ಹೆದ್ದಾರಿ ಪಕ್ಕದ ಟ್ರಾನ್ಸ್​ಫಾರ್ಮರ್​ಗೆ ಕಾರು ಡಿಕ್ಕಿ: ಶಾಸಕರ ಪುತ್ರ, ಸೋದರಳಿಯನ ಸ್ಥಿತಿ ಗಂಭೀರ

Car
Published on

ವಿಜಯವಾಡ: ಹೆದ್ದಾರಿಯ ಪಕ್ಕದಲ್ಲಿ ಅಳವಡಿಸಿದ್ದ ಟ್ರಾನ್ಸ್​ಫಾರ್ಮರ್​ಗೆ ಕಾರು ಡಿಕ್ಕಿಯಾಗಿ ಆಂಧ್ರ ಪ್ರದೇಶದ ವೈಸಿಪಿ ಪಕ್ಷದ ಶಾಸಕರ ಪುತ್ರ ಮತ್ತು ಸೋದರಳಿಯ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರದ ಪೂರ್ವ ಗೋದಾವರಿಯ ಪೊಲಾವರಂ ವಲಯದ ಹಳೇ ಇಂಜರಮ್​ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 216ರಲ್ಲಿ ಮಂಗಳವಾರ (ಮಾ.1) ರಾತ್ರಿ ನಡೆದಿದೆ.

ಶಾಸಕ ಪೊನ್ನಾಡ ವೆಂಕಟ ಸತೀಶ್​ ಕುಮಾರ್​ ಎಂಬುವರ ಹಿರಿಯ ಪುತ್ರ ಸುಮಂತ್​ ಮತ್ತು ಸೋದರಳಿಯ ಲೋಕೇಶ್​, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದಲ್ಲೇ ಇದ್ದ ಟ್ರಾನ್ಸ್​ಫಾರ್ಮರ್​ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಹೆದ್ದಾರಿ ಮೊಬೈಲ್​ ವಾಹನ ಗಾಯಾಳುಗಳನ್ನು ತಕ್ಷಣ ಯಾನಮ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಕಾಕಿನಾಡ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಶಾಸಕರ ಸೋದರಳಿಯ ಲೋಕೇಶ್​ಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಅಪಘಾತಕ್ಕೆ ಕಾರಣ ಏನೆಂಬುದು ತಿಳಿದುಬರಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net