More

    ಪೊಲೀಸ್ ನೇಮಕಾತಿಗೆ ಸರ್ಜರಿ: ಪರೀಕ್ಷೆ ನಿರ್ವಹಣೆಗೆ ಉನ್ನತ ಸಮಿತಿ ರಚನೆ; ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಪಿಎಸ್​ಐ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದಿಂದ ಎಚ್ಚೆತ್ತಿರುವ ಸರ್ಕಾರ, ಪರೀಕ್ಷಾ ಪದ್ಧತಿಯಲ್ಲೇ ಸಮಗ್ರ ಬದಲಾವಣೆ ತರುವ ಮೂಲಕ ಅಕ್ರಮಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳೇ ಅಕ್ರಮಕ್ಕೆ ಕಾರಣವಾಗಿದ್ದು, ಅಂಥ ಲೋಪಗಳನ್ನು ಬುಡ ಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಚರ್ಚೆಗಳನ್ನು ನಡೆಸಿದೆ. ಅದರ ಫಲವಾಗಿಯೇ ರಾಜ್ಯದಲ್ಲಿ ಮುಂದೆ ನಡೆಯುವ ಎಲ್ಲ ಪೊಲೀಸ್ ನೇಮಕಾತಿಗಳನ್ನು ಇಲಾಖೆಯ ಉನ್ನತ ಮಟ್ಟದ ಸಮಿತಿಯೊಂದರ ಮೂಲಕ ನಡೆಸುವ ಮಹತ್ವದ ತೀರ್ವನಕ್ಕೆ ಸರ್ಕಾರ ಬಂದಿದೆ. ಪೊಲೀಸ್ ಇಲಾಖೆಯಲ್ಲಿ ಈ ಹಿಂದೆ ಯಾವುದೇ ಏಜೆನ್ಸಿಗಳಿಗೆ ನೀಡದೇ ನೇರವಾಗಿಯೇ ಪರೀಕ್ಷೆ ನಡೆಸಿ ನೇಮಕ ಮಾಡಲಾಗುತ್ತಿತ್ತು. ಎಡಿಜಿಪಿ ನೇತೃತ್ವದ ನೇಮಕಾತಿ ವಿಭಾಗ ಪರೀಕ್ಷೆಗಳ ನಿರ್ವಹಣೆ ಮಾಡುತ್ತಿತ್ತು. ಆದರೆ, ಈ ಬಾರಿ ನೇಮಕಾತಿ ವಿಭಾಗದಲ್ಲೇ ಅಕ್ರಮ ನಡೆದು ಸರ್ಕಾರ ಹಾಗೂ ಇಲಾಖೆಗೆ ಕೆಟ್ಟಹೆಸರು ಬರುವಂತಾಯಿತು. ಮುಂದೆ ಇನ್ನೂ ಸಾಕಷ್ಟು ನೇಮಕಗಳು ನಡೆಯಬೇಕಾಗಿರುವುದರಿಂದ ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಕಳಂಕ ಸರಿಯಲ್ಲ ಎಂಬ ಬಗ್ಗೆ ಸಿಎಂ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಚರ್ಚೆ ನಡೆಸಿದ್ದಾರೆ.

    1600 ಪೇದೆಗಳ ನೇಮಕ: ಸರ್ಕಾರ ಈಗ 3064 ಪೊಲೀಸ್ ಪೇದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಆ ಪ್ರಕ್ರಿಯೆ ಮುಗಿದ ಕೂಡಲೇ ತಕ್ಷಣ ಇನ್ನೂ 1600 ಪೇದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಿದೆ. ಕಾನೂನು ಸುವ್ಯವಸ್ಥೆಯನ್ನು ಸಮರ್ಪಕವಾಗಿ ಕಾಪಾಡುವ ಸಲುವಾಗಿ ಇಲಾಖೆಯಲ್ಲಿ ಖಾಲಿ ಹುದ್ದೆಗಳು ಇರದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎನ್ನಲಾಗಿದೆ.

    ಉನ್ನತ ಸಮಿತಿಗೆ ಜವಾಬ್ದಾರಿ: ಪೊಲೀಸ್ ಇಲಾಖೆ ದಕ್ಷ ಅಧಿಕಾರಿಗಳು, ಗೃಹ ಕಾರ್ಯದರ್ಶಿ ಅಥವಾ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ಮಾಡಿ ಅದರ ಮೂಲಕ ವ್ಯವಸ್ಥಿತವಾಗಿ ಪರೀಕ್ಷೆ, ಸಂದರ್ಶನ, ದೈಹಿಕ ಪರೀಕ್ಷೆ ನಡೆಸಿ ಪಾರದರ್ಶಕವಾಗಿ ಪ್ರಕ್ರಿಯೆ ನಡೆಸಬೇಕೆಂದು ನಿರ್ಧರಿಸಲಾಗಿದೆ. ಅಧಿವೇಶನ ಮುಗಿದ ಬಳಿಕ ಈ ಕುರಿತು ಸ್ಪಷ್ಟ ತೀರ್ಮಾನ ಪ್ರಕಟಿಸಲಾಗುತ್ತದೆ.

    450 ಪಿಎಸ್​ಐ ನೇಮಕ ನನೆಗುದಿಗೆ: ಪಿಎಸ್​ಐ ಹುದ್ದೆ ಅಕ್ರಮದ ತನಿಖೆ ಇನ್ನೂ ಮುಗಿಯದ ಕಾರಣ ಹೊಸದಾಗಿ ಮತ್ತಷ್ಟು ಪಿಎಸ್​ಐ ನೇಮಕ ಪ್ರಸ್ತಾಪ ನನೆಗುದಿಗೆ ಬಿದ್ದಿದೆ. ತನಿಖಾ ವರದಿ ಬಂದು ಸರ್ಕಾರ ನಿರ್ದಿಷ್ಟ ತೀರ್ವನಕ್ಕೆ ಬಂದ ನಂತರವೇ ಮತ್ತೆ 450 ಪಿಎಸ್​ಐ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗುತ್ತದೆ ಎನ್ನಲಾಗಿದೆ.

    ಪೊಲೀಸ್ ಇಲಾಖೆಯ ನೇಮಕಾತಿಗಳಲ್ಲಿ ಅಕ್ರಮ ನಡೆಯದಂತೆ ತಡೆಯುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಚರ್ಚೆಗಳನ್ನು ಮಾಡಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಈ ವಿಚಾರದಲ್ಲಿ ಸ್ಪಷ್ಟತೆ ಹೊಂದಿದ್ದಾರೆ. ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಪರೀಕ್ಷೆಗಳನ್ನು ಇಲಾಖೆಯ ಉನ್ನತ ಸಮಿತಿಯಿಂದ ನಡೆಸುವ ಬಗ್ಗೆ ಅಂತಿಮ ತೀರ್ವನಕ್ಕೆ ಬರಲಾಗುತ್ತದೆ.

    | ಆರಗ ಜ್ಞಾನೇಂದ್ರ ಗೃಹ ಸಚಿವ

    ಪರೀಕ್ಷೆ ಸುಧಾರಣೆಗಳೇನು

    • ಒಂದು ಜಿಲ್ಲೆಯ ಅಭ್ಯರ್ಥಿಗಳು ಇನ್ನೊಂದು ಜಿಲ್ಲೆಗೆ ಹೋಗಿ ಪರೀಕ್ಷೆ ಬರೆಯುವುದು
    • ಪರೀಕ್ಷಾ ಕೇಂದ್ರಗಳಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಬಳಸಿಕೊಳ್ಳುವುದು
    • ಪರೀಕ್ಷೆಗಳಿಗೆ ಮೇಲ್ವಿಚಾರಕರಾಗಿ ಶಿಕ್ಷಕರನ್ನು ನೇಮಿಸದೇ ಇರುವುದು
    • ಸಿಸಿ ಕ್ಯಾಮರಾ ಕಡ್ಡಾಯವಾಗಿ ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಇರಲೇಬೇಕು
    • ಬ್ಲ್ಯೂಟೂಥ್ ಬಳಕೆ ಆಗದಂತೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಜಾಮರ್ ಅಳವಡಿಕೆ
    • ಪರೀಕ್ಷೆ ಸಂದರ್ಭದಲ್ಲಿ ಮೊಬೈಲ್ ನೆಟ್​ವರ್ಕ್ ತಡೆ ಹಾಕಲು ಕಂಪನಿಗಳಿಗೆ ಸೂಚನೆ
    • ಭ್ರಷ್ಟ ಅಧಿಕಾರಿಗಳನ್ನು ಪರೀಕ್ಷಾ ವ್ಯವಸ್ಥೆಯಿಂದಲೇ ದೂರವಿಡುವುದು
    • ಡಿಸಿ ಮತ್ತು ಎಸ್​ಪಿಗಳಿಗೆ ಆಯಾ ಜಿಲ್ಲೆಯಲ್ಲಿ ಪರೀಕ್ಷೆ ನಡೆಸುವ ಜವಾಬ್ದಾರಿ
    • ಲೋಪಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆ ಮಾಡುವುದು
    • ಪ್ರಶ್ನೆ ಪತ್ರಿಕೆ ಲೀಕ್ ತಡೆಗೆ ತಂತ್ರಜ್ಞಾನ ಬಳಸಿ ಪ್ರಶ್ನೆ ಪತ್ರಿಕೆ ನೀಡುವುದು

    ಎರಡು ತಿಂಗಳಲ್ಲಿ ತನಿಖೆ ವರದಿ: ಪಿಎಸ್​ಐ ಪರೀಕ್ಷೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ನಡೆದಿರುವ ತನಿಖೆ ಇನ್ನೆರಡು ತಿಂಗಳಲ್ಲಿ ಮುಗಿಯುವ ಸಾಧ್ಯತೆಗಳಿವೆ. ಪರೀಕ್ಷಾ ಅಕ್ರಮಗಳು ದಿನೇದಿನೇ ಬಯಲಿಗೆ ಬರುತ್ತಲೇ ಇವೆ. ಆದ್ದರಿಂದಲೇ ತನಿಖೆ ನಿಧಾನವಾಗುತ್ತಿದೆ. ತನಿಖೆ ಪೂರ್ಣಗೊಳ್ಳದೇ ಪರೀಕ್ಷೆಯ ಬಗ್ಗೆ ಯಾವುದೇ ನಿರ್ಧಾರಕ್ಕೂ ಬರಲಾಗದ ಸ್ಥಿತಿಯಲ್ಲಿ ಸರ್ಕಾರ ಇದೆ.

    ಹಲವು ಸುಧಾರಣೆಗಳು: ಪರೀಕ್ಷೆ ಪ್ರಕ್ರಿಯೆಯಲ್ಲಿ ಕೆಲವೊಂದು ಸುಧಾರಣೆಗಳನ್ನು ತರಲಾಗುತ್ತದೆ. ಬೇರೆ ಬೇರೆ ಪರೀಕ್ಷೆಗಳಲ್ಲಿ ಅಕ್ರಮಗಳಲ್ಲಿ ಭಾಗಿಯಾದವರೇ ಪಿಎಸ್​ಐ ನೇಮಕದಲ್ಲಿಯೂ ಪಾಲುದಾರರಾಗಿದ್ದಾರೆ. ಹಾಗಾಗಿ ಬದಲಾವಣೆ ತರದಿದ್ದರೆ ಪ್ರಾಮಾಣಿಕರಿಗೆ ಸರ್ಕಾರಿ ಹುದ್ದೆಗಳು ಲಭ್ಯವಾಗುವುದಿಲ್ಲವೆಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಸದ್ಯ 3064 ಪೊಲೀಸರ ನೇಮಕಕ್ಕೆ ಅಧಿಸೂಚನೆ ಹೊರಬಿದ್ದಿದ್ದು, ಅದರ ಪರೀಕ್ಷೆಯನ್ನು ಸಹ ಉನ್ನತ ಸಮಿತಿ ಮೂಲಕವೇ ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಮೂಲಗಳು ಹೇಳಿವೆ.

    ನಿರೀಕ್ಷೆ ಹೆಚ್ಚಿಸುತ್ತಿರುವ ‘ವಿಜಯಾನಂದ’ ಚಿತ್ರ; ಡಾ. ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್- ಕ್ಯಾರೆಕ್ಟರ್ ಇಂಟ್ರೋ ರಿಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts