

ಧೆಂಕನಲ್: ಒಡಿಶಾದ ಗಾಡಸಿಲಾ ಪಟ್ಟಣದ ಉಸ್ತುವಾರಿ, ಧೆಂಕನಲ್ ಜಿಲ್ಲೆಯ ರೆವಿನ್ಯೂ ಇನ್ಸ್ಪೆಕ್ಟರ್ ಒಬ್ಬರು ತಮ್ಮ ಕಚೇರಿಯಲ್ಲಿ ಮಹಿಳೆಯೊಬ್ಬರ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಅವರನ್ನು ಅಮಾನತಿನಲ್ಲಿ ಇಡಲಾಗಿದೆ.
ಅಮಾನತಾದ ಅಧಿಕಾರಿಯನ್ನು ರಂಜನ್ ಪಾಣಿಗ್ರಹಿ ಎಂದು ಗುರುತಿಸಲಾಗಿದೆ. ಧೆಂಕನಕಲ್ ಜಿಲ್ಲಾಧಿಕಾರಿ ಭೂಮೇಶ್ ಚಂದ್ರ ಬೆಹೆರಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹೆಚ್ಚುವರಿ ರೆವಿನ್ಯೂ ಇನ್ಸ್ಪೆಕ್ಟರ್ ಆಗಿದ್ದ ಪಾಣಿಗ್ರಹಿ ಅವರನ್ನು ಕೆಲವು ತಿಂಗಳ ಹಿಂದೆ ಗಾಡಸಿಲಾ ಸರ್ಕಲ್ ಕಚೇರಿಯ ಉಸ್ತುವರಿಯಾಗಿ ನೇಮಕ ಮಾಡಲಾಗಿತ್ತು. ಇದೀಗ ವೈರಲ್ ಆಗಿರುವ ಅವರ ವಿಡಿಯೋದಲ್ಲಿ, ಪಾಣಿಗ್ರಹಿ ಅವರ ಕಚೇರಿಯಲ್ಲಿ ಖಾಲಿ ಮದ್ಯದ ಬಾಟೆಲ್ಗಳಿದ್ದು, ಹೊರಗಿನವರು ಸಹ ಕಚೇರಿಯಲ್ಲಿ ಮಲಗಿರುವ ದೃಶ್ಯವಿದೆ. ಅದರಲ್ಲೂ ಪಾಣಿಗ್ರಹಿ, ಮಹಿಳೆಯೊಬ್ಬಳ ಜತೆ ಕಚೇರಿಯಲ್ಲಿಯೇ ಸಂಧಾನ ಸ್ಥಿತಿಯಲ್ಲಿರುವ ದೃಶ್ಯವು ಸೆರೆಯಾಗಿದೆ.
ವೈರಲ್ ವಿಡಿಯೋ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಪಾಣಿಗ್ರಹಿ ಅವರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಅಲ್ಲದೆ, ಘಟನೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಒಡಪಾದ ತಹಸೀಲ್ದಾರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ತನಿಖಾ ವರದಿ ಬಂದ ಬಳಿಕ ವರದಿ ಆಧರಿಸಿ ಮತ್ತೊಮ್ಮೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)