More

    ಚೀನಾ ರಿಯಾಲ್ಟಿ ಪಲ್ಟಿ!; ರಿಯಲ್ ಎಸ್ಟೇಟ್ ಉದ್ಯಮ ಬಿಕ್ಕಟ್ಟಿನಿಂದ ಆರ್ಥಿಕತೆಗೆ ಕುತ್ತು

    ಮನೆಗಳನ್ನು ಖರೀದಿಸಲು ಹಣವನ್ನೇ ನೀಡಬೇಕು ಅಂತಿಲ್ಲ. ಕಲ್ಲಂಗಡಿ, ಕರಬೂಜ, ಪೀಚ್ ಮುಂತಾದ ಹಣ್ಣುಗಳನ್ನು ಕೊಟ್ಟರೂ ಕಟ್ಟಡಗಳು ಮಾರಾಟಕ್ಕೆ ದೊರೆಯುತ್ತವೆ! ನಂಬಲು ಕಷ್ಟವಲ್ಲವೆ? ಆದರೆ, ಜಗತ್ತಿನ ಸೂಪರ್ ಪವರ್ ಆಗಲು ಹೊರಟಿರುವ ಚೀನಾದಲ್ಲಿ ಸದ್ಯಕ್ಕಿದು ವಾಸ್ತವ!!

    ಚೀನಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಯೋಜನೆಗಳನ್ನು ಪೂರ್ಣಗೊಳಿಸಲು ನಗದು ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಆಸ್ತಿ ಮಾರುಕಟ್ಟೆ ಕುಸಿತದಿಂದ ಕಂಗಾಲಾಗಿದ್ದಾರೆ. ಹೀಗಾಗಿ, ಖರೀದಿದಾರರನ್ನು ಸೆಳೆಯಲು ಕೃಷಿ ಉತ್ಪನ್ನಗಳ ಮೂಲಕವೂ ಪಾವತಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಚೀನಾದ ಸರ್ಕಾರಿ ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳೇ ಈ ಸಂಗತಿಯನ್ನು ಬಹಿರಂಗಪಡಿಸಿವೆ.

    ಪೂರ್ವ ಚೀನಾದ ನಾನ್​ಜಿಂಗ್ ನಗರದ ಡೆವಲಪರ್ ಒಬ್ಬರು ಡೌನ್​ಪೇಮೆಂಟ್ ಆಗಿ 1 ಲಕ್ಷ ಯುವಾನ್ ಮೌಲ್ಯದ ಕರಬೂಜ ಹಣ್ಣಿನ ಲೋಡ್​ಗಳನ್ನು ಸ್ಥಳೀಯ ರೈತರಿಂದ ಸ್ವೀಕರಿಸಿದ್ದಾಗಿ ಹೇಳಿದ್ದಾರೆಂದು ಸರ್ಕಾರಿ ವಾರಪತ್ರಿಕೆ ‘ಚೀನಾ ನ್ಯೂಸ್’ ವರದಿ ಮಾಡಿದೆ. ವುಕ್ಸಿ ಪಟ್ಟಣದ ಇನ್ನೊಬ್ಬ ಡೆವಲಪರ್, ಪೀಚ್ ಹಣ್ಣುಗಳನ್ನು ಮುಂಗಡ ಪಾವತಿಯಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದೂ ಪತ್ರಿಕೆ ಹೇಳಿದೆ. ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಪ್ರಮುಖ ಬೆಳ್ಳುಳ್ಳಿ ಉತ್ಪಾದನೆ ಪ್ರದೇಶವಾದ ಕ್ವಿ ಕೌಂಟಿಯಲ್ಲಿ ಮನೆ ಖರೀದಿದಾರರು ಹಣ ಪಾವತಿಗೆ ಬದಲಾಗಿ ತಮ್ಮ ಕೃಷಿ ಉತ್ಪನ್ನವನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಕೃಷಿ ಉತ್ಪನ್ನದ ದರಕ್ಕಿಂತ ಮೂರು ಪಟ್ಟು ಬೆಲೆಯನ್ನು ಡೆವಲಪರ್​ಗಳು ಈ ವಿನಿಮಯದಲ್ಲಿ ನೀಡುತ್ತಿದ್ದಾರೆ.

    ‘ನಾವು ರೈತರಿಗೆ ಪ್ರೀತಿಯಿಂದ ಸಹಾಯ ಮಾಡುತ್ತಿದ್ದೇವೆ. ಅವರು ಮನೆ ಖರೀದಿಸುವುದನ್ನು ಸುಲಭಗೊಳಿಸುತ್ತಿದ್ದೇವೆ. ಬೆಳ್ಳುಳ್ಳಿ ಅಭಿಯಾನ ಪ್ರಾರಂಭಿಸಿದ ನಂತರ ಸುಮಾರು 30 ಆಸ್ತಿಗಳನ್ನು ಮಾರಾಟ ಮಾಡಲಾಗಿದೆ’ ಎಂದು ಕ್ವಿ ಕೌಂಟಿಯಲ್ಲಿನ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಹೇಳಿದೆ. ಚೀನಾದಲ್ಲಿ ಮನೆ ಮಾರಾಟ ಒಂದು ವರ್ಷದಿಂದ ಕುಸಿತದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 30ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿದೆ.

    ಬಿಕ್ಕಟ್ಟಿಗೆ ಕಾರಣ: ಆಸ್ತಿ ಮತ್ತು ಸಂಬಂಧಿತ ಕೈಗಾರಿಕೆಗಳು ಚೀನಾದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಕಾಲು ಭಾಗದಷ್ಟು ಕೊಡುಗೆ ನೀಡುತ್ತವೆ ಎಂದು ಅಂದಾಜಿಸಲಾಗಿದೆ. 1998ರಲ್ಲಿ ಮಾರುಕಟ್ಟೆ ಸುಧಾರಣೆಗಳ ನಂತರ ಈ ವಲಯ ಬೇಡಿಕೆ ಕಂಡುಕೊಳ್ಳತೊಡಗಿತು. ಮಧ್ಯಮ ವರ್ಗವು ಆಸ್ತಿಯನ್ನು ಕುಟುಂಬದ ಪ್ರಮುಖ ಸ್ವತ್ತಾಗಿ ಹಾಗೂ ಸ್ಥಾನಮಾನದ ಸಂಕೇತವಾಗಿ ಕಂಡಿತು. ಬ್ಯಾಂಕ್​ಗಳು ಸಾಧ್ಯವಿದ್ದಷ್ಟು ಪ್ರಮಾಣದಲ್ಲಿ ಹಾಗೂ ಸುಲಭದಲ್ಲಿ ಡೆವಲಪರ್​ಗಳು ಮತ್ತು ಖರೀದಿದಾರರಿಗೆ ಸಾಲ ನೀಡಲು ಮುಂದಾಗಿದ್ದರಿಂದ ಈ ವಲಯಕ್ಕೆ ಉತ್ತೇಜನ ದೊರೆಯಿತು.

    ಪ್ರಾಪರ್ಟಿ ಡೆವಲಪರ್​ಗಳು ಪ್ರವರ್ಧಮಾನಕ್ಕೆ ಬಂದಂತೆ ವಸತಿ ಬೆಲೆಗಳು ಕೂಡ ಗಗನಕ್ಕೇರಿದವು. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಒಟ್ಟಾರೆ ಬ್ಯಾಂಕಿಂಗ್ ಅಡಮಾನಗಳ ಪೈಕಿ ಶೇ. 20ರಷ್ಟನ್ನು ಈ ವಲಯವೇ ಹೊಂದಿದೆ. ಇನ್ನೂ ನಿರ್ವಣಗೊಳ್ಳದಿರುವ ವಸತಿ ಯೋಜನೆಗಳ ಮೇಲೆಯೂ ಖರೀದಿದಾರರು ಸಾಲ ಮರುಪಾವತಿಸುವ ಪರಿಸ್ಥಿತಿ ತಲೆದೋರಿದೆ.

