More

    PFIಗೆ ಬಿಗ್​ ಶಾಕ್​ ಕೊಟ್ಟ ಕೇಂದ್ರ ಸರ್ಕಾರ: ಪಿಎಫ್​ಐ ಸೇರಿ 8 ಸಂಘಟನೆಗಳ ನಿಷೇಧ

    ನವದೆಹಲಿ: ಕಾನೂನುಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆಯನ್ನು ಬ್ಯಾನ್​ ಮಾಡಿ ಕೇಂದ್ರ ಸರ್ಕಾರ ಇಂದು (ಸೆ.28) ಆದೇಶ ಹೊರಡಿಸಿದೆ.

    ಪಿಎಫ್​ಐ ಮತ್ತು ಅದರ ಅಂಗ ಸಂಸ್ಥೆಗಳು ಸೇರಿದಂತೆ 8 ಸಂಘಟನೆಗಳನ್ನು 5 ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶವನ್ನು ಹೊರಡಿಸಿದೆ. ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ) ಅಡಿಯಲ್ಲಿ ಸಂಘಟನೆಗಳನ್ನು ಸರ್ಕಾರ ಬ್ಯಾನ್​ ಮಾಡಿದೆ.

    ಪಿಎಫ್​ಐ ಬ್ಯಾನ್​ ಮಾಡುವಂತೆ ಹಲವು ರಾಜ್ಯಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು. ಕಳೆದ ಸೆ.22ರಂದು ಪಿಎಫ್​ಐ ಮೇಲೆ ತನಿಖಾ ಸಂಸ್ಥೆಗಳು ನಡೆಸಿದ ದಾಳಿಯ ಬಳಿಕ ಬಂದ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಬ್ಯಾನ್​ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ.

    ಕಳೆದ ಸೆ. 22ರಂದು ರಾಷ್ಟ್ರೀಯ ತನಿಖಾ ಆಯೋಗ(ಎನ್​ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಇತರ ರಾಜ್ಯಗಳ ಪಿಎಫ್​ಐ ಕಚೇರಿ ಹಾಗೂ ಮುಖಂಡರ ಮನೆಗಳ ಮೇಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿ, ವಿವಿಧ ಪ್ರಕರಣಗಳ ಅಡಿಯಲ್ಲಿ 100 ಕ್ಕೂ ಹೆಚ್ಚು ಪಿಎಫ್​ಐ ಸದಸ್ಯರು ಮತ್ತು ಅವರ ಸಂಪರ್ಕದಲ್ಲಿರುವವರನ್ನು ಬಂಧಿಸಿ, ವಿಚಾರಣೆ ನಡೆಸಿತ್ತು. ಅಲ್ಲದೆ, ಎನ್​ಐಎ ದಾಳಿಯ ಬೆನ್ನಲ್ಲೇ ಆಯಾ ರಾಜ್ಯದ ಪೊಲೀಸರು ಸಹ ಪಿಎಫ್​ಐ ಕಾರ್ಯಕರ್ತರು ಹಾಗೂ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ, ವಿಚಾರಣೆಯನ್ನು ನಡೆಸಿತ್ತು.

    ಸೆ. 22ರ ಗುರುವಾರದಂದು ನಡೆದ ದಾಳಿಯು ಇದುವರೆಗಿನ ಅತಿ ದೊಡ್ಡ ತನಿಖಾ ದಾಳಿಯಾಗಿದೆ. ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ತರಬೇತಿ ಶಿಬಿರಗಳ ಆಯೋಜನೆ, ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರ ಮನವೊಲಿಸುವುದು ಮತ್ತು ಉಗ್ರರೊಂದಿಗೆ ಸಂಪರ್ಕ ಸೇರಿದಂತೆ ಇನ್ನಿತರ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆರೋಪ ನಿಷೇಧಿತ ಸಂಘಟನೆಗಳ ಮೇಲಿದ್ದು, ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ದಾಳಿ ನಡೆಸಿತ್ತು.

    ದಾಳಿಯ ಬಳಿಕ ಕೇರಳದಲ್ಲಿ ಪಿಎಫ್​ಐ ಕಾರ್ಯಕರ್ತರು ಒಂದು ದಿನದ ಬಂದ್​ಗೆ ಕರೆ ನೀಡಿ, ಬೀದಿಗಿಳಿದು ಪ್ರತಿಭಟನೆ ಆರಂಭಿಸಿದರು. ಆದರೆ, ಆ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿ, ಅನೇಕ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದಲ್ಲದೆ, ಜನರಿಗೆ ತೀವ್ರ ತೊಂದರೆಯಾಯಿತು. ಇದರ ಬೆನ್ನಲ್ಲೇ ಕೇರಳ ಹೈಕೋರ್ಟ್​ ಪಿಎಫ್​ಐ ಸಂಘಟನೆ ಮೇಲೆ ಗರಂ ಆಗಿ ಯಾವುದೇ ಬಂದ್​ ಮಾಡದಂತೆ ಮತ್ತು ಹಿಂಸಾತ್ಮಕವಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿತು.

    ಕೇರಳದ ಘಟನೆ ನಡೆದ ಎರಡು ದಿನದ ಬೆನ್ನಲ್ಲೇ ಕರ್ನಾಟಕದಲ್ಲಿ ರಾಜ್ಯ ಪೊಲೀಸರು ಮುಂಜಾಗ್ರತ ಕ್ರಮವಾಗಿ ರಾಜ್ಯದ ಹಲವೆಡೆ ಪಿಎಫ್​ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿ, ಸುಮಾರು 40 ಕ್ಕೂ ಹೆಚ್ಚು ಪಿಎಫ್​ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಮೊದಲ ಬಾರಿಗೆ ಎನ್​ಐಎ ದಾಳಿ ನಡೆಸಿತ್ತು. ಎನ್​ಐಎ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ರಾಜ್ಯ ಪೊಲೀಸರು ದಾಳಿ ನಡೆಸಿದರು. ಎನ್​ಐಎ ದಾಳಿ ವಿರೋಧಿಸಿ, ಪ್ರತಿಭಟನೆ ಮಾಡಿ, ಆ ಪ್ರತಿಭಟನೆಯನ್ನು ವಿದ್ವಂಸಕ ಕೃತ್ಯಕ್ಕೆ ತಿರುಗಿಸಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ರಾಜ್ಯದಲ್ಲಿ ವಿದ್ವಂಸಕ ಕೃತ್ಯಗಳು ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ದಾಳಿ ಮಾಡಿ ಕೆಲವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

    ಇದೀಗ ಕೇಂದ್ರ ಸರ್ಕಾರ ಸಂಘಟನೆಯನ್ನೇ 5 ವರ್ಷಗಳ ಕಾಲ ಬ್ಯಾನ್​ ಮಾಡಿ ಆದೇಶ ಹೊರಡಿಸಿದೆ. (ಏಜೆನ್ಸೀಸ್​)

    ಸುಪ್ರೀಂಕೋರ್ಟ್ ಕಲಾಪದ ನೇರಪ್ರಸಾರ ಆರಂಭ: ಜಾರಿಯಾದ ಐತಿಹಾಸಿಕ ಕ್ರಮ, 8 ಲಕ್ಷ ಜನರಿಂದ ವೀಕ್ಷಣೆ..

    ಪಿಎಫ್​ಐಗೆ ಮತ್ತೆ ಖಾಕಿ ಹೆಡೆಮುರಿ: 8 ರಾಜ್ಯಗಳಲ್ಲಿ 2ನೇ ಕಾರ್ಯಾಚರಣೆ, 247 ಸೆರೆ

    2047ಕ್ಕೆ ಪ್ರಪಂಚದಲ್ಲೇ ಸಮೃದ್ಧ, ಬಲಿಷ್ಠ ರಾಷ್ಟ್ರವಾಗಲಿದೆ ಭಾರತ: ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts