ಇಡೀ ದಿನ ಒಂದೇ ಕೋಣೆಯಲ್ಲಿ ಆತನೊಂದಿಗೆ ಇರಬೇಕಿತ್ತು: ಮಾಜಿ ಪತಿಯ ಕರಾಳ ಮುಖ ಬಿಚ್ಚಿಟ್ಟ ಪೂನಂ ಪಾಂಡೆ

Poonam
Published on

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ನಡೆಸಿಕೊಡುತ್ತಿರುವ "ಲಾಕಪ್" ಹೆಸರಿನ ರಿಯಾಲಿಟಿ ಶೋ ಫೆ. 27ರಿಂದ ಆರಂಭವಾಗಿದ್ದು, ಮೂರು ದಿನಗಳು ಕಳೆದಿವೆ. ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳನ್ನು ಲಾಕಪ್​ನಲ್ಲಿ 72 ದಿನಗಳ ಕಾಲ ಬಂಧಿಸಿಡುವುದೇ ಈ ಶೋ ತಿರುಳಾಗಿದೆ. ಈ ಶೋ ಅನ್ನು ಎಕ್ತಾ ಕಪೂರ್​ ನಿರ್ಮಾಣ ಮಾಡುತ್ತಿದ್ದು, ಆಲ್ಟ್​ ಬಾಲಾಜಿ ಮತ್ತು ಎಂಎಕ್ಷ್​ ಪ್ಲೇಯರ್​ನಲ್ಲಿ 24X7 ಪ್ರಸಾರವಾಗಲಿದೆ.

ಈ ಶೋನಲ್ಲಿ ಕೇವಲ ವಿವಾದಿತ ಸೆಲೆಬ್ರಿಟಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮ ನಡೆಸಿಕೊಡುವ ಕಂಗನಾ ಕೂಡ ವಿವಾದಗಳಿಂದ ಹೊರತಾಗಿಲ್ಲ. ಕಾರ್ಯಕ್ರಮ ಆರಂಭವಾಗಿ ಎರಡೇ ದಿನದಲ್ಲಿ ಲಾಕಪ್​ ಹೆಚ್ಚು ಸದ್ದು ಮಾಡುತ್ತಿದೆ. ಇದೇ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಮಾಡಲ್​ ಕಂ ನಟಿ ಪೂನಂ ಪಾಂಡೆ ತಮ್ಮ ವೈವಾಹಿಕ ಸಂಬಂಧದ ಬಗ್ಗೆ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಸಹ ಸ್ಪರ್ಧಿಗಳಾದ ಕಾರನ್ವೀರ್ ಬೋಹ್ರಾ ಮತ್ತು ಪಾಯಲ್ ರೋಹಟಗಿ ಜತೆ ಮಾತನಾಡುವಾಗ ತಮ್ಮ ಮಾಜಿ ಪತಿ ಸ್ಯಾಮ್​ ಬಾಂಬೆ ಬಗ್ಗೆ ಪೂನಂ ಬೇಸರ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಆತನನ್ನು ದ್ವೇಷಿಸುವುದಿಲ್ಲ ಎಂದು ಹೇಳಿದ್ದಾರೆ.

ನಮ್ಮ ದೊಡ್ಡ ಮನೆಯಲ್ಲಿ ನಾಲ್ಕು ಅಂತಸ್ತುಗಳಿವೆ. ಆದರೆ, ಸ್ಯಾಮ್​ ನನ್ನನ್ನು ಬೇರೊಂದು ಕೋಣೆಯಲ್ಲಿ ಉಳಿಯಲು ಬಿಡುತ್ತಿರಲಿಲ್ಲ. ಬದಲಾಗಿ ತಾನಿದ್ದ ಕೋಣೆಯಲ್ಲಿ ಉಳಿಯುವಂತೆ ಬಲವಂತ ಮಾಡುತ್ತಿದ್ದ. ನನ್ನ ಮನೆಯ ಒಳಗಡೆಯೇ ಫೋನ್​ ಉಪಯೋಗಿಸಲು ಬಿಡುತ್ತಿರಲಿಲ್ಲ ಎಂದು ಮಾಜಿ ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮಾಜಿ ಪತಿಯ ಮತ್ತೊಂದು ಮುಖವನ್ನು ಅನಾವರಣ ಮಾಡಿರುವ ಪೂನಂ, ನನ್ನ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ. ಅದರಲ್ಲೂ ತಲೆಯ ಒಂದೇ ಭಾಗಕ್ಕೆ ಹೆಚ್ಚು ಥಳಿಸುತ್ತಿದ್ದ. ಇದರಿಂದ ನನಗೆ ಮೆದುಳಿನ ರಕ್ತಸ್ರಾವ ಆಗಿದೆ. ಬೆಳಗ್ಗೆ 10 ಗಂಟೆಗೆ ಕುಡಿಯಲು ಆರಂಭಿಸಿದರೆ, ಮಧ್ಯರಾತ್ರಿಯವರೆಗೂ ಕುಡಿಯುವುದನ್ನು ನಿಲ್ಲಿಸುತ್ತಿರಲಿಲ್ಲ ಎಂದು ಮಾಜಿ ಪತಿಯ ಜತೆ ಕಳೆದ ಕರಾಳ ಕ್ಷಣಗಳನ್ನು ಪೂನಂ ಮೆಲಕು ಹಾಕಿದ್ದಾರೆ.

ಬಹುಕಾಲದ ಗೆಳೆಯ ಮತ್ತು ನಿರ್ಮಾಪಕ ಸ್ಯಾಮ್​ ಬಾಂಬೆ ಜತೆ 2020ರ ಸೆಪ್ಟೆಂಬರ್​ನಲ್ಲಿ ಪೂನಂ ಪಾಂಡೆ ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನಿಂದ ಹಲ್ಲೆಗೊಳಗಾಗಿ ಸಾಕಷ್ಟು ಬಾರಿ ಪೂನಂ ಕೋರ್ಟ್​ ಮೆಟ್ಟಿಲೇರಿದ್ದಾರೆ. 2021ರ ನವೆಂಬರ್​ನಲ್ಲಿ ಪೂನಂ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಸ್ಯಾಮ್​ನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net