

ಹೈದರಾಬಾದ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವಿವಾದಗಳ ಕೇಂದ್ರ ಬಿಂದು ಎಂಬುದು ಗೊತ್ತಿರುವ ವಿಚಾರ. ಸದಾ ವಿವಾದಗಳನ್ನೇ ಹುಟ್ಟುಹಾಕುವ ಮೂಲಕ ಸುದ್ದಿಯಾಗುವುದೇ ಇವರ ಖಯಾಲಿಯಾಗಿದೆ. ಈ ಹಿಂದೆ ಸಮಂತಾ-ನಾಗಚೈತನ್ಯ ಡಿವೋರ್ಸ್ ಕುರಿತು ಮಾತನಾಡುವ ಮೂಲಕ ಜಾಲತಾಣದಲ್ಲಿ ಚರ್ಚೆಯ ಅಲೆ ಎಬ್ಬಿಸಿದ್ದ ಆರ್ಜಿವಿ ಇದೀಗ ಧನುಷ್-ಐಶ್ವರ್ಯಾ ಡಿವೋರ್ಸ್ ಬಗ್ಗೆ ಟ್ವೀಟ್ ಮಾಡುವ ಮೂಲಕ ಮತ್ತೊಂದು ಸುತ್ತಿನ ಚರ್ಚೆಗೆ ಅಡಿಪಾಯ ಹಾಕಿದ್ದಾರೆ.
ಮದುವೆಯ ಅಪಾಯಗಳ ಬಗ್ಗೆ ಯುವ ಜನಾಂಗವನ್ನು ಎಚ್ಚರಿಸಲು ಸ್ಟಾರ್ ಡಿವೋರ್ಸ್ಗಳು ಒಳ್ಳೆಯ ಟ್ರೆಂಡ್ ಸೆಟ್ಟರ್ಗಳಾಗಿವೆ. ಮದುವೆಗಿಂತ ವೇಗವಾಗಿ ಯಾವುದು ಕೂಡ ಪ್ರೀತಿಯನ್ನು ಕೊಲ್ಲುವುದಿಲ್ಲ. ಮದುವೆ ಎಂಬ ಜೈಲು ಸೇರುವ ಬದಲು ಅದು ಇರುವವರೆಗೂ ಪ್ರೀತಿಸಿ ನಂತರ ಮುಂದುವರಿಯುವುದೇ ಸಂತೋಷದ ಗುಟ್ಟು. ಮದುವೆಯಲ್ಲಿರುವ ಪ್ರೀತಿಯು ಅವರು ಆಚರಿಸುವ ದಿನಗಳಿಗಿಂತ ಕಡಿಮೆ ದಿನಗಳವರೆಗೆ ಇರುತ್ತದೆ, ಅಂದರೆ 3 ರಿಂದ 5 ದಿನಗಳು ಮಾತ್ರ ಎನ್ನುವ ಮೂಲಕ ಆರ್ಜಿವಿ ಮದುವೆ ಬಗ್ಗೆ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.
ಮತ್ತಷ್ಟು ಟ್ವೀಟ್ ಮಾಡಿರುವ ಆರ್ಜಿವಿ, ಬುದ್ಧಿವಂತ ಜನರು ಮಾತ್ರ ಪ್ರೀತಿ ಮಾಡುತ್ತಾರೆ. ಆದರೆ, ಮೂರ್ಖರು ಮಾತ್ರ ಮದುವೆ ಆಗುತ್ತಾರೆ. ವಿಚ್ಛೇದನ ಅಂತಾ ಬಂದಾಗ ಅದನ್ನು ಸಂಗೀತದೊಂದಿಗೆ ಭರ್ಜರಿಯಾಗಿ ಆಚರಿಸಬೇಕು. ಏಕೆಂದರೆ ಸ್ವತಂತ್ರ ಪಡೆಯುತ್ತೇವೆ ಎಂದಿರುವ ಆರ್ಜಿವಿ, ಗಂಡು-ಹೆಣ್ಣಿನಲ್ಲಿರುವ ಕೆಲವು ಕನಿಷ್ಠ ಗುಣಗಳನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲಿ ವಿವಾಹಗಳು ಸದ್ದಿಲ್ಲದೆ ನಡೆಯಬೇಕು ಎಂದಿದ್ದಾರೆ.
ಕೊನೆಯ ಟ್ವೀಟ್ನಲ್ಲಿ ಮದುವೆ ಎಂಬ ಕಲ್ಪನೆಯನ್ನೇ ಅಣುಕಿಸಿರುವ ಆರ್ಜಿವಿ, ಅತೃಪ್ತಿ ಮತ್ತು ದುಃಖದ ನಿರಂತರ ಚಕ್ರವನ್ನು ಪ್ರಚಾರ ಮಾಡುವಲ್ಲಿ ನಮ್ಮ ಅಸಹ್ಯ ಪೂರ್ವಜರು ಸಮಾಜದ ಮೇಲೆ ಹೇರಿದ ಅತ್ಯಂತ ದುಷ್ಟ ಸಂಪ್ರದಾಯವೆಂದರೆ ಅದು ಮದುವೆ ಎಂದು ಹೇಳಿದ್ದಾರೆ. ಆರ್ಜಿವಿ ಟ್ವೀಟ್ ನೋಡಿದ ಅನೇಕರು ಬೆಕ್ಕಸ ಬೆರಗಾಗಿದ್ದಾರೆ.
ಕಾಲಿವುಡ್ನ ಸ್ಟಾರ್ ದಂಪತಿಗಳೆಂದೇ ಖ್ಯಾತರಾಗಿದ್ದ ನಟ ಧನುಷ್ ಮತ್ತು ಸೂಪರ್ಸ್ಟಾರ್ ರಜಿನಿಕಾಂತ್ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ ನಿನ್ನೆ (ಜ.17) ಗುಡ್ ಬೈ ಹೇಳಿದ್ದಾರೆ. ಟ್ವೀಟ್ ಮೂಲಕ ಡಿವೋರ್ಸ್ ಖಚಿತಪಡಿಸಿರುವ ಧನುಷ್, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್ ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದಾರೆ. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದಾರೆ.
ಐಶ್ವರ್ಯಾ ಮತ್ತು ಧನುಷ್ 2004ರ ನವೆಂಬರ್ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್ ನಡೆಸಿದ್ದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್)