    ಸಾಲದ ಹೊರೆ ಹೊತ್ತಿರುವ ಡೆವಲಪರ್​ಗಳಿಂದ ಆಗುವ ಅಪಾಯದ ಬಗ್ಗೆ ಮೊದಲೇ ಅರಿತಿದ್ದ ಸರ್ಕಾರ ಕಳೆದ ವರ್ಷ ನಿಯಂತ್ರಣ ನೀತಿ ಅನುಸರಿಸತೊಡಗಿತು. ಬಾಕಿ ಉಳಿದಿರುವ ಸಾಲಕ್ಕೆ ಅನುಗುಣವಾಗಿ ಒಟ್ಟು ಸಾಲ ನೀಡುವುದರ ಮೇಲೆ ಮಿತಿಯನ್ನು ಬ್ಯಾಂಕ್​ಗಳ ಮೇಲೆ ಕೇಂದ್ರೀಯ ಬ್ಯಾಂಕ್ ಹೇರಿತು. ಈಗಾಗಲೇ ಸಾಲಗಳನ್ನು ನಿಭಾಯಿಸಲು ಹೆಣಗಾಡುತ್ತಿರುವ ಡೆವಲಪರ್​ಗಳಿಗೆ ಇದು ದೊಡ್ಡ ಪ್ರಮಾಣದಲ್ಲಿ ನಗದು ಕೊರತೆಯನ್ನು ಸೃಷ್ಟಿಸಿತು.

    300 ಶತಕೋಟಿ ಡಾಲರ್​ಗಿಂತ (24,00,000 ಕೋಟಿ ರೂಪಾಯಿ) ಹೆಚ್ಚಿನ ಸಾಲದಲ್ಲಿ ಮುಳುಗಿರುವ ಚೀನಾದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿ ‘ಎವರ್​ಗ್ರಾಂಡ್’ಗೆ ಸಾಲ ಮರುಪಾವತಿ ಸಮಸ್ಯೆ ಸೃಷ್ಟಿಯಾಯಿತು. ಇದಲ್ಲದೆ, ಕೋವಿಡ್ ಬಿಕ್ಕಟ್ಟು ಕೂಡ ಎದುರಾಯಿತು. ಆರ್ಥಿಕ ಅನಿಶ್ಚಿತತೆಯಿಂದಾಗಿ ಅನೇಕರು ಮನೆ ಖರೀದಿಸುವುದರಿಂದ ಹಿಂದೆ ಸರಿಯತೊಡಗಿದರು.

    ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಎವರ್​ಗ್ರಾಂಡ್ ಕಂಪನಿಯ ಶೆನ್​ಜೆನ್ ಪ್ರಧಾನ ಕಚೇರಿಯಲ್ಲಿ ಮನೆ ಖರೀದಿದಾರರು ಮತ್ತು ಗುತ್ತಿಗೆದಾರರು ಪ್ರತಿಭಟನೆ ಕೈಗೊಂಡರು. ಈ ವರ್ಷದ ಜೂನ್​ನಲ್ಲಿ ಈ ಪ್ರತಿಭಟನೆ ಹೊಸ ರೂಪ ಪಡೆದುಕೊಂಡಿತು. ಇನ್ನೂ ಪೂರ್ಣಗೊಳ್ಳದ ಯೋಜನೆಗಳಲ್ಲಿ ಮನೆಗಳನ್ನು ಖರೀದಿಸಿದ ಜನರು ನಿರ್ಮಾಣ ಪುನರಾರಂಭವಾಗುವವರೆಗೆ ಹಣ ಪಾವತಿ ಮಾಡುವುದನ್ನು ನಿಲ್ಲಿಸುವುದಾಗಿ ಘೊಷಿಸಿದರು. ಈ ಬಹಿಷ್ಕಾರವು ಒಂದು ತಿಂಗಳೊಳಗೆ ಚೀನಾದಾದ್ಯಂತ 50 ನಗರಗಳಲ್ಲಿ 300ಕ್ಕೂ ಹೆಚ್ಚು ಯೋಜನೆಗಳಲ್ಲಿ ಹರಡಿತು.

    ಈ ಅಡಮಾನ ಬಹಿಷ್ಕಾರ ವ್ಯಾಪಕ ಪ್ರಮಾಣದಲ್ಲಿ ವ್ಯಾಪಿಸಿದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂಬ ಆತಂಕ ತಲೆದೋರಿದೆ. ಎವರ್​ಗ್ರಾಂಡ್ ಮತ್ತು ಸುನಾಕ್​ನಂತಹ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳು ಪಾವತಿಗಳನ್ನು ಮಾಡಲು ಹೆಣಗಾಡುತ್ತಿದ್ದು, ದಿವಾಳಿಯ ಅಂಚಿಗೆ ತಲುಪಿವೆ.

