More

    ಡೇಂಜರ್ ಪ್ಯಾರಾಸಿಟಮಲ್ ಸೇವನೆ ಅತಿಯಾದರೆ ಅಡ್ಡಪರಿಣಾಮ; ನರಮಂಡಲ, ಹೃದಯ ತೊಂದರೆ ಸಾಧ್ಯತೆ

    |ಪಂಕಜ ಕೆ.ಎಂ. ಬೆಂಗಳೂರು

    ಕೋವಿಡ್ ಮಾರಿ ಕಾಲಿಟ್ಟ ಬಳಿಕ ವೈದ್ಯರ ಸಲಹೆಯನ್ನೂ ಪಡೆಯದೆ ಜನರು ಯಥೇಚ್ಛವಾಗಿ ಪ್ಯಾರಾಸಿಟಮಲ್ ಮಾತ್ರೆಗಳನ್ನು ಬಳಸುತ್ತಿರುವುದು ಭಾರಿ ಅಪಾಯ ತಂದೊಡ್ಡಿರುವುದಾಗಿ ತಜ್ಞರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಾತ್ರೆಯ ಡೋಸ್ ಮತ್ತು ಅವಧಿ ಅರಿವಿಲ್ಲದೆಯೇ ಜನರು ಸೇವನೆಯ ಚಟ ಅಂಟಿಸಿಕೊಂಡರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದ್ದಾರೆ. ಸುರಕ್ಷತಾ ವಲಯದಲ್ಲಿರುವ ಔಷಧಗಳಲ್ಲಿ ಪ್ಯಾರಾಸಿಟಮಲ್ ಸಹ ಒಂದಾಗಿದೆ. ಇದು ಕೌಂಟರ್ ಪ್ರಿಸ್ಕ್ರಿಪ್ಷನ್ ಆಗಿರುವುದರಿಂದ ವೈದ್ಯರ ಸಲಹೆ ಹೊರತಾಗಿಯೂ ಎಲ್ಲೆಡೆ ದೊರೆಯುತ್ತದೆ. ಹಾಗೆಂದು ಮನ ಬಂದಂತೆ ಸೇವಿಸುವಂತಿಲ್ಲ. ಸಾಮಾನ್ಯವಾಗಿ ಜ್ವರಕ್ಕೆ ಬಳಸುವ ಈ ಮಾತ್ರೆಯನ್ನು ಕೋವಿಡ್ ನಂತರ ನೆಗಡಿ, ಕೆಮ್ಮು, ಮೈ-ಕೈ ನೋವು ಸೇರಿ ಶೀತಸಂಬಂಧಿತ ಎಲ್ಲ ಸಮಸ್ಯೆಗಳಿಗೂ ಬಳಕೆ ಮಾಡುತ್ತಿರುವುದು ಆತಂಕ ತಂದೊಡ್ಡಿದೆ.

    ಸೈಡ್ ಎಫೆಕ್ಟ್ ಏನು?: ಪ್ಯಾರಾಸಿಟಮಲ್ ಮಾತ್ರೆ ಹೆಚ್ಚು ಸೇವನೆಯಿಂದ ಕೆಲವರಿಗೆ ವಾಕರಿಕೆ, ವಾಂತಿ, ತೂಕಡಿಕೆ, ಮೂರ್ಛೆ ಹೋಗುವುದು, ತಲೆತಿರುಗುವಿಕೆ, ಅಲರ್ಜಿಯಂತಹ ಸಾಮಾನ್ಯ ಲಕ್ಷಣ ಕಾಣಿಸಿಕೊಳ್ಳುತ್ತವೆ. ಅತಿಯಾದ ಬಳಕೆಯಿಂದ ಲಿವರ್ ವೈಫಲ್ಯವಾಗಬಹುದು. ಜಾಂಡೀಸ್, ಮಿದುಳಿನಲ್ಲಿ ಉರಿಯೂತದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನರಮಂಡಲ, ಹೃದಯದ ಸಮಸ್ಯೆಗೂ ಕಾರಣವಾಗಬಹುದು.

    ಮಿತಿಮೀರಿದರೆ ಏನಾಗುತ್ತೆ?: ಲಿವರ್ ವೈಫಲ್ಯ, ಜಾಂಡೀಸ್, ಮಿದುಳಿಗೆ ಹಾನಿ ಸೇರಿ ಹಲವು ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು. ಹಾಗಾಗಿ ಯಾವುದೇ ಪ್ಯಾರಾಸಿಟಮಲ್ ಹಾಗೂ ಬಿ-ಕಾಂಪ್ಲೆಕ್ಸ್ ಮತ್ತು ವಿಟಮಿನ್ ಮಾತ್ರೆಗಳನ್ನು ವೈದ್ಯರ ಸಲಹೆ ಪಡೆಯದೆ ಸೇವಿಸುವುದು ಸೂಕ್ತವಲ್ಲ. ಅದರಲ್ಲೂ ಮಕ್ಕಳಿಗೆ ಈ ಮಾತ್ರೆಗಳನ್ನು ನೀಡುವಾಗ ಬಹಳ ಎಚ್ಚರ ವಹಿಸಬೇಕು. ಡೋಸ್​ನಲ್ಲಿ ವ್ಯತ್ಯಾಸವಾದರೆ ಪ್ರಾಣಕ್ಕೆ ಸಂಚಕಾರವಾಗಲಿದೆ ಎಂದು ವೈದ್ಯರು ಎಚ್ಚರಿಸುತ್ತಾರೆ.

    ಮಕ್ಕಳಿರಲಿ ಹಿರಿಯರಿರಲಿ ಅವರ ದೇಹದ ತೂಕಕ್ಕೆ ಅನುಗುಣವಾಗಿ ಪ್ರತಿ ಕೆ.ಜಿ.ಗೆ 15 ಮಿಲಿ. ಗ್ರಾಂ ನಂತೆ ದಿನಕ್ಕೆ 3 ಬಾರಿ ಸೇವಿಸಬೇಕು. 4-5ಕ್ಕಿಂತ ಹೆಚ್ಚು ಬಾರಿ ಸೇವಿಸುವುದು ಅಪಾಯ. ಮಕ್ಕಳಿಗೆ ಪ್ಯಾರಾಸಿಟಮಲ್ ಸಿರಪ್ ರೂಪದಲ್ಲೂ ಲಭ್ಯ. ಹಾಗಾಗಿ ಔಷಧ ಪ್ರಮಾಣದ ಬಗ್ಗೆ ವೈದ್ಯರಿಂದ ಸಲಹೆ ಪಡೆದು ನೀಡಬೇಕು. ಜ್ವರ ಹೆಚ್ಚಿದೆ ಬೇಗ ಗುಣವಾಗಲಿ ಎಂದು ಹೆಚ್ಚಿನ ಪ್ರಮಾಣದಲ್ಲಿ ಸಿರಪ್ ಕೊಡಬಾರದು. ಅದು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ.

    ಮಕ್ಕಳಿರಲಿ ದೊಡ್ಡವರಿರಲಿ ವೈದ್ಯರ ಸಲಹೆ ಪಡೆಯದೆ ಔಷಧ ಸೇವಿಸಬಾರದು. ಅತಿಯಾದರೆ ವಿಟಮಿನ್ ಮಾತ್ರೆಗಳೂ ಹಾನಿಕಾರಕ. ವೈದ್ಯರ ಸಲಹೆ ಪಡೆದು ಔಷಧ ಸೇವಿಸಿದರೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು. ಹೆಚ್ಚು ದ್ರವಾಹಾರ ತೆಗೆದುಕೊಳ್ಳಬೇಕು. ವೈದ್ಯರು ಸೂಚಿಸಿದ ಪ್ರಮಾಣದಲ್ಲೇ ಔಷಧ ತೆಗೆದುಕೊಳ್ಳುವುದು ಸೂಕ್ತ.

