ಸೋನಿಯಾ ಗಾಂಧಿ ಆಪ್ತ ಸಹಾಯಕ 71 ವರ್ಷದ ಮಾಧವನ್​ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು!

Delhi police
Published on

ನವದೆಹಲಿ: ಕಾಂಗ್ರೆಸ್​ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕ ಪಿ.ಪಿ. ಮಾಧವನ್​ ವಿರುದ್ಧ ದೆಹಲಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಮಾತ್ರವಲ್ಲದೆ, ಬೆದರಿಕೆ ಆರೋಪವು ಕೇಳಿಬಂದಿದೆ.

ಸಂತ್ರಸ್ತ ಮಹಿಳೆಯು ದೆಹಲಿ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, 71 ವರ್ಷದ ಆರೋಪಿ ಮಾಧವನ್​, ಮದುವೆ ಹೆಸರಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮಹಿಳೆಯ ಬಳಿ ಮೊದಲು ತನ್ನ ಪ್ರೀತಿಯನ್ನು ಹೇಳಿಕೊಂಡ ಮಾಧವನ್​ ಆಕೆಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಲುಗೆಯಲ್ಲಿ ಆಕೆಯ ಮೇಲೆ ಇಷ್ಟವಿಲ್ಲದಿದ್ದರೂ ಬಲವಂತದ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯ ಪತಿ, ಕಾಂಗ್ರೆಸ್ ಕಚೇರಿಯಲ್ಲಿ ಹೋರ್ಡಿಂಗ್‌ಗಳನ್ನು ಹಾಕುವುದು ಮತ್ತು ಇತರ ಕೆಲಸಗಳನ್ನು ಮಾಡುತ್ತಿದ್ದರು. 2020ರಲ್ಲಿ ಅವರು ನಿಧನರಾದರು. ನನ್ನ ಪತಿ 2020ರ ಫೆಬ್ರವರಿಯಲ್ಲಿ ನಿಧರಾದ ಬಳಿಕ ನಾನು ಕೆಲಸಕ್ಕಾಗಿ ಹುಡುಕಾಡುತ್ತಿದೆ. ಈ ಸಂದರ್ಭದಲ್ಲಿ ಮಾಧವನ್​ ಪರಿಚಯವಾಯಿತು. ಮೊದಲು ಸಂದರ್ಶನಕ್ಕೆ ಕರೆದರು. ಬಳಿಕ ವಿಡಿಯೋ ಕಾಲ್​ ಮತ್ತು ವಾಟ್ಸ್​ಆ್ಯಪ್​ ಚಾಟ್​ ಮಾಡುವುದು ಆರಂಭವಾಯಿತು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.

ನನ್ನನ್ನು ಉತ್ತಮ್​ ನಗರ​ ಮೆಟ್ರೋ ನಿಲ್ದಾಣದ ಬಳಿ ಇರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಕಾರಿನ ಒಳಗಡೆ ನನ್ನನ್ನು ಬಲವಂತ ಮಾಡಿದರು. 2022ರ ಫೆಬ್ರವರಿ ತಿಂಗಳಿನಲ್ಲಿ ನನ್ನನ್ನು ಸುಂದರ್​ ನಗರದಲ್ಲಿರುವ​ ಫ್ಲ್ಯಾಟ್​ಗೆ ಕರೆದೊಯ್ದು ನನ್ನ ಒಪ್ಪಿಗೆ ಇಲ್ಲದೆಯೇ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿ, ಅತ್ಯಾಚಾರ ನಡೆಸಿದರು ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ.

ಆರೋಪಿ ಮಾಧವನ್ ಅವರು ಆರೋಪದ ಬಗ್ಗೆ ಅವರ ಆಪ್ತ ಸಹಾಯಕರು ಪ್ರತಿಕ್ರಿಯೆ ನೀಡಿದ್ದು, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳು ಪಿತೂರಿ ಮತ್ತು ಆಧಾರರಹಿತ ಎಂದು ಅಲ್ಲಗೆಳೆದರು. ಹಿರಿಯ ರಾಜಕೀಯ ನಾಯಕರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ 71 ವರ್ಷದ ವ್ಯಕ್ತಿಯ ಮೇಲೆ ಆರೋಪಗಳನ್ನು ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net