

ಕಾಬುಲ್: ಪಂಜ್ಶೀರ್ ಪ್ರಾಂತ್ಯವನ್ನು ಗೆದ್ದು ಸಂಪೂರ್ಣ ಹಿಡಿತ ಸಾಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ತಾಲಿಬಾನ್ ವಾದವನ್ನು ಅಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ನಾಯಕ ಅಹ್ಮದ್ ಮಸೂದ್ ತಳ್ಳಿಹಾಕಿದ್ದು, ನಾವಿನ್ನು ಸೋತಿಲ್ಲ, ನಾವು ಅಜೇಯರೆಂದು ಹೇಳಿಕೊಂಡಿದ್ದಾರೆ.
ತಾಲಿಬಾನ್ ಮತ್ತು ಪಂಜ್ಶೀರ್ ನಡುವಿನ ಸಂಘರ್ಷದಲ್ಲಿ ರೆಸಿಸ್ಟೆನ್ಸ್ ಫ್ರಂಟ್ನ ವಕ್ತಾರ ಫಾಹಿಮ್ ದಾಶ್ತಿ ಮೃತಪಟ್ಟ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮಸೂದ್, ನಮ್ಮ ದೇಹದಲ್ಲಿ ರಕ್ತದ ಕೊನೆಯ ಹನಿ ಇರುವವರೆಗೂ ನಾವು ತಾಲಿಬಾನ್ ವಿರುದ್ಧ ಹೋರಾಡುತ್ತೇವೆ ಎಂದಿದ್ದಾರೆ.
ತಮ್ಮ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಮಸೂದ್, ನಾವು ಎಲ್ಲಿಯೂ ಓಡಿ ಹೋಗಿಲ್ಲ. ಇನ್ನು ಪಂಜ್ಶೀರ್ನಲ್ಲೇ ಇದೀವಿ ಮತ್ತು ತಾಲಿಬಾನ್ ವಿರುದ್ಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ತಾಲಿಬಾನಿಗಳ ವಿರುದ್ಧ ಹೋರಾಡುವಂತೆ ಅಫ್ಘಾನಿಸ್ತಾನ ಜನತೆಗೆ ಮಸೂದ್ ಕರೆ ನೀಡಿದ್ದಾರೆ.
ಕುತಂತ್ರಿ ಪಾಕ್
ಪಾಕ್ ವಿರುದ್ಧ ಹರಿಹಾಯ್ದಿರುವ ಮಸೂದ್, ತಾಲಿಬಾನ್ ಜತೆ ಸೇರಿಕೊಂಡು ಪಾಕ್ ಪಂಜ್ಶೀರ್ ಮೇಲೆ ದಾಳಿ ಮಾಡಿದೆ. ಆದರೂ ಅಂತಾರಾಷ್ಟ್ರೀಯ ಸಮುದಾಯ ಸುಮ್ಮನೇ ನೋಡಿಕೊಂಡು ಕುಳಿತಿದೆ. ನನ್ನ ಕುಟುಂಬದ ಸದಸ್ಯರನ್ನು ಕೊಲ್ಲಲು ತಾಲಿಬಾನ್ಗೆ ಪಾಕಿಸ್ತಾನ ನೆರವು ನೀಡುತ್ತಿದೆ ಎಂದಿದ್ದಾರೆ.
ತಾಲಿಬಾನ್ ಜತೆ ಪಾಕ್ ಕೈಜೋಡಿಸಿರುವುದು ಎಲ್ಲ ದೇಶಗಳಿಗೂ ತಿಳಿದಿದೆ. ಆದರೂ ಎಲ್ಲರೂ ಸುಮ್ಮನಿದ್ದಾರೆ. ಪಾಕಿಸ್ತಾನ ಪಂಜಶೀರ್ ಮೇಲೆ ನೇರವಾಗಿ ದಾಳಿ ಮಾಡಿತು. ಇದನ್ನು ನೋಡಿಯೂ ಅಂತಾರಾಷ್ಟ್ರೀಯ ಸಮುದಾಯ ಏನು ಮಾಡುತ್ತಿಲ್ಲ ಎಂದು ಅಹ್ಮದ್ ಮಸೂದ್ ಅಸಮಾಧಾನ ಹೊರಹಾಕಿದರು.
ತಾಲಿಬಾನ್ ಬದಲಾಗಿಲ್ಲ. ಅದು ಬದಲಾಗುವುದೂ ಇಲ್ಲ. ಬದಲಾಗಿ "ಹೆಚ್ಚು ದಬ್ಬಾಳಿಕೆ, ನಿರ್ದಯ, ಉಗ್ರಗಾಮಿ ಮತ್ತು ಹಿಂಸಾತ್ಮಕ"ವಾಗುತ್ತದೆ ಎಂದು ಮಸೂದ್ ಹೇಳಿದರು. (ಏಜೆನ್ಸೀಸ್)