ಜನ್ಮದಿನದಂದೇ ಮಾಜಿ ಸಚಿವ ಎಸ್. ಆರ್‌. ಮೋರೆ‌ ವಿಧಿವಶ

SR Morey
Published on: 

ಧಾರವಾಡ: ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವ ಎಸ್.ಆರ್‌. ಮೋರೆ‌ (82) ಗುರುವಾರ ಬೆಳಗ್ಗೆ ಎಸ್.ಡಿ‌.ಎಂ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮರಾಠಾ ಸಮಾಜದ ಪ್ರಭಾವಿ ನಾಯಕರಾಗಿದ್ದ ಮೋರೆ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರಿಗೆ ಮೂವರು ಪುತ್ರಿಯರು ಇದ್ದಾರೆ.

ಮೋರೆ ಅವರು 4 ಬಾರಿ ಧಾರವಾಡ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ದಿವಂಗತ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ ಮತ್ತು ಧರ್ಮಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬಂಗಾರಪ್ಪ ಅವಧಿಯಲ್ಲಿ‌ ಸಹಕಾರ ಸಚಿವ ಹಾಗೂ ಧರ್ಮಸಿಂಗ್ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ‌ರು.

ಇಂದು ಮೋರೆ ಅವರ 82ನೇ ಜನ್ಮದಿನ ಆಚರಣೆಯಾಗಬೇಕಿತ್ತು. ಆದರೆ, ಜನ್ಮದಿನದಂದೇ ಮಾಜಿ ಸಚಿವರು ಕೊನೆಯುಸಿರೆಳೆದಿದ್ದಾರೆ. ಸಚಿವರು ಸಾವಿಗೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. (ದಿಗ್ವಿಜಯ ನ್ಯೂಸ್​)