ಯುಗಾದಿ ಆಚರಿಸುವ ಖುಷಿಯಲ್ಲಿ ತವರಿಗೆ ಹೊರಟ ಕುಟುಂಬಕ್ಕೆ ಕಾದಿತ್ತು ಭೀಕರ ಸಾವು: ಮಗ ಅನಾಥ!

Accident 1
Published on

ಆಲಂಪುರ್​: ಕುಟುಂಬದ ಜತೆ ಯುಗಾದಿ ಹಬ್ಬ ಆಚರಿಸಲೆಂದು ಖುಷಿ ಖುಷಿಯಾಗಿಯೇ ಊರಿನ ಕಡೆ ಪ್ರಯಾಣ ಬೆಳೆಸಿದ ಒಂದೇ ಕುಟುಂಬದ ನಾಲ್ವರಲ್ಲಿ ಮೂವರು ದುರಂತ ಸಾವಿಗೀಡಾಗಿರುವ ಘಟನೆ ತೆಲಂಗಾಣದ ಆಲಂಪುರದಲ್ಲಿ ನಡೆದಿದೆ.

ಬೊಲೆರೋ ಕಾರಿನಲ್ಲಿ ಕುಟುಂಬ ಸಮೇತರಾಗಿ ತವರಿಗೆ ತೆರಳುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಟ್ರಕ್​ ಓವರ್​ಟೇಕ್​ ಮಾಡಲು ಹೋಗಿ ಡಿವೈಡರ್​ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟರೆ, ಮೂವರಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆ ಜೊಗುಲಂಬಾ ಗಾಡ್ವಾಲಾ ಜಿಲ್ಲೆಯ ಇಟಿಕಲ ವಲಯದಲ್ಲಿ ನಡೆದಿದೆ.

ಮೃತರನ್ನು ಮುರಳಿಮೋಹನ್​ ರೆಡ್ಡಿ (45), ಪತ್ನಿ ಸುಜಾತಾ (40) ಮತ್ತು ಮಗಳು ನೇಹಾ ರೆಡ್ಡಿ (12) ಎಂದು ಗುರುತಿಸಲಾಗಿದೆ. ಮಗ ಸಾಯಿತೇಜರೆಡ್ಡಿ ಬದುಕುಳಿದಿದ್ದಾನೆ. ಮೃತರು ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಪುಲಿವೆಂದುಲಾ ಮಂಡಲದ ಎರ್ರಪಲ್ಲಾ ಮೂಲದವರು. ಮುರಳಿಮೋಹನ್​ ಮೂಲತಃ ಉದ್ಯಮಿಯಾಗಿದ್ದ ಮುರಳಿಮೋಹನ್​, ಕೆಲವು ವರ್ಷಗಳಿಂದ ಹೈದರಾಬಾದ್​ನ ಕೋಕಟಪಲ್ಲಿಯಲ್ಲಿ ನೆಲೆಸಿದ್ದರು.

ಯುಗಾದಿ ಹಬ್ಬಕ್ಕೆಂದು ತವರಿಗೆ ತೆರಳಲು ಇಡೀ ಕುಟುಂಬ ಭಾನುವಾರ ಬೆಳಗ್ಗೆ ಮನೆ ಬಿಟ್ಟಿದ್ದರು. ಜೊಗುಲಂಬಾ ಗಾಡ್ವಾಲಾ ಜಿಲ್ಲೆಯ ಇಟಿಕಲ ವಲಯದಲ್ಲಿ ಬರುತ್ತಿದ್ದಂತೆ ಲಾರಿಯನ್ನು ಓವರ್​ಟೇಕ್​ ಮಾಡಲು ಹೋಗಿ ಡಿವೈಡರ್​ಗೆ ಡಿಕ್ಕಿ ಹೊಡೆದು ಕಾರು ಉರುಳಿಬಿದ್ದು, ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಬೇರೆ ವಾಹನಗಳಿಗೂ ಡಿಕ್ಕಿಯಾಗಿದ್ದು, 7 ಮಂದಿ ಗಾಯಗೊಂಡಿದ್ದಾರೆ.

ಮುರಳಿ ಮೋಹನ್​ ರೆಡ್ಡಿಯನ್ನು ಆಂಬುಲೆನ್ಸ್​ ಮೂಲಕ ಕರ್ನೂಲ್​ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅಸುನೀಗಿದರೆ, ಪತಿ ಸುಜಾತ ಮತ್ತು ಮಗಳು ನೇಹಾರೆಡ್ಡಿ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಮಗ ಸಾಯಿತೇಜರೆಡ್ಡಿ ಮತ್ತು ಕಾರಿನಲ್ಲಿದ್ದ ಸುನೀಲ್​ ಮತ್ತು ರಾಜು ಎಂಬುವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ತಂದೆ, ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡು ಸಾಯಿತೇಜರೆಡ್ಡಿ ಅನಾಥವಾಗಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net