ಹೆಲಿಕಾಪ್ಟರ್​​ ಪತನದ ವೈರಲ್​ ವಿಡಿಯೋಗೂ ಸೇನಾ ಮುಖ್ಯಸ್ಥರಿದ್ದ ಕಾಪ್ಟರ್​​ ಪತನಕ್ಕೂ ಸಂಬಂಧವಿಲ್ಲ: ನಿಜಾಂಶ ಇಲ್ಲಿದೆ!

bipini Rawat 1
Published on

ನವದೆಹಲಿ: ನಿನ್ನೆ (ಡಿಸೆಂಬರ್​ 8) ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದು, ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. ಇದರ ನಡುವೆ ಸೇನಾ ಹೆಲಿಕಾಪ್ಟರ್​ ಪತನಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಅದು ನಕಲಿ ವಿಡಿಯೋ ಎಂದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

ವಿಡಿಯೋದಲ್ಲಿ ಏನಿದೆ?: ಆಕಾಶದಲ್ಲಿ ಹಾರಾಡುತ್ತಿರುವಾಗಲೇ ಹೆಲಿಕಾಪ್ಟರ್​ಗೆ ಬೆಂಕಿ ಹೊತ್ತುಕೊಳ್ಳುತ್ತದೆ. ಅದು ನಿಧಾನವಾಗಿ​ ಪತನವಾಗುತ್ತಾ ನೆಲಕ್ಕುರುಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನಿನ್ನೆ ಸೇನಾ ಮುಖ್ಯಸ್ಥರಾದ ಬಿಪಿನ್​ ರಾವತ್ ಮತ್ತು ಅವರ ಸಿಬ್ಬಂದಿಯಿದ್ದ ಹೆಲಿಕಾಪ್ಟರ್​ ಪತನದ ದೃಶ್ಯ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈಗಾಗಲೇ ಸಾವಿರಾರು ಮಂದಿ ವಿಡಿಯೋವನ್ನು ನಿಜವೆಂದು ನಂಬಿ ರೀಟ್ವೀಟ್​, ಶೇರ್​ ಮತ್ತು ಲೈಕ್ಸ್​ಗಳನ್ನು ಮಾಡುತ್ತಿದ್ದಾರೆ. ​

ಆದರೆ, ವೈರಲ್​ ಆಗುತ್ತಿರುವ ವಿಡಿಯೋದಲ್ಲಿರುವುದು ಬಿಪಿನ್​ ರಾವತ್​ ಅವರಿದ್ದ ಸೇನಾ ಹೆಲಿಕಾಪ್ಟರ್​ ಅಲ್ಲ. ಬದಲಿಗೆ 2020ರಲ್ಲಿ ಸಿರಿಯಾದಲ್ಲಿ ಸಂಭವಿಸಿದ ಹೆಲಿಕಾಪ್ಟರ್​ ಪತನದ ದೃಶ್ಯವಾಗಿದೆ. ಈ ವಿಚಾರ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

ಅವಿಯೇಶನ್​ ಗೀಕ್​ ಕ್ಲಬ್​ ವರದಿಯ ಪ್ರಕಾರ ಸೈಯದ್​ ಎಂಐ-17 ಹೆಸರಿನ ಹೆಲಿಕಾಪ್ಟರ್​ ಅನ್ನು 2020ರ ಫೆಬ್ರವರಿಯಲ್ಲಿ ಸಿರಿಯಾ ಮೇಲೆ ಟರ್ಕಿ ಮತ್ತು ಅಲ್ ಖೈದಾ ಬೆಂಬಲಿತ ಸೇನಾಪಡೆಗಳು ಸಿಡಿಸಿದ ಕ್ಷಿಪಣಿಯ ದಾಳಿಗೆ ಹೆಲಿಕಾಪ್ಟರ್ ಪತನವಾಗಿದೆ. ಈ ವಿಡಿಯೋವನ್ನು ವಾಯುಯಾನ ವಿಶ್ಲೇಷಕ ಬಾಬಕ್​ ತಾಘ್ವೀ ಎಂಬುವರು 2020ರ ಫೆಬ್ರವರಿ 11ರಂದು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಟರ್ಕಿಶ್​ ಸೇನೆಯು ಸಿರಿಯಾ ಅರಬ್​ ವಾಯುಪಡೆಗೆ ಸೇರಿದ ಎಂಐ-17 ಯುಟಿಲಿಟಿ ಹೆಲಿಕಾಪ್ಟರ್​ ಅನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಮಾಡಿದ್ದು, ಅದು ಪತನವಾಗುತ್ತಿರುವ ದೃಶ್ಯವಿದು ಎಂದು ತಾಘ್ವೀ ಟ್ವೀಟ್​ ಮೂಲಕ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಬಿಪಿನ್​ ರಾವತ್​ ಅವರಿದ್ದ ಹೆಲಿಕಾಪ್ಟರ್​ ಪತನಕ್ಕೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋಗೂ ಸಂಬಂಧವಿಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಬಿಪಿನ್​ ರಾವತ್​ ಅವರಿದ್ದ ಹೆಲಿಕಾಪ್ಟರ್​ ಪತನದ ದೃಶ್ಯ ಯಾರಿಗೂ ಲಭ್ಯವಾಗಿಲ್ಲ. ಅದು ಸೆರೆಯಾಗಿದೆಯೇ? ಇಲ್ಲವೇ? ಎಂಬುದು ಕೂಡ ಯಾರಿಗೂ ಸದ್ಯದವರೆಗೂ ತಿಳಿದಿಲ್ಲ. ಹೀಗಾಗಿ ಪ್ರಸ್ತುತ ಹರಿದಾಡುತ್ತಿರುವ ಹೆಲಿಕಾಪ್ಟರ್​ ಪತನದ ದೃಶ್ಯ ಸಿರಿಯಾದಲ್ಲಿ ನಡೆದ ಹೆಲಿಕಾಪ್ಟರ್​ ಪತನದ ದೃಶ್ಯವಾಗಿದೆ.

ನಿನ್ನೆ ನಡೆದಿದ್ದೇನು?

ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್​ಗೆಂದು ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ಬುಧವಾರ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್​ ಪತನಗೊಂಡು ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್​ ಬಿಪಿನ್​ ರಾವತ್​ ನಿಧನಕ್ಕೇ ಇಡೀ ದೇಶವೇ ಕಂಬನಿ ಮಿಡಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net