    6.5 ಕೋಟಿ ಮನೆ ಖಾಲಿ

    1990ರ ದಶಕದ ಅಂತ್ಯದಲ್ಲಿ ಚೀನಾ ಮುಕ್ತ ಮಾರುಕಟ್ಟೆಗೆ ತೆರೆದುಕೊಳ್ಳಲು ಪ್ರಾರಂಭಿಸಿದಾಗಿನಿಂದ ಆಸ್ತಿ ಬೆಲೆ ಏರಿಕೆಯಿಂದಾಗಿ ಹತ್ತಾರು ಕೋಟಿ ಚೀನಿ ಹೂಡಿಕೆದಾರರು ಸಾಕಷ್ಟು ಶ್ರೀಮಂತರಾದರು. 2000 ಮತ್ತು 2018 ರ ನಡುವೆ, ಆಸ್ತಿಯ ಸರಾಸರಿ ಬೆಲೆ ನಾಲ್ಕು ಪಟ್ಟು ಹೆಚ್ಚಾಯಿತು. ರಾಜಧಾನಿ ಬೀಜಿಂಗ್​ನಲ್ಲಿ ಅಪಾರ್ಟ್ ಮೆಂಟ್ ಬೆಲೆಗಳು ಸರಾಸರಿ ಆದಾಯಕ್ಕಿಂತ 55 ಪಟ್ಟು ತಲುಪಿವೆ. ಚೀನಾದ ಆಸ್ತಿ ಮಾರುಕಟ್ಟೆಯು ಈಗಾಗಲೇ ಅಮೆರಿಕದ ವಸತಿ ಮಾರುಕಟ್ಟೆಯ ಎರಡು ಪಟ್ಟು ದೊಡ್ಡದಾಗಿದೆ. ಇನ್ನೊಂದು ವ್ಯತ್ಯಾಸವೆಂದರೆ, ಚೀನಿ ಆಸ್ತಿ ಮಾಲೀಕರು ಹೆಚ್ಚಿನ ಬಾಡಿಗೆ ನಿರೀಕ್ಷಿಸುವುದಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಭೂಮಾಲೀಕರು 10ರಿಂದ 20 ವರ್ಷಗಳ ಅವಧಿಯಲ್ಲಿ ಆಸ್ತಿಯ ಮೌಲ್ಯವನ್ನು ಬಾಡಿಗೆ ರೂಪದಲ್ಲಿ ಮರಳಿ ಪಡೆಯಲು ಅಪೇೕಕ್ಷಿಸುತ್ತಾರೆ. ಚೀನಾದಲ್ಲಿ ಇದು 50ರಿಂದ 100 ವರ್ಷಗಳಷ್ಟಾಗುತ್ತದೆ. ಹೀಗಾಗಿ, ಬಾಡಿಗೆ ಆದಾಯದ ಕೊರತೆ ಇದೆ. ಚೀನಾದಲ್ಲಿ ಸದ್ಯ ಶೇ. 20ರಷ್ಟು (6.5 ಕೋಟಿ) ಮನೆಗಳು ಖಾಲಿ ಇವೆ.

