

ಬೆಂಗಳೂರು: ಪಿಎಫ್ಐ ಇನ್ನಿತರ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧ ವಿಧಿಸುವ ಮೂಲಕ ಸಮಾಜ ವಿಘಟನೆ, ದೇಶ ಅಸ್ಥಿರಗೊಳಿಸಲು ಪ್ರಯತ್ನಿಸುವ ವಿಚ್ಛಿದ್ರಕಾರಿ ಶಕ್ತಿಗಳ ಸಂಚು ಫಲಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪಿಎಫ್ಐ ನಿಷೇಧ ನಿರ್ಧಾರವನ್ನು ಸ್ವಾಗತಿಸುವೆ. ಪಕ್ಷದ ಕಾರ್ಯಕರ್ತರು ಒತ್ತಡ ಹೇರಿದ್ದರು ಎನ್ನುವ ಕಾರಣಕ್ಕೆ ಎನ್ಐಎ ಕಾರ್ಯಾಚರಣೆ ನಡೆಸಿತು. ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎನ್ನುವುದು ಸರಿಯಲ್ಲ ಎಂದು ತಳ್ಳಿಹಾಕಿದರು.
ದೇಶದ ಹಲವು ರಾಜ್ಯಗಳ ಗಲಭೆಗಳಲ್ಲಿ ಈ ಸಂಘಟನೆ ಕೈವಾಡವಿದೆ. ವಿದೇಶದಿಂದ ಅಕ್ರಮವಾಗಿ ಹಣ ತರಿಸಿಕೊಂಡಿದೆ. ಭಯೋತ್ಪಾದಕ ಸಂಘಟನೆಗಳ ಜತೆಗೆ ನಂಟು ಹೊಂದಿತ್ತು. ರಾಜಸ್ಥಾನದ ಹಲವೆಡೆ ದುಷ್ಖೃತ್ಯ ಎಸಗಿದೆ.
ಮರು ತನಿಖೆ ಅಗತ್ಯ
ಕರ್ನಾಟಕದಲ್ಲಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಈ ಸಂಘಟನೆಯು ಹಿಂದು ಕಾರ್ಯಕರ್ತರನ್ನು ವ್ಯವಸ್ಥಿತ ಸಂಚು ರೂಪಿಸಿ ಹತ್ಯೆ ಮಾಡಿತು. ಆದರೂ ಆಗಿನ ಕಾಂಗ್ರೆಸ್ ಸರ್ಕಾರ ಆ ಸಂಘಟನೆ ಕಾರ್ಯಕರ್ತರ ವಿರುದ್ಧದ ಕ್ರಿಮಿನಲ್ ಕೇಸ್ಗಳನ್ನು ರದ್ದುಪಡಿಸಿದ್ದು, ಅವೆಲ್ಲವುಗಳ ಮರು ತನಿಖೆ ಅಗತ್ಯವಿದೆ ಎಂದು ಅರುಣ್ ಸಿಂಗ್ ಪ್ರತಿಪಾದಿಸಿದರು.
ಕಾಂಗ್ರೆಸ್ ನಡೆಸಿರುವ ಪೇಸಿಎಂ ಅಭಿಯಾನ ಅತ್ಯಂತ ಕೀಳುಮಟ್ಟದ್ದಾಗಿದ್ದು, ಕಾಮನ್ ಮ್ಯಾನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾತ್ರವಲ್ಲ ರಾಜ್ಯದ ಜನಸಾಮಾನ್ಯರಿಗೂ ಅಪಮಾನಿಸುತ್ತಿದೆ ಎಂದು ಕಿಡಿಕಾರಿದರು.