ಒಂದೇ ಸೀರೆಗೆ ಕೊರಳೊಡ್ಡಿದ ಪ್ರೇಮಿಗಳು: ವಾಟ್ಸ್​ಆ್ಯಪ್​ ಸ್ಟೇಟಸ್​ ನೋಡಿ ಬೆಚ್ಚಿಬಿದ್ದ ಸ್ನೇಹಿತರು, ಪಾಲಕರು!

Lovers
Published on

ಹೈದರಾಬಾದ್​: ಒಟ್ಟಿಗೆ ಮದುವೆ ಆಗಿ ಜೀವನ ನಡೆಸಲು ಜಾತಿ ವ್ಯವಸ್ಥೆ ಅಡ್ಡಿಯಾದ ಹಿನ್ನೆಲೆಯಲ್ಲಿ ಯುವಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ನಿರ್ಮಲ್​ ಜಿಲ್ಲೆಯ ಮಮದಾ ಮಂಡಲದಲ್ಲಿ ನಡೆದಿದೆ.

ನಿಶಿತಾ (18) ಮತ್ತು ಹರೀಶ್​ (21) ಮೃತ ದುರ್ದೈವಿಗಳು. ನಿಶಿತಾ ಇತ್ತಿಚೆಗಷ್ಟೇ ಪೊಂಕಲ್​ ಗ್ರಾಮದಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ್ದಳು. ಹರೀಶ್​ ನಿರ್ಮಲ್​ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿ. ಇಬ್ಬರು ಸಹ ಒಂದೇ ಗ್ರಾಮದ ಒಂದೇ ಕಾಲನಿಯವರು. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು.

ಆದರೆ, ಇಬ್ಬರ ಜಾತಿ ಬೇರೆ ಬೇರೆ ಆಗಿರುವುದರಿಂದ ಹಿರಿಯರು ತಮ್ಮ ಮದುವೆ ಒಪ್ಪುವುದಿಲ್ಲ ಅಂದುಕೊಂಡು ಇಬ್ಬರು ಮನೆಯೊಂದರಲ್ಲಿ ಒಂದೇ ಸೀರೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ಈ ಘಟನೆ ನಡೆದಿದೆ.

ನಮ್ಮಿಬ್ಬರನ್ನು ಒಟ್ಟಿಗೆ ಇರಲು ಬಿಡುವುದಿಲ್ಲ. ಹೀಗಾಗಿ ನಾವು ಸಾಯುತ್ತಿದ್ದೇವೆ. ನಮ್ಮನ್ನು ಕ್ಷಮಿಸಿ ಎಂದು ಸಾಯುವ ಮುನ್ನ ಹರೀಶ್​ ತನ್ನ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಹಾಕಿಕೊಂಡಿದ್ದಾರೆ. ಇದು ಸ್ನೇಹಿತರು ಮತ್ತು ಮನೆಯವರಿಗೆ ತಿಳಿದು, ಅವರಿಗಾಗಿ ಹುಡುಕಾಡಿದಾಗ ಮನೆಯಲ್ಲೇ ಇಬ್ಬರ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net