    ಏಷ್ಯಾದ ಶ್ರೀಮಂತ ಮಹಿಳೆಯ ಅರ್ಧ ಆಸ್ತಿ ಖೋತಾ

    ಚೀನಾದ ರಿಯಲ್ ಎಸ್ಟೇಟ್ ವಲಯವು ನಗದು ಕೊರತೆಯಿಂದ ತತ್ತರಿಸಿದ ಪರಿಣಾಮವಾಗಿ ಏಷ್ಯಾದ ಅತ್ಯಂತ ಶ್ರೀಮಂತ ಮಹಿಳೆ ಕಳೆದೊಂದು ವರ್ಷದಲ್ಲಿ ಅರ್ಧಕ್ಕಿಂತ ಹೆಚ್ಚು ಸಂಪತ್ತನ್ನು ಕಳೆದುಕೊಂಡಿದ್ದಾರೆ. ಚೀನಾದ ರಿಯಲ್ ಎಸ್ಟೇಟ್ ದೈತ್ಯ ಕಂಪನಿ ‘ಕಂಟ್ರಿ ಗಾರ್ಡನ್’ನಲ್ಲಿ ಬಹುಪಾಲು ಷೇರು ಹೊಂದಿರುವ ಯಾಂಗ್ ಹುಯಾನ್ ಅವರ ನಿವ್ವಳ ಆಸ್ತಿ ಮೌಲ್ಯವು ಒಂದು ವರ್ಷದ ಹಿಂದೆ 23.7 ಶತಕೋಟಿ ಡಾಲರ್ (1,89,600 ಕೋಟಿ ರೂಪಾಯಿ) ಇತ್ತು. ಈಗ ಅದು 11.3 ಶತಕೋಟಿ ಡಾಲರ್​ಗೆ (90,400 ಕೋಟಿ ರೂಪಾಯಿ) ತಲುಪಿ, ಶೇ. 52ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಕಂಟ್ರಿ ಗಾರ್ಡನ್ ಸಂಸ್ಥಾಪಕ ಯಾಂಗ್ ಗುವೊಕಿಯಾಂಗ್ ಅವರು 2005ರಲ್ಲಿ ತಮ್ಮಪಾಲಿನ ಷೇರುಗಳನ್ನು ಪುತ್ರಿ ಯಾಂಗ್ ಹುಯಾನ್​ಗೆ ವರ್ಗಾಯಿಸಿದ್ದರು.

    ಜಾಗತಿಕ ಪರಿಣಾಮ ಸಾಧ್ಯತೆ

    ಚೀನಾ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆಸ್ತಿ ಬಿಕ್ಕಟ್ಟು ಚೀನಾದ ಹಣಕಾಸು ವ್ಯವಸ್ಥೆಗೆ ಹರಡಿದರೆ, ಅದರ ಆಘಾತವು ಅದರ ಗಡಿಯನ್ನು ಮೀರಿ ಪಸರಿಸುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಸಾಲ ಮರುಪಾವತಿಯಾಗದಿರುವುದು ಉಲ್ಬಣಗೊಂಡರೆ, ಗಂಭೀರವಾದ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳು ಉಂಟಾಗಬಹುದು ಎಂದು ಫಿಚ್ ರೇಟಿಂಗ್ಸ್ ಸಂಸ್ಥೆ ಹೇಳಿದೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಕೂಡ, ಚೀನಾವು ಇಲ್ಲಿಯವರೆಗೆ ಕುಸಿತವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರೂ, ಹದಗೆಡುತ್ತಿರುವ ಆಸ್ತಿ ಬಿಕ್ಕಟ್ಟು ದೇಶದ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರಬಹುದು ಎಂದು ಎಚ್ಚರಿಸಿತ್ತು.

    5 ಟ್ರಿಲಿಯನ್ ಡಾಲರ್ ಸಾಲ: ಚೀನಾದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳ ಒಟ್ಟು ಸಂಯೋಜಿತ ಸಾಲವು ಈಗ 5 ಟ್ರಿಲಿಯನ್ ಡಾಲರ್​ಗಿಂತಲೂ (400 ಲಕ್ಷ ಕೋಟಿ ರೂ.) ಹೆಚ್ಚು ಎಂದು ಅಂದಾಜಿಸಲಾಗಿದೆ. ಚೀನಾದ 30 ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳ ಪೈಕಿ 20 ಕಂಪನಿಗಳು ಸರ್ಕಾರ ನಿಗದಿಪಡಿಸಿದ ಸಾಲ ಮರುಪಾವತಿ ಮಾನದಂಡಗಳನ್ನು ಉಲ್ಲಂಘಿಸಿವೆ.

    ನಿರೀಕ್ಷೆ ಹೆಚ್ಚಿಸುತ್ತಿರುವ ‘ವಿಜಯಾನಂದ’ ಚಿತ್ರ; ಡಾ. ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್- ಕ್ಯಾರೆಕ್ಟರ್ ಇಂಟ್ರೋ ರಿಲೀಸ್

    ಲವ್ ಜಿಹಾದ್​ ಪ್ರಕರಣ: ಪ್ರೀತಿಸಿದವನನ್ನೇ ಮದ್ವೆ ಆಗಲು ಹೊರಟ ಯುವತಿ, ತನ್ನ ಒಪ್ಪಿಗೆ ಇದೆ ಎಂದ ತಾಯಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts