

ಕಾಬುಲ್: ರಕ್ತಪಿಪಾಸು ತಾಲಿಬಾನಿಗಳಿಗೆ ಮಗ್ಗಲು ಮುಳ್ಳಾಗಿರುವ ಪಂಜ್ಶೀರ್ನ ಅಫ್ಘಾನ್ ಪ್ರತಿರೋಧ ಗುಂಪಿನ ವಕ್ತಾರ ತಾಲಿಬಾನ್ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಭಾನುವಾರ ವರದಿಯಾಗಿದೆ.
ಪಂಜ್ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ಮತ್ತು ಪ್ರತಿರೋಧದ ಗುಂಪಿನ ನಡುವೆ ನಡೆದ ದಾಳಿಯಲ್ಲಿ ವಕ್ತಾರ ಫಾಹಿಮ್ ದಾಶ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತ ಫಾಹಿಮ್, ಜಮೈತ್-ಇ-ಇಸ್ಲಾಮಿ ಪಾರ್ಟಿ ಮತ್ತು ಆಫ್ಘಾನ್ ಪತ್ರಕರ್ತರ ಒಕ್ಕೂಟದ ಸದಸ್ಯರಾಗಿದ್ದರು ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ಪಂಜಶೀರ್ ಕಣಿವೆಯು ಹಿಂದು ಕುಶ್ ಪರ್ವತಗಳಲ್ಲಿದ್ದು, ಕಾಬುಲ್ನಿಂದ ಉತ್ತರಕ್ಕೆ 90 ಮೈಲಿ ದೂರದಲ್ಲಿದೆ. ತಾಲಿಬಾನಿಗಳು ಕೆಲವೇ ದಿನಗಳಲ್ಲಿ ಇಡೀ ಅಫ್ಘಾನಿಸ್ತಾವನ್ನೇ ವಶಕ್ಕೆ ಪಡೆದರೂ ಕೂಡ ಪಂಜ್ಶೀರ್ ಪ್ರಾಂತ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಅಮೆರಿಕ ಸೈನ್ಯ ಸಂಪೂರ್ಣವಾಗಿ ಆಫ್ಘಾನ್ನಿಗೆ ಖಾಲಿಯಾಗುತ್ತಿದ್ದಂತೆ ತಾಲಿಬಾನ್ ಇಡೀ ಆಫ್ಘಾನ್ ಮೇಲೆ ಹಿಡಿಸ ಸಾಧಿಸಿದೆ. ಇದೀಗ ತಮ್ಮ ಹಿಡಿತಕ್ಕೆ ಸಿಗದಿರುವ ಪಂಜ್ಶೀರ್ ಅನ್ನು ಹೇಗಾದರೂ ಮಾಡು ತಮ್ಮ ವಶಕ್ಕೆ ಪಡೆದುಕೊಳ್ಳಬೇಕೆಂದು ಹಠಕ್ಕೆ ಬಿದ್ದಿರುವ ತಾಲಿಬಾನ್, ಪಾಕ್ ನೆರವಿನಿಂದ ಪಂಜ್ಶೀರ್ ಮೇಲೆ ನಿರಂತರ ದಾಳಿ ಮಾಡುತ್ತಿದೆ. ಶುಕ್ರವಾರ ರಾತ್ರಿ ಪಂಜ್ಶೀರ್ ಪ್ರಾಂತ್ಯದಲ್ಲಿ ನಡೆದ ಸಂಘರ್ಷದಲ್ಲಿ ಇಡೀ ಪಂಜ್ಶೀರ್ ತಾಲಿಬಾನ್ ವಶವಾಗಿ ಎಂದು ಹೇಳಲಾಗಿತ್ತು. ಆದರೆ, ಅದನ್ನು ಪ್ರತಿರೋಧದ ಗುಂಪು ನಿರಾಕರಿಸಿದೆ.
ಪ್ರತಿರೋಧ ಪಡೆಗಳ ನಾಯಕ ಅಹ್ಮದ್ ಮಸೂದ್ ಭಾನುವಾರ ಮಾತನಾಡಿ, ತಾಲಿಬಾನ್ ಪ್ರಾಂತ್ಯವನ್ನು ತೊರೆದರೆ ಹೋರಾಟ ನಿಲ್ಲಿಸಲು ಮತ್ತು ಮಾತುಕತೆ ಆರಂಭಿಸಲು ಸಿದ್ಧ ಎಂದು ಹೇಳಿದ್ದಾರೆಂದು ಸ್ಪುಟ್ನಿಕ್ ವರದಿ ಮಾಡಿದೆ. ತಾಲಿಬಾನ್ ಜತೆಗಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಲು ಮುಂದಾಗಿರುವುದಾಗಿ ಮಸೂದ್ ಹೇಳಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)