

ವಾಷಿಂಗ್ಟನ್: ಮನುಕಲಕ್ಕೆ ಅಪಾಯಕಾರಿ ಎನಿಸುವ ಮಾಹಿತಿಯೊಂದು ಹೊರಬಿದ್ದಿದೆ. 2050ರ ವೇಳೆಗೆ ಯುನೈಟೆಡ್ ಸ್ಟೇಟ್ಸ್ ಕರಾವಳಿ ಪ್ರದೇಶದ ಉದ್ದಕ್ಕೂ ಸಮುದ್ರದ ಮಟ್ಟ 10 ರಿಂದ 12 ಇಂಚು (25 ರಿಂದ 30 ಸೆಂಟಿ ಮೀಟರ್) ಹೆಚ್ಚಾಗಲಿದೆ ಎಂಬ ಆತಂಕಕಾರಿ ವರದಿಯನ್ನು ನ್ಯೂ ಇಂಟರ್ ಏಜೆನ್ಸಿ ಬಹಿರಂಗಪಡಿಸಿದೆ.
ಸಮುದ್ರ ಮಟ್ಟ ಏರಿಕೆಯಿಂದಾಗಿ ಮುಂದಿನ 30 ವರ್ಷಗಳಲ್ಲಿ ಕರಾವಳಿ ಪ್ರದೇಶದಲ್ಲಿ ಪ್ರವಾಹಗಳು ಹೆಚ್ಚಾಗಲಿವೆ ಎಂದು ನಾಸಾ (NASA), ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇತರ ಫೆಡರಲ್ ಏಜೆನ್ಸಿಗಳನ್ನು ಒಳಗೊಂಡಿರುವ ಅಂತರ-ಸಂಸ್ಥೆಯ ಸಮುದ್ರ ಮಟ್ಟ ಏರಿಕೆಯ ಕಾರ್ಯಪಡೆಯ ವರದಿಯಲ್ಲಿ ಉಲ್ಲೇಖವಾಗಿದೆ.
ಮುಂದಿನ 30 ವರ್ಷಗಳಲ್ಲಿ ಉಂಟಾಗುವ ಸಮುದ್ರ ಮಟ್ಟದ ಏರಿಕೆಯು ಕಳೆದ 100 ವರ್ಷಗಳಲ್ಲಿ ಉಂಟಾಗಿರುವ ಸಮುದ್ರ ಮಟ್ಟದ ಏರಿಕೆಗೆ ಸಮವಾಗಿರಲಿದೆ ಎಂದು ಇಂಟರ್ ಏಜೆನ್ಸಿ ವರದಿಯಲ್ಲಿರುವುದನ್ನು ಕ್ಸಿನುವಾ ಸುದ್ದಿ ಸಂಸ್ಥೆ ತಿಳಿಸಿದೆ.
ಹಿಮನದಿಗಳು ಮತ್ತು ಮಂಜುಗಡ್ಡೆಗಳ ಕರಗುವಿಕೆ ಹಾಗೂ ಸಮುದ್ರ, ಭೂಮಿ ಮತ್ತು ಮಂಜುಗಡ್ಡೆಗಳ ನಡುವಿನ ಸಂಕೀರ್ಣ ಪ್ರಕ್ರಿಯೆಗಳು ಸಮುದ್ರ ಮಟ್ಟದ ಏರುವಿಕೆಗೆ ಯಾವ ರೀತಿ ಕೊಡುಗೆ ನೀಡುತ್ತಿದೆ ಎಂಬ ಸುಧಾರಿತ ತಿಳುವಳಿಕೆಯ ರೇಖಾ ಚಿತ್ರದ ಮೂಲಕ ಕಾರ್ಯಪಡೆಯು ಸಮುದ್ರ ಮಟ್ಟ ಏರಿಕೆಯ ಯೋಜನೆಯನ್ನು ಅಭಿವೃದ್ಧಿಪಡಿಸಿದೆ.
ಇನ್ನು ಈ ವರದಿಯು ಹಿಂದಿನ ಅಧ್ಯಯನಗಳನ್ನು ಬೆಂಬಲಿಸುತ್ತದೆ. ಸಮುದ್ರ ಮಟ್ಟಗಳು ಅಪಾಯಕಾರಿ ದರದಲ್ಲಿ ಏರುತ್ತಲೇ ಇದ್ದು, ಪ್ರಪಂಚದಾದ್ಯಂತದ ಸಮುದಾಯಗಳಿಗೆ ಅಪಾಯವನ್ನು ಉಂಟುಮಾಡುತ್ತದೆ ಎಂದು ನಾಸಾದ ನಿರ್ವಾಹಕ ಬಿಲ್ ನೆಲ್ಸನ್ ತಿಳಿಸಿದರು. ಅಲ್ಲದೆ, ವಿಜ್ಞಾನವು ನಿರ್ವಿವಾದವಾಗಿದ್ದು, ಸದ್ಯದ ಹವಾಮಾನ ಬಿಕ್ಕಟ್ಟನ್ನು ತಗ್ಗಿಸಲು ತುರ್ತು ಕ್ರಮದ ಅಗತ್ಯವಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)