ಸಾವಿನ ದವಡೆಯಲ್ಲಿ ಸಿಲುಕ್ಕಿದ್ದ ಯುವನಟಿಯ ಪ್ರಾಣ ಉಳಿಸಿದ ನೆಟ್ಟಿಗರು! ಸ್ವಲ್ಪ ತಡವಾಗಿದ್ರೂ ಜೀವ ಹೋಗ್ತಿತ್ತು

Bengali Actress
Published on

ಕೋಲ್ಕತಾ: ಸಾಲು ಸಾಲು ನಟಿಯರು ಹಾಗೂ ಮಾಡೆಲ್​ಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ನೋಡಿದರೆ, ಪಶ್ಚಿಮ ಬಂಗಾಳದ ಮನರಂಜನಾ ಲೋಕದಲ್ಲಿ ಏನು ನಡೆಯುತ್ತಿದೆ ಎಂಬ ಪ್ರಶ್ನೆ ಕಾಡುತ್ತದೆ. ಆದರೆ, ಉತ್ತರ ಮಾತ್ರ ನಿಗೂಢವಾಗಿಯೇ ಇದೆ.

ಈಗಾಗಲೇ ಬಂಗಾಳಿ ಯುವನಟಿ ಪಲ್ಲವಿ ದೇ, ನಟಿ, ರೂಪದರ್ಶಿ ಬಿದಿಶಾ ಡಿ. ಮಂಜುದಾರ್, ಪ್ರಖ್ಯಾತ ಮಾಡೆಲ್​ ಮಂಜುಶಾ ನಿಯೋಗಿ ಹಾಗೂ ಮಾಡೆಲ್​ ಸರಸ್ವತಿ ದಾಸ್​ (18) ಮೃತದೇಹ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಂಗಾಳದ ಗ್ಲಾಮರಸ್​ ಜಗತ್ತು ತಲ್ಲಣಗೊಂಡಿದೆ. ಇದೀಗ ಮತ್ತೊಬ್ಬ ಕಿರುತೆರೆ ನಟಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ನೆಟ್ಟಿಗರ ಸಮಯ ಪ್ರಜ್ಞೆಯಿಂದ ನಟಿಯ ಜೀವ ಉಳಿದಿದೆ.

ಯುವನಟಿ ರೈ ದೆಬ್ಲಿನಾ ದೇ ಆತ್ಮಹತ್ಯೆ ಯತ್ನಿಸಿದ್ದಾರೆ. ಈಕೆ ಬೆಂಗಾಳಿ ಕಿರುತೆರೆ ಲೋಕ ಮತ್ತು ವೆಬ್​ಸರಣಿಗಳಲ್ಲಿ ನಟಿಸಿದ್ದಾರೆ. ನೆಟ್ಟಿಗರು ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಡೆಬ್ಲಿನಾ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ.

ವಿವರಣೆಗೆ ಬರುವುದಾದರೆ, ಆತ್ಮಹತ್ಯೆಗೆ ಯತ್ನಿಸುವ ಮುನ್ನ ದೆಬ್ಲಿನಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಮಾಡಿದ್ದರು. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನನ್ನ ಪಾಲಕರು ಹಾಗೂ ಕುಟುಂಬವೇ ಕಾರಣ ಎಂದು ಬರೆದು, ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿ, ದುಡುಕಿನ ನಿರ್ಧಾರ ತೆಗೆದುಕೊಂಡಿದ್ದರು.

ದೆಬ್ಲಿನಾರ ಫೇಸ್​ಬುಕ್​ ಪೋಸ್ಟ್​ ನೋಡಿದ ನೆಟ್ಟಿಗರು ತಕ್ಷಣ ಪೊಲೀಸರಿಗೆ ಸ್ಕ್ರೀನ್​ ಶಾಟ್​ ಮೂಲಕ ಮಾಹಿತಿ ನೀಡಿ ಎಚ್ಚರಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪೊಲೀಸರು ತಕ್ಷಣ ದೆಬ್ಲಿನಾ ಅವರ ನಿವಾಸಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಂಡಿರುವ ದೆಬ್ಲಿನಾ, ಕುಟುಂಬದ ಮೇಲೆ ಆರೋಪ ಮಾಡಿ ತಾನು ಮಾಡಿದ್ದ ಫೇಸ್​ಬುಕ್​ ಪೋಸ್ಟ್​​ ಅನ್ನು ಡಿಲೀಟ್​ ಮಾಡಿದ್ದಾರೆ. ಸದ್ಯ ಆಕೆ ಗುಣವಾಗಿದ್ದಾಳೆ. ತುಂಬಾ ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡಿದ್ದಳು ಎಂದು ಕುಟುಂಬ ಹೇಳಿದೆ. ಆತ್ಮಹತ್ಯೆ ಯತ್ನ ಸಂಬಂಧ ಪ್ರಕರಣ ದಾಖಲಾಗಿದೆ. ಆದರೆ, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದಳು ಎಂಬುದಕ್ಕೆ ಕಾರಣ ಇನ್ನು ತಿಳಿದುಬಂದಿಲ್ಲ. ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net