More

    ಉಚಿತ ವಿದ್ಯುತ್ ಬದಲು ಡಿಬಿಟಿ ವ್ಯವಸ್ಥೆ: ಸರ್ಕಾರಕ್ಕೆ ಗುರುಚರಣ್ ಸಮಿತಿ ಶಿಫಾರಸು, ಎಸ್ಕಾಂಗಳ ಪುನಶ್ಚೇತನಕ್ಕೆ ಸಲಹೆ

    ಬೆಂಗಳೂರು: ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಪ್ರಮುಖಪಾತ್ರ ವಹಿಸುತ್ತಿರುವ ಎಸ್ಕಾಂಗಳ ಪರಿಸ್ಥಿತಿ ದಿನದಿನಕ್ಕೂ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಪುನಶ್ಚೇತನಕ್ಕಾಗಿ ಸಲಹೆ ನೀಡಲು ಸರ್ಕಾರ ರಚಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಗುರುಚರಣ್ ನೇತೃತ್ವದ ಸಮಿತಿ ಪರಿಸ್ಥಿತಿ ಅಧ್ಯಯನ ನಡೆಸಿ, ಸೋಮವಾರ ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸಿದೆ. ಎಸ್ಕಾಂಗಳ ಆದಾಯ ಹೆಚ್ಚಳಕ್ಕೆ ಇರುವ ದಾರಿಗಳು ಮತ್ತು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ.

    ಟಾರಿಫ್, ತೆರಿಗೆ ಸಂಗ್ರಹ, ವಿತರಣಾ ವ್ಯವಸ್ಥೆ, ಹಣ ಕ್ರೋಡೀಕರಣದ ದಾರಿಗಳ ಕುರಿತು ಅವರು ವರದಿಯಲ್ಲಿ ತಿಳಿಸಿದ್ದು, ಕೆಲವು ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾದ ಅನಿವಾರ್ಯತೆ ಇರುವುದನ್ನು ಒತ್ತಿ ಹೇಳಿದ್ದಾರೆ. ಮುಖ್ಯವಾಗಿ ರೈತರ ಐಪಿ ಸೆಟ್​ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಇಲ್ಲಿ ಡಿಬಿಟಿ ವ್ಯವಸ್ಥೆ ತನ್ನಿ.

    ಪಾರದರ್ಶಕ, ಹೊಣೆಗಾರಿಕೆಯನ್ನು ಸುಧಾರಿಸಿ, ವಿಳಂಬವನ್ನು ಕಡಿಮೆ ಮಾಡಿ ರೈತರಿಗೆ ಪರಿಣಾಮಕಾರಿಯಾಗಿ ಸಬ್ಸಿಡಿ ತಲುಪಿಸುವ ವ್ಯವಸ್ಥೆ ಮಾಡಿದರೆ ನಷ್ಟ ಕಡಿಮೆಯಾಗಲಿದೆ. ನೈಜ ಬಳಕೆದಾರರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಕೃಷಿ ಫೀಡರ್​ಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲು ಸಲಹೆ ನೀಡಲಾಗಿದೆ ಮತ್ತು ಪಿಎಂ ಕುಸುಮ್ (ಪ್ರಧಾನಮಂತ್ರಿ ಕಿಸಾನ್ ಊರ್ಜ ಸುರಕ್ಷಾ ಉತ್ಥಾನ ಮಹಾಭಿಯಾನ) ಯೋಜನೆ ಜಾರಿ ಮಾಡುವಂತೆ ಹೇಳಲಾಗಿದೆ.

    ವರದಿ ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವರದಿಯ ಶಿಫಾರಸುಗಳ ಅನುಷ್ಠಾನದ ಸಂದರ್ಭದಲ್ಲಿ ಅವರ ಸಲಹೆ, ಮಾರ್ಗದರ್ಶನ ಪಡೆಯಲು ಅನುವಾಗುವಂತೆ ಸಮಿತಿ ಅವಧಿಯನ್ನು ವಿಸ್ತರಿಸುವಂತೆ ಸೂಚಿಸಿದರು.

    ಈ ವರದಿಯಲ್ಲಿ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳ ವಸ್ತುಸ್ಥಿತಿ, ಸುಧಾರಣೆಗಳ ಅಗತ್ಯತೆ ಮತ್ತು ಅನುಷ್ಠಾನ ಯೋಜನೆಯ ಬಗ್ಗೆ ಸವಿಸ್ಥಾರ ವಿವರಣೆಗಳನ್ನು ನೀಡುವುದರೊಂದಿಗೆ ರಚನಾತ್ಮಕ ಬದಲಾವಣೆ, ಮಧ್ಯಮ ಮತ್ತು ದೀರ್ಘಾವಧಿಯ ಸುಧಾರಣೆ, ಈ ಸುಧಾರಣೆಗಳ ಸಕಾಲಿಕ ಅನುಷ್ಠಾನದ ಬಗ್ಗೆ ನಿಖರವಾಗಿ ತಿಳಿಸಲಾಗಿದೆ.

    ಇಂಧನ ಸಚಿವ ವಿ.ಸುನಿಲ್ ಕುಮಾರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯಕ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಎಚ್ಚರಿಕೆ: ಎಚ್​ಟಿ ಸೇಲ್ಸ್​ನ ಟ್ರೆಂಡ್ ಸರ್ಕಾರಕ್ಕೆ ಮತ್ತು ಎಸ್ಕಾಂಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಇದೇ ಟ್ರೆಂಡ್ ಮುಂದುವರಿದು ಸರ್ಕಾರ ಮಧ್ಯ ಪ್ರವೇಶ ಮಾಡದೇ ಹೋದಲ್ಲಿ ಎಸ್ಕಾಂಗಳು ಭವಿಷ್ಯದಲ್ಲಿ ಎಚ್​ಟಿ ಗ್ರಾಹಕರನ್ನು ಕಳೆದುಕೊಳ್ಳಲಿದೆ. ಹೀಗಾದರೆ ಎಸ್ಕಾಂಗಳ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ವರದಿಯಲ್ಲಿ ಸೂಚ್ಯವಾಗಿ ಎಚ್ಚರಿಸಲಾಗಿದೆ.

    ಉಚಿತ ವಿದ್ಯುತ್ ಬದಲು ಡಿಬಿಟಿ ವ್ಯವಸ್ಥೆ: ಸರ್ಕಾರಕ್ಕೆ ಗುರುಚರಣ್ ಸಮಿತಿ ಶಿಫಾರಸು, ಎಸ್ಕಾಂಗಳ ಪುನಶ್ಚೇತನಕ್ಕೆ ಸಲಹೆಮುಖ್ಯಾಂಶ

    • ಟಾರಿಫ್ ವಿಚಾರದಲ್ಲಿ ಒಂದಷ್ಟು ಕ್ರಮಕೈಗೊಳ್ಳಬೇಕೆಂದು ಹೇಳಲಾಗಿದೆ. ಟಾರಿಫ್​ನಲ್ಲಿ ಸೇವಾ ಶುಲ್ಕವನ್ನು ಪರಿಚಯಿಸುವುದು, ವೆಚ್ಚದ ಹೊಂದಾಣಿಕೆ ತ್ರೖೆಮಾಸಿಕದಲ್ಲೇ ಆಗಬೇಕು, ಪವರ್ ಸೆಕ್ಟರ್ ಬಾಂಡ್ ರೂಪಿಸಬಹುದು.
    • ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ಸಬ್ಸಿಡಿ ಸರಾಸರಿ ವೆಚ್ಚದ ಶೇ.20 ಮೀರಬಾರದು, ಎಚ್​ಟಿ ಬಳಕೆದಾರರಿಗೆ ಬೆಲೆ ಮಧ್ಯಸ್ಥಿತಿಕೆ ಯೋಜನೆಯನ್ನು ಪ್ರಾರಂಭಿಸಬೇಕೆಂದು ಹೇಳಲಾಗಿದೆ.
    • ರಾಜ್ಯ ಸರ್ಕಾರವು 10 ವರ್ಷಗಳಿಗೆ ಅನ್ವಯವಾಗುವ ಒಂದು ಇಂಧನ ನೀತಿ ರೂಪಿಸಿ ಆಡಳಿತಾತ್ಮಕ ಬದಲಾವಣೆ ಮಾಡುವ ಅಗತ್ಯತೆ ಪ್ರತಿಪಾದಿಸಲಾಗಿದೆ.
    • ರಾಜ್ಯ ಇಂಧನ ಯೋಜನೆ ಕೌನ್ಸಿಲ್ ರಚನೆ, ಇಂಧನ ನಿರ್ದೇಶನಾಲಯ ಮಾಡುವುದರಿಂದ ವೃತ್ತಿಪರತೆ ಮತ್ತು ಕಾರ್ಪೆರೇಟ್ ಗೌರ್ನೆನ್ಸ್ ಬರಲಿದೆ.
    • ಎಸ್ಕಾಂಗಳಲ್ಲಿ ಬ್ಯುಸಿನೆಸ್ ಪ್ಲಾನಿಂಗ್ ಯೂನಿಟ್ ಸ್ಥಾಪಿಸಬೇಕು, ನಿಯಂತ್ರಣ, ಸಂಶೋಧನೆ ಮತ್ತು ವಿಶ್ಲೇಷಣೆ ಘಟಕ ಇರಬೇಕು
    • ಐಪಿ ಸೆಟ್, ಹೆಚ್ಚಿನ ವೆಚ್ಚದ ಪಿಪಿಎ ವಿಷಯದಲ್ಲಿ ಮರು ಸಂಧಾನದ ಅವಶ್ಯಕತೆ ಇದೆ. ಡೇಟಾ ಅನಲಿಟಿಕ್ಸ್, ಮ್ಯಾನ್ ಪವರ್ ಸ್ಟಡಿ ಬಗ್ಗೆ ಪ್ರಸ್ತಾಪಿಸಲಾಗಿದೆ.
    • ವಿವಿಧ ಸಬ್ಸಿಡಿ ಯೋಜನೆಗಳ ಪ್ರಮಾಣ ಕಡಿತಗೊಳಿಸುವುದು, ಮನೆ ಬಳಕೆಯ ಕ್ರಾಸ್ ಸಬ್ಸಿಡಿ ಯೋಜನೆ ತೆಗೆದು ಹಾಕುವುದು.
    • ಸ್ಥಳೀಯ ಸಂಸ್ಥೆಗಳು ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿಸುವ ವ್ಯವಸ್ಥೆಯಾಗಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts