ಅಡಕೆ ಕಳ್ಳರನ್ನು ಬಂಧಿಸದಿದ್ದರೆ ಪ್ರತಿಭಟನೆ

2 Min Read
ಅಡಕೆ ಕಳ್ಳರನ್ನು ಬಂಧಿಸದಿದ್ದರೆ ಪ್ರತಿಭಟನೆ
ರಾಮಚಂದ್ರ ಭಟ್

ಸಾಗರ: ಮಲೆನಾಡಿನಲ್ಲಿ ಹೆಚ್ಚುತ್ತಿರುವ ಅಡಕೆ ಕಳ್ಳತನ ಬೆಳಗಾರರಲ್ಲಿ ಆತಂಕ ಉಂಟುಮಾಡಿದೆ. ಪೊಲೀಸ್ ಇಲಾಖೆ ಇನ್ನೆರಡು ದಿನಗಳಲ್ಲಿ ಅಡಕೆ ಕಳ್ಳರನ್ನು ಹಿಡಿಯದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಪ್ರಾಂತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ಎಚ್ಚರಿಸಿದರು.

ಸಾಗರ, ಸೊರಬ, ಹೊಸನಗರ ವ್ಯಾಪ್ತಿಯಲ್ಲಿ ಅಡಕೆ ಕಳ್ಳತನ ಹೆಚ್ಚಾಗುತ್ತಿದೆ. ಬೆಳೆಗಾರರು ಜೀವ ಹಾಗೂ ಜೀವನ ಭದ್ರತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಗರ ಪ್ರಾಂತ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಹೆಕ್ಟೇರ್ ಅಡಕೆ ತೋಟವಿದೆ. ಬಹಳಷ್ಟು ಮಂದಿ ಅಡಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಕೆಲವು ದಿನಗಳಿಂದ ಕಳ್ಳತನ ಹೆಚ್ಚಿದ್ದು, ಬೆಳೆಗಾರರು ಅಡಕೆಯನ್ನು ಉಳಿಸಿಕೊಳ್ಳುವುದೇ ಸವಾಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.
ಅಡಕೆ ಕಳ್ಳತನ ನಿಯಂತ್ರಣಕ್ಕೆ ಒತ್ತಾಯಿಸಿ ಸಂಘದಿಂದ ಸಾಗರ ಮತ್ತು ಶಿಕಾರಿಪುರ ಡಿವೈಎಸ್ಪಿ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಸಾಗರ ತಾಲೂಕಿನ ಬಾಳಗೋಡು, ಮಿಟ್ಲೆಕೊಪ್ಪ, ಬೇಳೂರು, ಮಡಸೂರು ಗ್ರಾಮಗಳಲ್ಲಿ, ಸೊರಬ ತಾಲೂಕಿನ ಮೂಡಗೋಡು, ನಿಸ್ರಾಣಿ ಭಾಗದಲ್ಲಿ ಅಡಕೆ ಮೂಟೆಗಳನ್ನು ಕಳವು ಮಾಡಲಾಗಿದೆ. ಮೂಡಗೋಡಿನ ಜಯಕುಮಾರ್ ಎಂಬುವರ ಗೋದಾಮಿನಲ್ಲಿ ಎರಡು ಬಾರಿ ಕಳವು ಮಾಡಲಾಗಿದೆ. ಸದ್ಯಕ್ಕೆ ಪೊಲೀಸ್ ಇಲಾಖೆ ಗ್ರಾಮಾಂತರ ಪ್ರದೇಶಗಳಲ್ಲೂ ರಾತ್ರಿ ಗಸ್ತಿನ ವ್ಯವಸ್ಥೆ ಮಾಡಿದೆ. ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಗಮನಕ್ಕೂ ತರಲಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದ್ದಾರೆ ಎಂದರು.
ಮಲೆನಾಡು ಭಾಗದಲ್ಲಿ ಒಂಟಿ ಮನೆಗಳೇ ಹೆಚ್ಚು. ಬೆಳೆಗಾರರು ಅಡಕೆ ಕೊಯ್ಲು ಮಾಡಿ ತೋಟ, ಮನೆ ಅಂಗಳದಲ್ಲಿ ಸಂಗ್ರಹಿಸಿರುತ್ತಾರೆ. ರಾತ್ರಿ ಕಳ್ಳರನ್ನು ಎದುರಿಸುವ ಶಕ್ತಿ ಬೆಳೆಗಾರರಿಗೆ ಇರುವುದಿಲ್ಲ. ತಕ್ಷಣ ಪೊಲೀಸ್ ಇಲಾಖೆ ಅಡಕೆ ಕಳ್ಳರನ್ನು ಬಂಧಿಸಿ, ಕಳ್ಳತನವಾಗಿರುವ ಮಾಲನ್ನು ಬೆಳೆಗಾರರಿಗೆ ವಾಪಸ್ ಕೊಡಿಸಬೇಕು. ಇನ್ನೆರಡು ದಿನಗಳಲ್ಲಿ ಅಡಕೆ ಕಳ್ಳರನ್ನು ಬಂಧಿಸದಿದ್ದರೆ ಪ್ರತಿಭಟನೆ ಅನಿವಾರ್ಯ.
ಸಂಘದ ಪ್ರಮುಖ ಈಳಿ ಶ್ರೀಧರ್ ಮಾತನಾಡಿ, ಆತ್ಮರಕ್ಷಣೆಗಾಗಿ ಬೆಳೆಗಾರರು ಇರಿಸಿಕೊಂಡಿರುವ ಬಂದೂಕುಗಳನ್ನು ಚುನಾವಣೆ ಸಂದರ್ಭ ಪೊಲೀಸ್ ಇಲಾಖೆ ವಶಕ್ಕೆ ಪಡೆಯುತ್ತಿದೆ. ರಾತ್ರಿಹೊತ್ತು ತುರ್ತು ಸಂದರ್ಭದಲ್ಲಿ ಬೆಳೆಗಾರರು ಜೀವ ರಕ್ಷಣೆಗಾಗಿ ಪರದಾಡುವ ಸ್ಥಿತಿ ಇದೆ. ಬೆಳೆಗಾರರ ಆತ್ಮರಕ್ಷಣೆಗೆ ಬಂದೂಕು ಇರಿಸಿಕೊಳ್ಳಲು ವಿನಾಯಿತಿ ನೀಡುವಂತೆ ಮಂಗಳೂರಿನ ನ್ಯಾಯಾಲಯ ಬೆಳೆಗಾರರ ಪರವಾಗಿ ತೀರ್ಪು ನೀಡಿದೆ. ಸ್ಥಳೀಯ ಆಡಳಿತ ಈ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪ್ರಾಂತ ಅಡಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಜೇಂದ್ರ, ಪ್ರಮುಖರಾದ ವೆಂಕಟೇಶ್ ಬೆಳೆಯೂರು, ಎಂ.ಕೆ.ವೆಂಕಟೇಶ್, ಗಣೇಶ್, ಜಯಕುಮಾರ್, ನಾಗಾನಂದ ಹಾಜರಿದ್ದರು.

See also  ತಾಕತ್ತಿದ್ರೆ 40% ಕಮಿಷನ್​ ತನಿಖೆ ಮಾಡಿಸಿ; ಪ್ರಿಯಾಂಕ್​ ಖರ್ಗೆಗೆ ಯತ್ನಾಳ್​ ಸವಾಲ್​
Share This Article