ಮಾಜಿ ಪ್ರಿಯಕರನಿಗೆ ಸತ್ಯ, ಬೆತ್ತಲೆ ಮತ್ತು ಸುಳ್ಳಿನ ತತ್ವದ ಮೂಲಕ ತಿರುಗೇಟು ನೀಡಿದ ದೀಪ್ತಿ ಸುನೈನಾ!

Deepti
Published on

ಹೈದರಾಬಾದ್​: ಶಾನು ಅಲಿಯಾಸ್​ ಷಣ್ಮುಖ​ ಜಸ್ವಂತ್​ ಹಾಗೂ ದೀಪ್ತಿ ಸುನೈನಾ ತೆಲುಗು ಯೂಟ್ಯೂಬ್​ ಸರ್ಕಲ್​ನಲ್ಲಿ ಫೇಮಸ್ ಆಗಿರುವ ಮುದ್ದಾದ ಜೋಡಿಗಳು. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದು ಜಗಜ್ಜಾಹೀರಾಗಿತ್ತು. ಅದನ್ನು ಸ್ವತಃ ಷಣ್ಮುಖ್​ ಹಾಗೂ ದೀಪ್ತಿ ಕೂಡ ಹೇಳಿಕೊಂಡಿದ್ದರು. ಆದರೆ, ಬಿಗ್​ಬಾಸ್​ ಸೀಸನ್​ 5 ಇಬ್ಬರ ಪ್ರೀತಿಗೆ ಹುಳಿ ಹಿಂಡಿದ್ದು, ದೀಪ್ತಿ ತಮ್ಮ ಪ್ರೀತಿಗೆ ಅಧಿಕೃತವಾಗಿ ಬ್ರೇಕಪ್ ಹೇಳಿರುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ.

ಶಾನು ಮೇಲೆ ದೀಪ್ತಿಗೆ ತೀವ್ರ ಅಸಮಾಧಾನ ಇರುವುದು ಆಕೆಯ ನಡೆಯಿಂದಲೇ ಗೊತ್ತಾಗುತ್ತದೆ. ಈಗಾಗಲೇ ಶಾನು ಅನ್ನು ಇನ್​ಸ್ಟಾಗ್ರಾಂನಿಂದ ಅನ್​​ಫಾಲೋ ಮಾಡಿದ್ದಾರೆ. ಆದರೂ, ಶಾನು ಮಾಡಿದ ಮೋಸವನ್ನು ಮರೆಯದ ದೀಪ್ತಿ, ಇದೀಗ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಮಾಡಿದ್ದ ಟ್ವೀಟ್​ ಅನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಶಾನುಗೆ ತಿರುಗೇಟು ನೀಡಿದ್ದಾರೆ.

"ಇಂದು ಜನರು ಸತ್ಯಕ್ಕಿಂತ ಹೆಚ್ಚು ಸುಳ್ಳುಗಳಿಂದಲೇ ಆರಾಮಾಗಿದ್ದಾರೆ. ಏಕೆಂದರೆ, ಸತ್ಯ ಅವರನ್ನು ಬೆತ್ತಲೆಗೊಳಿಸಿದರೆ, ಸುಳ್ಳು ಅದನ್ನು ಮರೆ ಮಾಡುತ್ತದೆ" ಎಂಬ ಆರ್​ಜಿವಿ ಟ್ವೀಟ್ ಶೇರ್​ ಮಾಡುವ​ ಮೂಲಕ ಶಾನುಗೆ ಪರೋಕ್ಷವಾಗಿ ಸಂದೇಶವನ್ನು ದೀಪ್ತಿ ರವಾನಿಸಿದ್ದಾರೆ.

ಪ್ರೇಮಿಗಳ ನಡುವೆ ಏನಾಯಿತು?

ಶಾನು ಮತ್ತು ದೀಪ್ತಿ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಲ್ಲಿ ಶಾನು ಕ್ಯಾಪ್ಟನ್​ ಆದ ನಂತರ ನೆಡೆದ ಎಪಿಸೋಡ್​ನಲ್ಲಿ ಪ್ರತಿಸ್ಪರ್ಧಿ ಸಿರಿ ಅವರು ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಮಾತನಾಡುತ್ತಿರುವಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ತುಂಬಾ ಸಲುಗೆ ಇರುವಂತೆ ತೋರುತ್ತಿತ್ತು. ಇದನ್ನು ನೋಡಿದ ದೀಪ್ತಿ ತುಂಬಾ ಕೋಪಗೊಂಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಶಾನು ಮತ್ತು ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಹೀಗಾಗಿ ದೀಪ್ತಿ ತನ್ನ ಇನ್​ಸ್ಟಾಗ್ರಾಂ ಫಾಲೋವರ್ಸ್​ ಲೀಸ್ಟ್​ನಿಂದ ಶಾನು ಅನ್ನು ಅನ್​​ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿತ್ತು. ಬಿಗ್​ಬಾಸ್​ನಿಂದ ಹೊರಬಂದ ನಂತರವೂ ಶಾನು ಮತ್ತು ದೀಪ್ತಿ ಅಂತರ ಕಾಯ್ದುಕೊಂಡಿದ್ದರು. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಸೃಷ್ಟಿಯಾಗಿತ್ತು. ಇದೀಗ ದೀಪ್ತಿ ಅಧಿಕೃತವಾಗಿ ಲವ್​ ಬ್ರೇಕಪ್​ ಮಾಡಿಕೊಳ್ಳುವ ಮೂಲಕ ಅನುಮಾನವನ್ನು ನಿಜವಾಗಿಸಿದ್ದಾರೆ.

ಇತ್ತ ಸಿರಿಗೂ ಮೊದಲೇ ಬಾಯ್​ಫ್ರೆಂಡ್​ ಇದ್ದಾನೆ. ಆತನ ಹೆಸರು ಶ್ರೀಹಾನ್​. ಇದೀಗ ಆತ ತನ್ನ ಮೊಬೈಲ್​ನಲ್ಲಿದ್ದ ಸಿರಿ ಫೋಟೋಗಳನ್ನೆಲ್ಲ ಡಿಲೀಟ್​ ಮಾಡಿದ್ದಾನೆಂದು ತಿಳಿದುಬಂದಿದೆ. ಶಾನು ಜತೆಗಿನ ಸಿರಿ ಸಂಬಂಧದಿಂದ ಅಸಮಾಧಾನಗೊಂಡಿರುವ ಶ್ರೀಹಾನ್​ ಆಕೆಯೊಂದಿಗೆ ಮಾತು ಬಿಟ್ಟಿದ್ದಾರೆ. ಅಲ್ಲದೆ, ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದೆ. ಒಟ್ಟಾರೆ, ಬಿಗ್​ಬಾಸ್​ ಶೋ ಮುಗಿಸಿಕೊಂಡು ಬಂದ ಮೇಲೆ ಇಬ್ಬರ ಪ್ರೀತಿಯಲ್ಲಿ ಬಿರುಗಾಳಿ ಎದ್ದಿದ್ದು, ಒಂದು ಪ್ರೀತಿ ಬ್ರೇಕ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net