More

    ಸುಪ್ರೀಂಕೋರ್ಟ್ ಕಲಾಪದ ನೇರಪ್ರಸಾರ ಆರಂಭ: ಜಾರಿಯಾದ ಐತಿಹಾಸಿಕ ಕ್ರಮ, 8 ಲಕ್ಷ ಜನರಿಂದ ವೀಕ್ಷಣೆ..

    ನವದೆಹಲಿ: ಸುಪ್ರೀಂಕೋರ್ಟ್ ಕಲಾಪಗಳ ನೇರ ಪ್ರಸಾರ ಮಾಡುವಂತೆ ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತೀರ್ಪು ನೀಡಿದ ನಾಲ್ಕು ವರ್ಷಗಳ ಬಳಿಕ ಹಾಲಿ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇರಪ್ರಸಾರ ಕುರಿತ ಕ್ರಮ ಕೈಗೊಂಡ ಪರಿಣಾಮ ಮಂಗಳವಾರದಿಂದ ಸಾಂವಿಧಾನಿಕ ಪೀಠದ ವಿಚಾರಣೆಯ ನೇರಪ್ರಸಾರ ಆರಂಭಗೊಂಡಿದೆ. ಮೊಬೈಲ್, ಲ್ಯಾಪ್​ಟಾಪ್ ಮತ್ತು ಕಂಪ್ಯೂಟರ್​ಗಳಲ್ಲಿ ವೀಕ್ಷಕರು ಕೋರ್ಟ್ ಕಲಾಪಗಳನ್ನು ನೇರವಾಗಿ ನೋಡಬಹುದಾಗಿದೆ. ಶಿವಸೇನೆ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಎಂ ಏಕನಾಥ ಶಿಂಧೆ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ನಡುವಿನ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠದ ಕಲಾಪ ನೇರ ಪ್ರಸಾರಗೊಂಡಿದೆ.

    ಇದರೊಟ್ಟಿಗೆ ಇನೂ ಎರಡು ಅರ್ಜಿಗಳ ವಿಚಾರಣೆಯೂ ನೇರ ಬಿತ್ತರ ಆಗಿದೆ. ಯೂಟ್ಯೂಬ್​ನ್ನು ಅವಲಂಬಿಸುವ ಬದಲಿಗೆ ಸುಪ್ರೀಂಕೋರ್ಟ್ ತನ್ನದೇ ಪ್ಲಾಟ್​ಫಾಮ್ರ್ ನಲ್ಲಿ ಕಲಾಪಗಳ ನೇರ ಪ್ರಸಾರ ಮಾಡಲಿದೆ ಎಂದು ಸಿಜೆಐ ಯು.ಯು. ಲಲಿತ್ ಸೋಮವಾರ ತಿಳಿಸಿದ್ದರು. ಆಗಸ್ಟ್ 26ರಂದು, ಒಂದು ದಿನದ ಮಟ್ಟಿಗೆ ಸುಪ್ರೀಂಕೋರ್ಟ್ ವೆಬ್​ಕಾಸ್ಟ್ ಪೋರ್ಟಲ್ ಮೂಲಕ ಹಿಂದಿನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠದ ವಿಚಾರಣೆ ನೇರ ಪ್ರಸಾರಗೊಂಡಿತ್ತು. ದೇಶದಾದ್ಯಂತ ಜನರು ಸುಪ್ರೀಂಕೋರ್ಟ್​ಗೆ ಬರಲು ಸಾಧ್ಯವಿಲ್ಲದ ಕಾರಣ ಪ್ರಮುಖ ಪ್ರಕರಣಗಳನ್ನು ಲೈವ್-ಸ್ಟ್ರೀಮ್ (ನೇರಪ್ರಸಾರ) ಮಾಡಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ 2018ರಲ್ಲಿ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದರು.

    ನೈಜ ಶಿವಸೇನೆ ನಿರ್ಧರಿಸಲು ಆಯೋಗಕ್ಕೆ ಅಧಿಕಾರ

    ತಮ್ಮದೇ ನಿಜವಾದ ಶಿವಸೇನೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆಯಾಗಿದ್ದು, ನಿಜವಾದ ಶಿವಸೇನೆ ಯಾವ ಬಣಕ್ಕೆ ಸೇರಿದ್ದು ಎಂಬ ಬಗ್ಗೆ ನಿರ್ಧರಿಸುವ ಚುನಾವಣಾ ಆಯೋಗದ ಅಧಿಕಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಏಕನಾಥ ಶಿಂಧೆ ಬಣದ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳ್ಳುವ ತನಕ ಆಯೋಗದ ವಿಚಾರಣೆಗೆ ತಡೆ ನೀಡಬೇಕು ಎಂದು ಉದ್ಧವ್ ಠಾಕ್ರೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಠಾಕ್ರೆ ವಾದವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಸಾಮಾನ್ಯವಾಗಿ ಚುನಾವಣಾ ಆಯೋಗವು ಪ್ರತಿ ಬಣವನ್ನು ಬೆಂಬಲಿಸುವ ಚುನಾಯಿತ ಶಾಸಕರು, ಸಂಸದರು ಮತ್ತು ಪದಾಧಿಕಾರಿಗಳ ಸಂಖ್ಯಾಬಲದ ಮೇಲೆ ಇಂಥ ವಿವಾದಗಳನ್ನು ಇತ್ಯರ್ಥಪಡಿಸುತ್ತಾ ಬಂದಿದೆ.

    ಇಡಬ್ಲ್ಯುಎಸ್​ ತೀರ್ಪು ಕಾದಿರಿಸಿದ ಪೀಠ

    ಸಂವಿಧಾನದ 103ನೇ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಮೇಲೆ ಆರೂವರೆ ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿರುವ ಸಿಜೆಐ ಯು.ಯು. ಲಲಿತ್ ನೇತೃತ್ವದ ಸಾಂವಿಧಾನಿಕ ಪೀಠ, ತೀರ್ಪನ್ನು ಕಾದಿರಿಸಿದೆ. ಆರ್ಥಿಕ ದುರ್ಬಲ ವರ್ಗಕ್ಕೆ (ಇಡಬ್ಲು್ಯಎಸ್) ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 10ರಷ್ಟು ಮೀಸಲಾತಿಯನ್ನು ಒದಗಿಸುವ ಸಂವಿಧಾನದ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಐವರು ನ್ಯಾಯಾಧೀಶರ ಸಂವಿಧಾನ ಪೀಠ ಇದರ ವಿಚಾರಣೆ ನಡೆಸಿದೆ.

    ಎಎಪಿ ನಾಯಕರಿಗೆ ಹೈಕೋರ್ಟ್ ನಿರ್ಬಂಧ

    ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಟ್ವೀಟ್​ಗಳನ್ನು ಅಳಿಸಿಹಾಕುವಂತೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ದಿಲ್ಲಿ ಹೈಕೋರ್ಟ್ ಸೂಚನೆ ನೀಡಿದೆ. ಈ ಬಗ್ಗೆ ಮಧ್ಯಂತರ ಆದೇಶ ಮಾಡಿರುವ ಪೀಠ, ಲೆಫ್ಟಿನೆಂಟ್ ಗವರ್ನರ್ ಖಾದಿ ಗ್ರಾಮ ಉದ್ಯೋಗ್ ಮುಖ್ಯಸ್ಥರಾಗಿದ್ದ ಅವಧಿಯ ಹಗರಣಕ್ಕೆ ಸಂಬಂಧಿಸಿ ಯಾವುದೇ ಕಾಮೆಂಟ್​ಗಳನ್ನು ಪ್ರಕಟಿಸದಂತೆ ಎಎಪಿ ಶಾಸಕರನ್ನು ನಿರ್ಬಂಧಿಸಿದೆ. ಸಕ್ಸೇನಾ ಅವರು ತಮ್ಮ ಮತ್ತು ಕುಟುಂಬದ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದರಿಂದ ಎಎಪಿ ನಾಯಕರನ್ನು ನಿರ್ಬಂಧಿಸಬೇಕು ಎಂದು ದೆಹಲಿ ಹೈಕೋರ್ಟ್​ಗೆ ಒತ್ತಾಯಿಸಿದ್ದರು. ನ್ಯಾಯಾಲಯದ ಆದೇಶದ ಹೊರಬಿದ್ದ ಬಳಿಕ ಅವರು ಸತ್ಯಮೇವ ಜಯತೆ ಎಂದು ಟ್ವೀಟ್ ಮಾಡಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷರಾಗಿದ್ದ ವೇಳೆ ಸೆಕ್ಸೇನಾ 1,400 ಕೋಟಿ ರೂ.ಮೌಲ್ಯದ ನಿಷೇಧಿತ ಕರೆನ್ಸಿ ನೋಟುಗಳನ್ನು ಬದಲಾಯಿಸಿದ್ದಾರೆ ಎಂದು ಎಎಪಿ ಆರೋಪಿಸಿತ್ತು.

    ನೋಟ್ ಬ್ಯಾನ್ ಪ್ರಶ್ನಿಸಿದ ಅರ್ಜಿ ಇಂದು ವಿಚಾರಣೆ: ಕೇಂದ್ರ ಸರ್ಕಾರ 2016ರ ನವೆಂಬರ್​ನಲ್ಲಿ 1000 ಮತ್ತು 500 ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಿದ್ದನ್ನು ಪ್ರಶ್ನಿಸಿರುವ 58 ಅರ್ಜಿಗಳನ್ನು ಸಾಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದ್ದು, ಇದರ ವಿಚಾರಣೆ ಬುಧವಾರ (ಸೆ.28) ನಡೆಸಲಿದೆ.

    ಮತ್ತೆ ಆಯತಪ್ಪಿ ಎಡವಿದ ಮಾಜಿ ಸಿಎಂ; ಈ ಊರಲ್ಲಿ ಸಿದ್ದರಾಮಯ್ಯಗೆ ಇದೇನಿದು ಸಮಸ್ಯೆ?!

    ಹುಣಸೇಮರದಲ್ಲಿ ಕೋತಿಗಳಿಗೆ ನೇಣು; 2 ಮಂಗಗಳ ಸಾವು, ಇನ್ನೆರಡು ಬಚಾವು: ಇದೆಂಥ ವಿಕೃತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts