More

    2047ಕ್ಕೆ ಪ್ರಪಂಚದಲ್ಲೇ ಸಮೃದ್ಧ, ಬಲಿಷ್ಠ ರಾಷ್ಟ್ರವಾಗಲಿದೆ ಭಾರತ: ರಾಷ್ಟ್ರಪತಿ ದ್ರೌಪದಿ ಮುರ್ಮು ವಿಶ್ವಾಸ

    ಬೆಂಗಳೂರು: ಭಾರತ 2047ರ ವೇಳೆಗೆ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರಲಿದ್ದು, ಪ್ರಪಂಚದಲ್ಲೇ ಹೆಚ್ಚು ಸಮೃದ್ಧ ಮತ್ತು ಬಲಿಷ್ಠವಾಗಿ ಬೆಳೆಯಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟಿದ್ದಾರೆ.

    ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಬೆಂಗಳೂರು ಏರೋಸ್ಪೇಸ್ ವಿಭಾಗ ಆಯೋಜಿಸಿದ್ದ ಏಕೀಕೃತ ಕ್ರಯೋಜನಿಕ್ ಇಂಜಿನ್ ಉತ್ಪಾದನಾ ಸೌಲಭ್ಯ (ಐಸಿಎಂಎಫ್) ಉದ್ಘಾಟಿಸಿ ಮಾತನಾಡಿದರು. ಮುಂದಿನ 25 ವರ್ಷಗಳಲ್ಲಿ ಭಾರತ ಅಮೃತ ಕಾಲವನ್ನು ಪ್ರವೇಶಿಸುವುದರಿಂದ ಭವಿಷ್ಯದಲ್ಲಿ ಎಚ್​ಎಎಲ್ ಮತ್ತು ಇಸ್ರೋ ಸಂಸ್ಥೆಗಳು ಮಹತ್ವದ ಮತ್ತು ಸಕಾರಾತ್ಮಕ ಪಾತ್ರ ನಿರ್ವಹಿಸುತ್ತವೆ ಎಂದು ತಿಳಿಸಿದರು.

    ಎಚ್​ಎಎಲ್ ಮತ್ತು ಇಸ್ರೋ ಜಂಟಿಯಾಗಿ ಇಡೀ ದೇಶಕ್ಕೆ ಅತ್ಯಾಧುನಿಕ ಸೌಲಭ್ಯ ಹೊಂದಲು ಕ್ರಯೋಜೆನಿಕ್ ಮತ್ತು ಸೆಮಿ-ಕ್ರಯೋಜೆನಿಕ್ ಎಂಜಿನ್​ಗಳನ್ನು ತಯಾರಿಸುತ್ತಿವೆ. ಭಾರತವು ಈ ಸಾಮರ್ಥ್ಯ ಹೊಂದಿರುವ ವಿಶ್ವದ ಆರನೇ ದೇಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಐಸಿಎಂಎಫ್ ಉದ್ಘಾಟನೆ ಎಚ್​ಎಎಲ್ ಮತ್ತು ಇಸ್ರೋಗೆ ಮಾತ್ರವಲ್ಲ ಇಡೀ ದೇಶಕ್ಕೆ ಐತಿಹಾಸಿಕ ಕ್ಷಣ. ರಕ್ಷಣಾ ಕ್ಷೇತ್ರದಲ್ಲಿ ಭಾರತ ಆರ್ತನಿರ್ಭರವಾಗಲು ಎಚ್​ಎಎಲ್ ಅಪಾರ ಕೊಡುಗೆ ನೀಡಿದೆ. ಸಂಶೋಧನೆ, ಅಭಿವೃದ್ಧಿ ಮತ್ತು ವಿವಿಧ ಏರ್​ಕ್ರಾಫ್ಟ್ ಪ್ಲಾಟ್​ಫಾಮರ್್​ಗಳ ತಯಾರಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೆ ಮತ್ತೆ ಪ್ರದರ್ಶಿಸಿದೆ ಎಂದು ಶ್ಲಾಘಿಸಿದರು. ಕಾರ್ಯತಂತ್ರದ ರಕ್ಷಣೆ ಮತ್ತು ಅಭಿವೃದ್ಧಿಗೆ ಎಚ್​ಎಎಲ್ ಮತ್ತು ಇಸ್ರೋ ಜತೆಯಾಗಿ ಕೊಡುಗೆ ನೀಡುತ್ತಿವೆ. ರಕ್ಷಣಾ ಸಂಬಂಧಿತ ಉಪಕರಣಗಳನ್ನು ತಯಾರಿಸುವ ಶ್ರೇಷ್ಠ ದರ್ಜೆಯ ಸೌಲಭ್ಯ ಹೊಂದಿರುವ ಎಚ್​ಎಎಲ್ ದೇಶಕ್ಕೆ ಅಮೂಲ್ಯ ಆಸ್ತಿ ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳು ದಕ್ಷಿಣ ವಲಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸಿದರು.

    ರಾಜ್ಯಪಾಲ ಗೆಹಲೋತ್, ಕೇಂದ್ರ ಸಚಿವೆ ಭಾರತಿ ಪ್ರವೀಣ್ ಪವಾರ್, ಎಚ್​ಎಎಲ್ ಅಧ್ಯಕ್ಷ ಸಿ.ಬಿ.ಅನಂತಕೃಷ್ಣನ್, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಸಚಿವ ಡಾ.ಕೆ.ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.

    ಸರ್ಕಾರದಿಂದ ಸಂಶೋಧನೆಗೆ ಸಹಕಾರ

    ಭಾರತಕ್ಕೆ ಬಾಹ್ಯಾಕಾಶವನ್ನು ಜಯಿಸಲು ವಿಫುಲ ಅವಕಾಶಗಳಿವೆ. ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸಲು ಅನುವಾಗುವಂತೆ ಸಂಶೋಧನೆಗಳಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯದಲ್ಲಿ ಏರೋಸ್ಪೇಸ್ , ಆರ್ ಅಂಡ್ ಡಿ, ರಕ್ಷಣಾ ನೀತಿಗಳು ಜಾರಿಯಲ್ಲಿದ್ದು, ಸರ್ಕಾರದಿಂದ ಈ ಎಲ್ಲ ಸಂಶೋಧನೆಗಳಿಗೆ ಅಗತ್ಯ ಸಹಕಾರ ನೀಡಲಾಗು ವುದು. ನಮ್ಮ ಸರ್ಕಾರದ ಘೊಷವಾಕ್ಯ ‘ನವ ಭಾರತ ಕ್ಕಾಗಿ ನವ ಕರ್ನಾಟಕ’ ಎಂದಿದೆ ಎಂದು ಹೇಳಿದರು.

    ಶೇ.65 ಏರೋಸ್ಪೇಸ್ ಭಾಗ ರಫ್ತು: ದೇಶದ ಬಾಹ್ಯಾಕಾಶದ ನಗರವೆಂದು ಬೆಂಗಳೂರನ್ನು ಪರಿಗಣಿಸಲಾಗಿದೆ. ಶೇ.65 ಏರೋಸ್ಪೇಸ್ ಭಾಗಗಳನ್ನು ಬೆಂಗಳೂರಿನಿಂದ ರಪ್ತು ಮಾಡಲಾಗುತ್ತಿದೆ. ಶೇ.60 ರಕ್ಷಣಾ ಸಾಮಾಗ್ರಿಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಶೇ.25 ಏರೋಸ್ಪೇಸ್ ಭಾಗಗಳು ಬೆಂಗಳೂರಿನಲ್ಲಿ ಉತ್ಪಾದನೆಯಾಗುತ್ತಿದೆ. ಆದ್ದರಿಂದ ಬೆಂಗಳೂರು ಬಾಹ್ಯಾಕಾಶ ತಂತ್ರಜ್ಞಾನದ ಹಬ್ ಎಂದು ಖ್ಯಾತಿ ಪಡೆದಿದೆ. ಇಸ್ರೋ ಹೈಬ್ರಿಡ್ ಕ್ರಯೋಜೆನಿಕ್ ಇಂಜಿನ್ ಅಭಿವೃದ್ಧಿ ಪಡಿಸುತ್ತಿದ್ದು, ಎಚ್​ಎಎಲ್ ಶೀಘ್ರದಲ್ಲಿಯೇ ಉತ್ಪಾದನೆ ಮಾಡಲು ಸಾಧ್ಯವಾಗಲಿದೆ ಎಂದರು.

    ಆರೋಗ್ಯ ವಿಜ್ಞಾನದಲ್ಲೂ ಮುಂದೆ: ಆರೋಗ್ಯ ವಿಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅತಿ ಹೆಚ್ಚಿನ ಸಂಶೋಧನಾ ಕೇಂದ್ರಗಳು, ವೈದ್ಯಕೀಯ ಸಂಸ್ಥೆಗಳು ಅಂಗಾಂಗ ಕಸಿ ಕೇಂದ್ರಗಳು ಇಲ್ಲಿವೆ. ಒಂದು ವರ್ಷದೊಳಗೆ 200 ಪ್ರಯೋಗಾಲಯಗಳನ್ನು, ಆರ್.ಟಿ. ಪಿ.ಸಿ ಆರ್.ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎನ್.ಐ.ವಿ, ದಕ್ಷಿಣ ವಲಯವು ತನ್ನ ಹೊಸ ಆವಿಷ್ಕಾರಗಳಿಂದ ದೇಶಕ್ಕೇ ಸಹಾಯ ಮಾಡಲಿದೆ ಎಂದು ತಿಳಿಸಿದರು.

    ಬಾಹ್ಯಾಕಾಶ ತಂತ್ರಜ್ಞಾನದ ಹಬ್: ನಾವು ಇಂದು ನೂರಾರು ಉಪಗ್ರಹಗಳನ್ನು ಬ್ಯಾಹ್ಯಾಕಾಶಕ್ಕೆ ಹಾರಿಸಿದ್ದೇವೆ. ಈಗ ನಾವು ವಾಣಿಜ್ಯ ಉಪಗ್ರಹಗಳನ್ನು ಹಾರಿಸುವ ಮಟ್ಟಕ್ಕೆ ಬಂದಿದ್ದೇವೆ. ಮೂರು ದಶಕಗಳ ಹಿಂದೆ ಕ್ರಯೋಜೆನಿಕ್ ಇಂಜಿನ್ ಆಮದು ಮಾಡಿಕೊಳ್ಳುವುದು ದೊಡ್ಡ ಸಂಗತಿಯಾಗಿತ್ತು. ಪ್ರಧಾನಿ ಮೋದಿ ಆತ್ಮನಿರ್ಭರ ಭಾರತ ಘೊಷಣೆಯಂತೆ ನಾವು ಈಗ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದೇವೆ ಎಂದು ಸಿಎಂ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts