

ಅಹಮದಬಾದ್: ಪೊಲೀಸ್ ಕೆಲಸವೆಂದರೆ ಅದಕ್ಕೊಂದು ಗತ್ತು ಗಾಂಭೀರ್ಯ ಇದೆ. ಅದರಲ್ಲೂ ಯೂನಿಫಾರ್ಮ್ ಮೈಮೇಲೆ ಇದ್ದರೆ ಶ್ರದ್ಧೆ ಹಾಗೂ ಗಂಭೀರತೆಯಿಂದ ಕೆಲಸ ಮಾಡಬೇಕು. ಜನರ ಸಮಸ್ಯೆಯನ್ನು ಬಗೆಹರಿಸಿ, ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕರ್ತವ್ಯದ ಸಮಯದಲ್ಲಿ ಎಂಜಾಯ್ ಮಾಡಲು ಅವಕಾಶವೇ ಇರುವುದಿಲ್ಲ. ಆದರೆ, ತಮ್ಮ ಕರ್ತವ್ಯ ಮರೆತು ಕೆಲಸದ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ವಿಡಿಯೋದಲ್ಲಿ ಏನಿದೆ?
ಚಲಿಸುತ್ತಿರುವ ಕಾರಿನಲ್ಲಿ ಕುಳಿತು ಕರ್ತವ್ಯದ ಸಮಯದಲ್ಲಿ ಯೂನಿಫಾರ್ಮ್ನಲ್ಲಿಯೇ ನಾಲ್ವರು ಪೊಲೀಸ್ ಸಿಬ್ಬಂದಿ ಫನ್ ಮಾಡುತ್ತಿರುವುದು ವಿಡಿಯೋದಲ್ಲಿದೆ. ಕಾರಿನಲ್ಲಿ ಹಿಂದಿ ಹಾಡನ್ನು ಪ್ಲೇ ಮಾಡಿ, ಡಾನ್ಸ್ ಮಾಡುತ್ತಾ ಕೂಗಾಡಿಕೊಂಡು ಸಿಬ್ಬಂದಿ ತೆರಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಘಟನೆ ಗುಜರಾತಿನ ಕಚ್ ಜಿಲ್ಲೆಯಲ್ಲಿ ನಡೆದಿದೆ. ಗಾಂಧಿಧಾಮ್ ಪೊಲೀಸ್ ಠಾಣಾ ಸಿಬ್ಬಂದಿಯ ಈ ವರ್ತನೆ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಮೂವರು ಕಾನ್ಸ್ಟೇಬಲ್ಗಳನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. (ಏಜೆನ್ಸೀಸ್)