೂಲದ ಅಧಿಕಾರಿಯನ್ನು ನೇಮಿಸುವಂತೆ ಸಾಮಾಜಿಕ ಜಾಲತಾಣ ಟ್ವಿಟರ್​ಗೆ ಕೇಂದ್ರ ಸರ್ಕಾರ ಶನಿವಾರ ಅಂತಿಮ ನೋಟಿಸ್ ನೀಡಿದೆ.

ಹೊಸ ನಿಯಮವನ್ನು ನಿರ್ಲಕ್ಷಿಸಿದರೆ ಮುಂದಿನ ಪರಿಣಾಮ ಎದುರಿಸಬೇಕಾ ದೀತು ಎಂಬ ಎಚ್ಚರಿಕೆಯನ್ನೂ ನೀಡಿದೆ. ಹೊಸ ನಿಯಮ ಪಾಲಿಸುವಲ್ಲಿವಿಫಲ ವಾದರೆ ಬಳಕೆದಾರರ ಪೋಸ್ಟ್​ಗಳಿಗೆ ಸಂಸ್ಥೆಯನ್ನೇ ಹೊಣೆಗಾರಿಕೆ ಮಾಡಿ ಕ್ರಮ ಜ ರುಗಿಸಬೇಕಾಗುತ್ತದೆ. ಹೊಸ ನಿಯಮದ ಅನ್ವಯ ಹಂಗಾಮಿಯಾಗಿ ಕುಂದುಕೊರತೆಯ ಅಧಿಕಾರಿಯನ್ನು ನೇಮಿಸಲು ಕ್ರಮವಹಿಸಲಾಗಿದೆ. ಆದರೆ, ದೂರುಗಳ ಪರಿಹಾರದ ಅಧಿಕಾರಿ ಮತ್ತು ನೋಡಲ್ ಅಧಿಕಾರಿಗಳನ್ನು ಹೆಸರಿಸಬೇಕಿದೆ ಎಂದು ಟ್ವಿಟರ್ ಹೇಳಿದೆ. ಸರ್ಕಾರದ ಹೊಸ ನಿಯಮವನ್ನು ಫೇಸ್​ಬುಕ್ ಮತ್ತು ವಾಟ್ಸ್​ಆಪ್​ಗಳು ಆಕ್ಷೇಪಿಸಿದ್ದರೂ, ಕುಂದುಕೊರತೆಯ ಅಧಿಕಾರಿಯನ್ನು ನೇಮಿಸಿವೆ.

ಟ್ವಿಟರ್ ವಿರೋಧ ಏಕೆ?: ಹೊಸ ನಿಯಮದ ಪ್ರಕಾರ, ಆಕ್ಷೇಪಾರ್ಹ ಪೋಸ್ಟ್​ಗಳ ಮೂಲವನ್ನು ಸಾಮಾಜಿಕ ಜಾಲತಾಣಗಳು ಹಂಚಿಕೊಳ್ಳಬೇಕು. ಇದು ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯುಂಟು ಮಾಡುತ್ತದೆ ಎಂದು ಟ್ವಿಟರ್ ವಾದವಾಗಿದೆ.

ಬ್ಲೂ ಟಿಕ್ ಮಾಯ: ಕೇಂದ್ರ ಸರ್ಕಾರದ ಜತೆ ಜಟಾಪಟಿಗೆ ಇಳಿದಿರುವ ಟ್ವಿಟರ್ ಈಗ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಆರ್​ಎಸ್​ಎಸ್​ನ ಮುಖ್ಯಸ್ಥ ಮೋಹನ್ ಭಾಗವತ್, ಸಂಘದ ಹಿರಿಯ ಪದಾಧಿಕಾರಿಗಳಾದ ಸುರೇಶ್ ಸೋನಿ, ಅರುಣ್ ಕುಮಾರ್, ಸುರೇಶ್ ಜೋಷಿ, ಕೃಷ್ಣ ಕುಮಾರ್ ಅವರ ಟ್ವಿಟರ್ ಖಾತೆಯ ‘ಬ್ಲೂ ಟಿಕ್’ ತೆಗೆಯಲಾಗಿದೆ. ಉಪರಾಷ್ಟ್ರಪತಿಗಳ ಕಚೇರಿ ಆಕ್ಷೇಪ ಎತ್ತುತ್ತಿದ್ದಂತೆ ಕೆಲವೇ ತಾಸಿನಲ್ಲಿ ಅದನ್ನು ಮರುಸ್ಥಾಪನೆ ಮಾಡಿದೆೆ. ಪೂರ್ವಭಾವಿಯಾಗಿ ಮಾಹಿತಿ ನೀಡದೆ ‘ಬ್ಲೂ ಟಿಕ್’ ತೆಗೆದಿದ್ದು ಏಕೆ ಎಂದು ಟ್ವಿಟರ್​ಗೆ ಐಟಿ ಸಚಿವಾಲಯ ನೋಟಿಸ್ ನೀಡುವ ಸಾಧ್ಯತೆ ಇದೆ.

ಏನಿದು ಬ್ಲೂ ಟಿಕ್?: ಬಳಕೆದಾರರ ಖಾತೆ ಪರಿಶೀಲನೆ ಆಗಿದೆ ಎನ್ನುವು ದನ್ನು ದಾಖಲಿಸುವ ಚಿಹ್ನೆಯೇ ‘ಬ್ಲೂ ಟಿಕ್’. ಆರು ತಿಂಗಳಿಂದ ಸಕ್ರಿಯವಲ್ಲದ ಅಥವಾ ಅಪೂರ್ಣವಾದ ಖಾತೆಗಳ ‘ಬ್ಲೂ ಟಿಕ್’ ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ ಎಂದು ಟ್ವಿಟರ್ ಹೇಳಿದೆ. ಇದೇ ಕಾರಣಕ್ಕೆ ಆರ್​ಎಸ್​ಎಸ್ ಮುಖಂಡರ ಟ್ವಿಟರ್ ಖಾತೆಯ ‘ಬ್ಲೂ ಟಿಕ್’ ರದ್ದುಗೊಂಡಿದೆ ಎಂದು ಸ್ಪಷ್ಟ ಪಡಿಸಿದೆ.

ಸರ್ಕಾರದ ವಾದವೇನು?: ಭಾರತದಲ್ಲಿ ಟ್ವಿಟರ್ ದಶಕದಿಂದ ಕಾರ್ಯನಿರ್ವಹಿಸುತ್ತಿದ್ದರೂ ದೇಶದ ಬಳಕೆದಾರರ ಸಮಸ್ಯೆಯನ್ನು ಸಮ ಯೋಚಿತವಾಗಿ ಮತ್ತು ಪಾರದರ್ಶಕವಾಗಿ ಬಗೆಹರಿಸುವ ನಿಯಮವನ್ನು ಒಪು್ಪತ್ತಿಲ್ಲ. ಭಾರತೀಯರೊಬ್ಬರನ್ನು ಕುಂದುಕೊರತೆ ಅಧಿಕಾರಿ ಯನ್ನಾಗಿ ನೇಮಿಸಿಲ್ಲ ಎಂಬುದು ಐಟಿ ಸಚಿವಾಲಯದ ವಾದ. ಅಪರಾಧಕ್ಕೆ ಕಾರಣವಾಗುವ ಮಾಹಿತಿಯ ಮೂಲವನ್ನು ಹಂಚಿಕೊಳ್ಳಬೇಕು ಎಂದು ತಾಕೀತು ಮಾಡಿದೆ.

ಟ್ವಿಟರ್ ಸ್ಪಷ್ಟನೆ: ಉಪರಾಷ್ಟ್ರಪತಿಗಳ ಖಾತೆ 2020ರ ಜುಲೈನಿಂದ ಸಕ್ರಿಯವಾಗಿಲ್ಲ. ಪರಿಶೀಲನಾ ನೀತಿಯ ಅನ್ವಯ ಬಹುಶಃ ‘ಬ್ಲೂ ಟಿಕ್’ ಬ್ಯಾಡ್ಜ್ ತೆಗೆದಿರಬಹುದು. ಆದರೆ, ಈಗ ಅದನ್ನು ಮರುಸ್ಥಾಪಿಸಲಾಗಿದೆ ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ.

ನೈಜೀರಿಯಾದಲ್ಲಿ ಟ್ವಿಟರ್ ಬಂದ್: ನೈಜೀರಿಯಾ ಅಧ್ಯಕ್ಷ ಮಹಾಮದ್ ಬುರಾರಿ ಅವರ ವಿವಾದಾತ್ಮಕ ಟ್ವೀಟ್ ಡಿಲಿಟ್ ಮಾಡಿರುವ ಕಾರಣ ದೇಶದಲ್ಲಿ ಅನಿರ್ದಿಷ್ಟಾವಧಿವರೆಗೆ ಟ್ವಿಟರ್ ಕಾರ್ಯಾಚರಣೆ ಬಂದ್ ಮಾಡಿ ಅಲ್ಲಿನ ಆಡಳಿತ ಆದೇಶ ಹೊರಡಿಸದೆ. ಈ ಆದೇಶ ಹೊರ ಬೀಳುತ್ತಿದ್ದಂತೆ ಭಾರತದ ಕೂ ಆಪ್ ನೈಜೀರಿಯಾದತ್ತ ಆಕರ್ಷಿತವಾಗಿದೆ.

ಪಾತ್ರಾ ಟ್ವೀಟ್ ವಿವಾದ: ಕೋವಿಡ್ ನಿರ್ವಹಣೆ ವಿಚಾರದಲ್ಲಿ ಸರ್ಕಾರ ಎಡವಿದೆ ಎಂದು ಬಿಂಬಿಸಲು ‘ಕಾಂಗ್ರೆಸ್ ಟೂಲ್ಕಿಟ್’ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದೆ ಎಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಆಪಾದಿಸಿದ್ದರು. ‘ಕಾಂಗ್ರೆಸ್ ಟೂಲ್ಕಿಟ್’ ನಕಲಿ ಎಂದು ಟ್ವಿಟರ್ ಹೇಳಿತ್ತು. ಈ ಬಗ್ಗೆ ತನಿಖೆ ಆಗುತ್ತಿರುವ ವೇಳೆಯಲ್ಲೇ ಪಾತ್ರಾ ಅವರ ಪೋಸ್ಟ್​ಗೆ ಟ್ವಿಟರ್ ‘ನಕಲಿ’ ಎಂಬ ಟ್ಯಾಗ್ ಹಾಕಿತ್ತು. ಈ ಬಗ್ಗೆ ಸರ್ಕಾರ ಟ್ವಿಟರ್​ಗೆ ನೋಟಿಸ್ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net