    | ಡಾ. ನಿಜಗುಣ ಮಕ್ಕಳ ತಜ್ಞರು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ

    ಜ್ವರ ಇದ್ದರಷ್ಟೇ ಬಳಸಿ: ಪ್ಯಾರಾಸಿಟಮಲ್ ಜ್ವರದ ಮಾತ್ರೆ ಆಗಿದ್ದು, ದೇಹದ ಉಷ್ಣಾಂಶ 100ಕ್ಕಿಂತ ಹೆಚ್ಚಿದ್ದಾಗ ಮಾತ್ರ ಸೇವಿಸಬೇಕು. ಕೋವಿಡ್ ದೃಢಪಟ್ಟವರಲ್ಲಿ ಜ್ವರ ಇದ್ದರಷ್ಟೇ ಈ ಮಾತ್ರೆ ತೆಗೆದುಕೊಳ್ಳಬೇಕು. ಕೆಲವರು ನಿತ್ಯದ ಕೆಲಸದಿಂದ ಉಂಟಾಗುವ ಸಾಮಾನ್ಯ ಮೈಕೈ ನೋವಿಗೂ ಪ್ಯಾರಾಸಿಟಮಲ್ ಸೇವಿಸುವುದನ್ನು ರೂಢಿಸಿ ಕೊಂಡಿದ್ದಾರೆ. ಅತಿಯಾಗಿ ಪ್ಯಾರಾಸಿಟಮಲ್ ಸೇವಿಸುವ ಒಂದು ಲಕ್ಷ ಮಂದಿಯಲ್ಲಿ 4-5 ಮಂದಿ ಲಿವರ್ ವೈಫಲ್ಯದಂತಹ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ವೈದ್ಯರ ಸಲಹೆ ಇಲ್ಲದೆಯೇ ಮಕ್ಕಳಿಗೆ ಪ್ಯಾರಾಸಿಟಮಲ್ ಮಾತ್ರೆ ನೀಡುವುದರಿಂದ ಜಾಂಡೀಸ್ ಹಾಗೂ ಲಿವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ತಿಂಗಳಿಗೆ ಇಂತಹ ಒಂದು ಪ್ರಕರಣವಾದರೂ ವರದಿಯಾಗುತ್ತದೆ ಎನ್ನುತ್ತಾರೆ ವೈದ್ಯರು.

    ಪ್ಯಾರಾಸಿಟಮಲ್ ಹೆಚ್ಚು ಸೇವನೆಯಿಂದ ಲಿವರ್ ವೈಫಲ್ಯಕ್ಕೆ ಒಳಗಾಗುವವರು ಹೆಚ್ಚು. ಲಿವರ್​ಗೆ ತೊಂದರೆ ಆದರೆ ನಂತರ ಅದು ಮಿದುಳಿಗೂ ಹಾನಿ ಮಾಡುತ್ತದೆ. ಅಗತ್ಯವಿದ್ದಾಗ ದಿನಕ್ಕೆ 3-4 ಪ್ಯಾರಾಸಿಟಮಲ್ ಸೇವಿಸಬಹುದು. ಇತರೆ ನೋವು ನಿವಾರಕ ಔಷಧಗಳ ಜತೆಗೆ ಪ್ಯಾರಾಸಿಟಮಲ್ ಹೆಚ್ಚು ಸೇವಿಸಿದರೆ ಅದು ಅಡಿಕ್ಷನ್​ಗೂ ಕಾರಣವಾಗುತ್ತದೆ.

    | ಡಾ. ಪ್ರತಿಮಾ ಮೂರ್ತಿ ನಿರ್ದೇಶಕಿ, ನಿಮ್ಹಾನ್ಸ್

    ರಾಜ್ಯದಲ್ಲಿ ಮಿತಿ ಮೀರಿದ ಕರೊನಾ ಹಾವಳಿ; ಇಂದು ಕೂಡ ಸೋಂಕಿತರು ಮತ್ತು ಮೃತರ ಸಂಖ್ಯೆಯಲ್ಲಿ ಹೆಚ್ಚಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts