

ಎರ್ನಾಕುಲಂ: ಕೇರಳದ ಎರ್ನಾಕುಲಂ ಜಿಲ್ಲೆ ಚೆರೈನಲ್ಲಿ ಮೀನಾಗಾರರ ಬಲೆಗೆ ವಿರಾಳತಿ ವಿರಳ ಮೀನೊಂದು ಬಿದ್ದಿದೆ. ಇದೊಂದು ಅಪರೂಪದ ಜಾತಿಯ ಮೀನಾಗಿದ್ದು, ಅದನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ.
ನೋಡಲು ಜೆಲ್ಲಿಫಿಶ್ನಂತೆಯೇ ಈ ಮೀನು ಕಾಣುತ್ತದೆ. ಕಿತ್ತಳೆ ಬಣ್ಣದಲ್ಲಿದ್ದು, ಅದರ ಕೆಂಪು ಬಣ್ಣದ ರೆಕ್ಕೆಗಳ ಮೇಲೆ ಬಿಳಿ ಪಟ್ಟೆಗಳಿವೆ. ಸಮತಟ್ಟಾದ ದೇಹವನ್ನು ಹೊಂದಿದ್ದು, ಈ ಮೀನು 8 ಇಂಚು ಉದ್ದ ಮತ್ತು 200 ಗ್ರಾಂ ತೂಕವಿದೆ.
ಶುಕ್ರವಾರ ಮೀನು ಹಿಡಿಯಲು ಕುಜುಪ್ಪೊಳ್ಳಿಯಿಂದ ಮೀನುಗಾರರು ಸಣ್ಣ ದೋಣಿಯಲ್ಲಿ ಹೋದಾಗ ಚೆರೈನಲ್ಲಿ ಈ ಮೀನು ಬಲೆಗೆ ಬಿದ್ದಿದೆ. ಅಂದಹಾಗೆ ಚೆರೈ, ವೈಪಿನ್ ದ್ವೀಪದ ಉತ್ತರ ಭಾಗದಲ್ಲಿರುವ ಚಿಕ್ಕ ಪಟ್ಟಣ. ಈ ಪಟ್ಟಣವು ಕೊಚ್ಚಿನ್, ಉತ್ತರ ಪ್ರಾವೂರ್ ಮತ್ತು ಕೊಡುಂಗಲ್ಲೂರಿಗೆ ಸಂಪರ್ಕಿಸುತ್ತದೆ. ಚೆರೈ ಎರ್ನಾಕುಲಂ ಜಿಲ್ಲೆಗೆ ಸೇರಿದೆ.
ಇದುವರೆಗೂ ಇಂತಹ ಮೀನನ್ನು ನಾವು ನೋಡಿಯೇ ಇಲ್ಲ ಎಂದು ಮೀನುಗಾರರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಬಲೆಗೆ ಬಿದ್ದ ಮೀನನ್ನು ಒಂದು ಬಕೆಟ್ನಲ್ಲಿ ಸಮುದ್ರದ ನೀರು ತುಂಬಿಸಿಕೊಂಡು ಅದರೊಳಗೆ ಇಟ್ಟು ಜೋಪಾನವಾಗಿ ತಂದಿದ್ದಾರೆ. (ಏಜೆನ್ಸೀಸ್)