ಕೃತಿ ಶೆಟ್ಟಿ ಜತೆ ಅಂತ ಕೆಲಸ ಮಾಡಲ್ಲ! ಅವಳನ್ನು ನನ್ನ ಮಗಳೆಂದು ಭಾವಿಸಿದ್ದೇನೆಂದ ವಿಜಯ್​ ಸೇತುಪತಿ

Vijay Sethupathy
Published on

ಚೆನ್ನೈ: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ವಿಜಯ್​ ಸೇತುಪತಿ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದಲೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಮಾಜದ ಬಗೆಗಿನ ಅವರ ಚಿಂತನೆ ಹಾಗೂ ಸಮಾಜಮುಖಿ ಕೆಲಸಗಳಿಂದಲೂ ಸೇತುಪತಿ ಮಾದರಿಯಾಗಿದ್ದಾರೆ. ಒಬ್ಬ ನಟನಾಗಿ ಯಾವುದೇ ಪಾತ್ರವನ್ನು ಕೊಟ್ಟರು ನಿಭಾಯಿಸುವ ಸೇತುಪತಿ ತಮ್ಮ ಪಾತ್ರದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುಬೇಕೆಂಬುದೇ ಅವರ ಉದ್ದೇಶವಾಗಿರುತ್ತದೆ.

ಇದೀಗ ವಿಜಯ್​ ಸೇತುಪತಿ ತೆಗೆದುಕೊಂಡಿರುವ ಈ ಒಂದು ನಿರ್ಧಾರ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ತೆಲುಗಿನ ಉಪ್ಪೇನಾ ಚಿತ್ರದ ಮೂಲಕ ಸೇತುಪತಿ ಟಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಸೇತುಪತಿ ನಾಯಕಿ ಕೃತಿ ಶೆಟ್ಟಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿಯ ನಟನೆಯನ್ನು ನೋಡಿ ಸೇತುಪತಿ ಮನಸಾರೆ ಹೊಗಳಿದ್ದರು. ಇದೀಗ ಅವರೊಂದಿಗೆ ತಮಿಳು ಚಿತ್ರ ಮಾಡುವುದನ್ನು ಸೇತುಪತಿ ನಿರಾಕರಿಸಿದ್ದಾರೆ.

ನಿರಾಕರಿಸಲು ಕಾರಣವೂ ಇದೆ. ಸೇತುಪತಿ ತಮಿಳು ಚಿತ್ರವೊಂದಕ್ಕೆ ಸಹಿ ಹಾಕಿದ್ದರು. ಆ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ಕೃತಿ ಶೆಟ್ಟಿ ಹೆಸರು ಕೇಳಿಬಂದಿದ್ದಕ್ಕೆ ಆ ಪ್ರಸ್ತಾವನೆಯನ್ನು ಸೇತುಪತಿ ಒಲ್ಲೆ ಅಂದಿದ್ದಾರೆ.

ಈ ಬಗ್ಗೆ ತಮ್ಮ ನೂತನ ಚಿತ್ರ "ಲಾಭಂ" ಪ್ರಮೋಷನಲ್​ ಸಂದರ್ಭದಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಸೇತುಪತಿ ಹೇಳಿಕೊಂಡಿದ್ದಾರೆ. ನಾನು ಉಪ್ಪೇನಾ ಚಿತ್ರದಲ್ಲಿ ಕೃತಿಗೆ ತಂದೆಯಾಗಿ ಅಭಿನಯಿಸಿದ್ದೇನೆಂಬುದು ಚಿತ್ರತಂಡಕ್ಕೆ ಗೊತ್ತಿರಲಿಲ್ಲ. ನನ್ನ ಮಗಳೆಂದು ಭಾವಿಸಿದ ಮೇಲೆ ಅವಳೊಂದಿಗೆ ನಾನ್ಹೇಗೆ ರೊಮ್ಯಾನ್ಸ್​ ಮಾಡಲು ಸಾಧ್ಯ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ಉಪ್ಪೇನಾ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರೀಕರಣದ ವೇಳೆ ನನ್ನನ್ನು ನಿನ್ನ ತಂದೆಯಂದೇ ಭಾವಿಸು. ನನ್ನ ಮಗನಿಗೆ ಸುಮಾರು 15 ವರ್ಷ ಕೃತಿಗಿಂತ ಸ್ವಲ ಚಿಕ್ಕವನು. ಕೃತಿಯನ್ನು ಕೂಡ ನಾನು ಮಗಳಂತೆ ಭಾವಿಸುತ್ತೇನೆ. ಆದ್ರೆ ತೆರೆಯ ಮೇಲೆ ನಾನು ಹೇಗೆ ಅವಳೊಂದಿಗೆ ರೊಮ್ಯಾನ್ಸ್​ ಮಾಡಲು ಸಾಧ್ಯ. ಹೀಗಾಗಿ ಚಿತ್ರದ ನಾಯಕಿಯಾಗಿ ಅವಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇನೆಂದು ಹೇಳಿದರು.

ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ಸೇತುಪತಿ ಅಭಿನಯದ ಲಾಭಂ ಚಿತ್ರದ ಟ್ರೈಲರ್​ಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಸಾಮಾಜಿಕ ಸಂದೇಶವಿದ್ದು, ರೈತ ನಾಯಕನಾಗಿ ಸೇತುಪತಿ ಕಾಣಿಸಿಕೊಂಡಿದ್ದಾರೆ. ಸೇತುಪತಿಗೆ ಶ್ರುತಿ ಹಾಸನ್​ ನಾಯಕಿಯಾಗಿ ಸಾಥ್​ ನೀಡಿದ್ದಾರೆ. ಸೆ.9ಕ್ಕೆ ಲಾಭಂ ಚಿತ್ರ ತೆರೆಗೆ ಅಪ್ಪಳಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net