More

    ಪಿಎಫ್​ಐಗೆ ಮತ್ತೆ ಖಾಕಿ ಹೆಡೆಮುರಿ: 8 ರಾಜ್ಯಗಳಲ್ಲಿ 2ನೇ ಕಾರ್ಯಾಚರಣೆ, 247 ಸೆರೆ

    ನವದೆಹಲಿ/ಬೆಂಗಳೂರು: ಭಯೋತ್ಪಾದನೆ ಮಟ್ಟಹಾಕಲು ಸಮರ ಸಾರಿರುವ ಕೇಂದ್ರ ಸರ್ಕಾರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಮತ್ತು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​ಡಿಪಿಐ) ವಿರುದ್ಧ ಆರೇ ದಿನದಲ್ಲಿ 2ನೇ ಬಾರಿ ಅತಿ ದೊಡ್ಡ ಕಾರ್ಯಾಚರಣೆ ನಡೆಸಿದೆ. ಮಂಗಳವಾರ 8 ರಾಜ್ಯಗಳಲ್ಲಿ ದಾಳಿ ನಡೆಸಿ 247 ಜನರನ್ನು ಬಂಧಿಸಲಾಗಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 80ಕ್ಕೂ ಅಧಿಕ ಮುಖಂಡರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

    ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆಯಾ ರಾಜ್ಯಗಳ ಪೊಲೀಸರ ಸಹಿತ ವಿವಿಧ ಸಂಸ್ಥೆಗಳು ಕಾರ್ಯಾಚರಣೆ ಯಲ್ಲಿ ಭಾಗಿಯಾಗಿವೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ಉತ್ತರಪ್ರದೇಶ, ಮತ್ತು ದೆಹಲಿಯಲ್ಲಿ ಎನ್​ಐಎ ಮತ್ತಿತರ ಸಂಸ್ಥೆಗಳ ಅಧಿಕಾರಿಗಳು ದಾಳಿ ಮಾಡಿ 247 ಮಂದಿಯನ್ನು ಬಂಧಿಸಿದ್ದಾರೆ. ಕಳೆದ ಗುರುವಾರ 15 ರಾಜ್ಯಗಳಲ್ಲಿ ಲಗ್ಗೆ ಹಾಕಿ ಪಿಎಫ್​ಐನ ಮುಂಚೂಣಿ ನಾಯಕರು ಮತ್ತು ಕಾರ್ಯಕರ್ತರು ಸೇರಿ 106 ಜನರನ್ನು ಬಂಧಿಸಲಾಗಿತ್ತು.

    ಭಯೋತ್ಪಾದಕರಿಗೆ ಆರ್ಥಿಕ ನೆರವು, ಮುಸ್ಲಿಂ ಯುವಜನರಿಗೆ ಶಸ್ತ್ರಾಸ್ತ್ರ ತರಬೇತಿ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಸೇರು ವಂತೆ ಪ್ರೇರೇಪಿಸುವ ಕೃತ್ಯಗಳಲ್ಲಿ ಪಿಎಫ್​ಐ ತೊಡಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅದರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಎನ್​ಐಎ ಒದಗಿಸಿದ ಬೇಹುಗಾರಿಕೆ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

    ದೆಹಲಿ ಪೊಲೀಸರ ವಿಶೇಷ ದಳವು ರೋಹಿಣಿ, ನಿಜಾಮುದ್ದೀನ್, ಜಾಮಿಯಾ, ಶಹೀನ್ ಬಾಗ್ ಮತ್ತು ಕೇಂದ್ರ ದೆಹಲಿ ಸಹಿತ ಹಲವು ಸ್ಥಳಗಳಲ್ಲಿ ಇತರ ಸಂಸ್ಥೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಸಂಜೆವರೆಗೆ 30 ಜನರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಥಾಣೆಯ ಕ್ರೖೆಂ ಬ್ರಾಂಚ್ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಮುಂಬ್ರಾ ಉಪನಗರದಲ್ಲಿ ನಾಲ್ವರು ಪಿಎಫ್​ಐ ಸದಸ್ಯರನ್ನು ಹೆಡೆಮುರಿ ಕಟ್ಟಿದ್ದಾರೆ. ಔರಂಗಾಬಾದ್ ಮತ್ತು ಸೋಲಾಪುರದಲ್ಲಿ ಕೂಡ ದಾಳಿಗಳು ನಡೆದಿವೆ. ಮಧ್ಯಪ್ರದೇಶದ ನಾನಾ ಕಡೆಗಳಿಂದ 21 ಹಾಗೂ ಗುಜರಾತ್​ನಲ್ಲಿ 10 ಪಿಎಫ್​ಐ ಕಾರ್ಯಕರ್ತರನ್ನು ಸೆರೆ ಹಿಡಿಯಲಾಗಿದೆ. ಅಸ್ಸಾಮ್ಲ್ಲಿ ಸ್ಥಳೀಯ ಪೊಲೀಸರು 25 ಜನರನ್ನು ಬಂಧಿಸಿದ್ದಾರೆ. ಉತ್ತರಪ್ರದೇಶ ವಿಶೇಷ ಕಾರ್ಯ ಪಡೆ (ಎಸ್​ಟಿಎಫ್) ಸೋಮವಾರ ಒಬ್ಬನನ್ನು ಬಂಧಿಸಿತ್ತು.

    ದೆಹಲಿಯಲ್ಲಿ ಕರ್ಫ್ಯೂ: ಪಿಎಫ್​ಐ ಮತ್ತು ಎಸ್​ಡಿಪಿಐ ವಿರುದ್ಧ ಕಾರ್ಯಾಚರಣೆ ಬಿಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144ನೇ ಸೆಕ್ಷನ್ ಅನ್ವಯ ದೆಹಲಿಯ ಓಖ್ಲಾ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಕ್ಯಾಂಪಸ್ ಸುತ್ತಮುತ್ತ ಗುಂಪುಗೂಡದಂತೆ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಸೂಚಿಸಿದೆ. ಸೆ.19ರಿಂದಲೇ ನಿಷೇಧಾಜ್ಞೆ ಜಾರಿಯಲ್ಲಿದೆ.

    ಪರಿಹಾರಕ್ಕೆ ಅರ್ಜಿ: ಮೊದಲ ಹಂತದ ದಾಳಿಯ ವೇಳೆ ಪಿಎಫ್​ಐ ಕಾರ್ಯಕರ್ತರ ಬಂಧನ ವಿರೋಧಿಸಿ ನಡೆದ ಪ್ರತಿಭಟನೆಯಿಂದ 71 ಬಸ್​ಗಳಿಗೆ ಹಾನಿ ಮತ್ತು 11 ನೌಕರರಿಗೆ ಗಾಯವಾಗಿದೆ. ಇದಕ್ಕಾಗಿ 5.06 ಕೋಟಿ ರೂ. ನಷ್ಟ ಭರಿಸಿಕೊಡಬೇಖು ಎಂದು ಕೇರಳ ರಸ್ತೆ ಸಾರಿಗೆ ಸಂಸ್ಥೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

    ಪಿಎಫ್​ಐ ಕಾರ್ಯಕರ್ತರ ಮೇಲೆ ರಾಜ್ಯ ಪೊಲೀಸರು ದಾಳಿ ನಡೆಸಿಲ್ಲ. ಕೇವಲ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪೊಲೀಸರು ಅವರಿಗೆ ಬಂದ ಮಾಹಿತಿಯ ಆಧಾರದಲ್ಲಿ ಕ್ರಮ ಕೈಗೊಂಡಿದ್ದಾರೆ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪಿಎಫ್​ಐ, ಎಸ್​ಡಿಪಿಐನ 80ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದು ಕೆಲವರಿಂದ ಶ್ಯೂರಿಟಿ ಪಡೆದು ಬಿಡುಗಡೆ ಮಾಡಲಾಗಿದೆ. ಇನ್ನೂ ಕೆಲವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    | ಅಲೋಕ್​ಕುಮಾರ್ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ

    ಬೆಳಗಿನ ಜಾವ ಪೊಲೀಸ್ ದಾಳಿ

    ಕೆಲ ದಿನಗಳ ಹಿಂದೆ ಬೆಂಗಳೂರು ನಗರ ಪೊಲೀಸರು ಧರ್ಮಗಳ ನಡುವೆ ದ್ವೇಷ ಬಿತ್ತುವ ಮತ್ತು ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪ ಪ್ರಕರಣದಲ್ಲಿ 15 ಮಂದಿಯನ್ನು ಬಂಧಿಸಿದ್ದರು. ಮುಂದುವರಿದ ಭಾಗವಾಗಿ ಮಂಗಳವಾರ ಬೆಳಗಿನ ಜಾವ 3 ಗಂಟೆಯಿಂದಲೇ ರಾಜ್ಯಾದ್ಯಂತ ಜಿಲ್ಲಾ ಎಸ್​ಪಿಗಳ ನೇತೃತ್ವದಲ್ಲಿ ಪಿಎಫ್​ಐ ಮತ್ತು ಎಸ್​ಡಿಪಿಐ ಮುಖಂಡರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ 80ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

    ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್​ಕುಮಾರ್, ರಾಜ್ಯ ಗುಪ್ತದಳ ಕೊಟ್ಟ ಮಾಹಿತಿ ಮತ್ತು ಸರ್ಕಾರದ ಸೂಚನೆ ಮೇರೆಗೆ ವಿವಿಧೆಡೆ ಎಸ್​ಪಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮುಂಜಾಗ್ರತಾ ಕ್ರಮವಾಗಿ 80ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ದೇಶದಲ್ಲಿ ಎನ್​ಐಎ ಮತ್ತು ಇಡಿ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆ ವಿರುದ್ಧವಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ, ಕೋಮು ಸೌಹಾರ್ದಕ್ಕೆ ಹಾನಿ ಉಂಟು ಮಾಡಲು ಸಂಚು ರೂಪಿಸಲಾಗುತ್ತಿದೆ ಎಂಬ ವರದಿ ಲಭ್ಯವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಈ ದಾಳಿಯನ್ನು ನಡೆಸಲಾಗಿದೆ. ಪ್ರತಿಯೊಬ್ಬರನ್ನು ಆಯಾ ತಹಸೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳ ಮುಂದೆ ಹಾಜರುಪಡಿಸಲಾಗಿದೆ. ಜತೆಗೆ ವೈಯಕ್ತಿಕ ಮತ್ತು ಸರ್ಕಾರಿ ನೌಕರರಿಂದ ಶ್ಯೂರಿಟಿ ಪಡೆದು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಕೆಲವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಜ್ಯವ್ಯಾಪಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts