1 ಕೋಟಿ ರೂ. ಮೌಲ್ಯದ ಮರ್ಸಿಡೆಸ್​ ಕಾರಿಗೆ ಬೆಂಕಿಯಿಟ್ಟ ಗಾರೆ ಕೆಲಸದ ಮೇಸ್ತ್ರಿ! ಕಾರಣ ಹೀಗಿದೆ...

Marcides Car
Published on

ನವದೆಹಲಿ: ಕಟ್ಟಡವೊಂದರ ಹೊರಭಾಗದಲ್ಲಿ ಪಾರ್ಕ್​ ಮಾಡಿದ್ದ ದುಬಾರಿ ಬೆಲೆಯ ಮರ್ಸಿಡೆಸ್​ ಕಾರಿಗೆ ಬೆಂಕಿಯಿಟ್ಟ ಗಾರೆ ಕೆಲಸದ ಮೇಸ್ತ್ರಿ ಹಾಗೂ ಟೈಲ್ಸ್​​ ಪೂರೈಕೆದಾರನನ್ನು ನೋಯ್ಡಾ ಪೊಲೀಸರು ಬುಧವಾರ (ಸೆ. 14) ಬಂಧಿಸಿದ್ದಾರೆ.

ಈ ಘಟನೆ ನೋಯ್ಡಾದ ಸೆಕ್ಟರ್​ 45ರಲ್ಲಿ ನಡೆದಿದ್ದು, ಮನೆ ಮಾಲೀಕ ಅಳವಡಿಸಿರುವ ಸಿಸಿಟಿವಿಯಲ್ಲಿ ಕಾರಿಗೆ ಬೆಂಕಿ ಇಡುವ ದೃಶ್ಯ ಸೆರೆಯಾಗಿದೆ. ಆರೋಪಿಯನ್ನು ರಣವೀರ್​ ಎಂದು ಗುರುತಿಸಲಾಗಿದೆ. ಗಾರೆ ಕೆಲಸದ ಮೇಸ್ತ್ರಿ ಹಾಗೂ ಟೈಲ್ಸ್​ ಪೂರೈಕೆದಾರನಾಗಿ ಕೆಲಸ ಮಾಡುತ್ತಿದ್ದ ರಣವೀರ್,​ ಕಾರು ಮಾಲೀಕನ ಮನೆಗೆ ಟೈಲ್ಸ್​ ತಂದು ಅಳವಡಿಸಿದ. ಆದರೆ, ಸ್ವಲ್ಪ ಹಣವನ್ನು ನೀಡಿದ್ದ ಮಾಲೀಕ 2 ಲಕ್ಷ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದ್ದ. ಸಾಕಷ್ಟು ಬಾರಿ ಕೇಳಿದರು ಬಾಕಿ ಹಣ ಕೊಡದೇ ಸತಾಯಿಸಿದ್ದರಿಂದ ರೋಸಿ ಹೋದ ರಣವೀರ್​, ಮನೆ ಮಾಲೀಕನ 1 ಕೋಟಿ ಮೌಲ್ಯದ ಮರ್ಸಿಡೆಸ್​ ಕಾರಿಗೆ ಬೆಂಕಿಯಿಟ್ಟಿದ್ದಾಗಿ ಪೊಲೀಸರ ಬಳಿ ಹೇಳಿದ್ದಾರೆ.

ಹೆಲ್ಮೆಟ್​ ಧರಿಸಿ ಬೈಕ್​ ಸಮೀಪ ನಿಂತಿದ್ದ ರಣವೀರ್​, ಆ ಪ್ರದೇಶದಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು, ಕಾರಿನ ಬಳಿಕ ತೆರೆಳಿ ಕಾರಿನ ಮುಂಭಾಗಕ್ಕೆ ಬೆಂಕಿ ಹಚ್ಚಿ, ಬೈಕ್​ ಏರಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸುಡುವ ದ್ರವವನ್ನು ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾನೆ. ಪೊಲೀಸ್​ ಮೂಲಗಳ ಪ್ರಕಾರ ಈ ಘಟನೆ ಭಾನುವಾರ (ಸೆ.11) ನಡೆದಿರುವುದಾಗಿ ತಿಳಿದುಬಂದಿದೆ. ಆ ಪ್ರದೇಶದಲ್ಲಿದ್ದ ಜನರು ಬೆಂಕಿ ಹೊತ್ತುಕೊಂಡಿರುವ ಕಾರನ್ನು ನೋಡಿ ಮಾಲೀಕರಿಗೆ ಎಚ್ಚರಿಕೆ ನೀಡಿದಾದರೂ ಅಷ್ಟರಲ್ಲಾಗಲೇ ಕಾರಿರ ತುಂಬಾ ಹಾನಿಯಾಗಿತ್ತು.

ಈ ವಿವಾದ ಹೊಸದಲ್ಲ. ಸುಮಾರು ಎರಡ್ಮೂರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. 2019-2020ರಲ್ಲಿ ರಣವೀರ್​, ಮಾಲೀಕನ ಮನೆಯಲ್ಲಿ ತನ್ನ ಮುಂದಾಳತ್ವದಲ್ಲಿ ಕೆಲಸ ಮಾಡಿಸಿದ್ದ. ಅಂದಿನಿಂದಲೂ ಬಾಕಿ ಮೊತ್ತಕ್ಕಾಗಿ ರಣವೀರ್​ ಮಾಲೀಕನ ಮನೆ ಅಲೆದಾಡುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಕಾರಿನ ಮಾಲೀಕರ ಕುಟುಂಬ ಈ ಆರೋಪವನ್ನು ನಿರಾಕರಿಸಿದೆ. ಎರಡು ವರ್ಷಗಳ ಹಿಂದೆ ಮತ್ತೊಬ್ಬ ಮೇಸ್ತ್ರಿಯನ್ನು ನೇಮಿಸಿದ್ದರಿಂದ ಅವರು ಕೋಪಗೊಂಡಿದ್ದಾರೆ ಎಂದು ಆರೋಪಿಸಿದೆ.

ಕಳೆದ 10-12 ವರ್ಷಗಳಿಂದ ರಣವೀರ್ ಅವರ ಬಗ್ಗೆ ನಮಗೆ ತಿಳಿದಿದಿದೆ. ಅವರು ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಕರೊನಾ ಲಾಕ್‌ಡೌನ್ ಸಮಯದಲ್ಲಿ ಹೊಸ ಮನೆಗೆ ಹೋದಾಗ ನಾವು ಎಲ್ಲ ಬಾಕಿಗಳನ್ನು ಪಾವತಿಸಿದ್ದೇವೆ. ನಾವು ಯಾವಾಗಲೂ ಒಂದೇ ದಿನದಲ್ಲಿ ಪಾವತಿಗಳನ್ನು ಮಾಡಿ ವ್ಯವಹಾರ ಮುಗಿಸುತ್ತೇವೆ. ಇದೀಗ ರಣವೀರ್​ ಕೊಡುತ್ತಿರುವ ಹೇಳಿಕೆ ಹಾಸ್ಯಸ್ಪದವಾಗಿದೆ ಎಂದು ಕುಟುಂಬದ ಸದಸ್ಯರಲ್ಲೊಬ್ಬರಾದ ಆಯುಷ್ ಚೌಹಾಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಮ್ಮ ಕುಟುಂಬದಲ್ಲಿ ಮದುವೆ ಇತ್ತು ಮತ್ತು ಕೋವಿಡ್-19 ಸಮಯದಲ್ಲಿ ರಣವೀರ್ ಅವರ ಮನೆಯಲ್ಲಿದ್ದರು. ಈ ವೇಳೆ ನಾವು ಇತರೆ ಕೆಲಸಗಳನ್ನು ಮಾಡಲು ಬೇರೆ ಕೆಲಸಗಾರರನ್ನು ನೇಮಿಸಿಕೊಂಡೆವು. ಇದು ರಣವೀರ್ ಕೋಪಕ್ಕೆ ಕಾರಣವಾಯಿತು ಮತ್ತು ಆತ ಹೊಸ ಕೆಲಸಗಾರನಿಗೆ ಬೆದರಿಕೆ ಹಾಕಿದನು. ಆದರೆ ಆತನ ನಿಜವಾದ ಉದ್ದೇಶಗಳು ನಮಗೆ ತಿಳಿದಿರಲಿಲ್ಲ ಎಂದು ಚೌಹಾಣ್ ಹೇಳಿದರು.

ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net