1 ಕೋಟಿ ರೂ. ತೆರಿಗೆ ವಂಚನೆ: ಕೂಲಿ ಕೆಲ್ಸ ಮಾಡೋ ಮಹಿಳೆಯನ್ನು ಬಂಧಿಸಲು ಹೋದ ಅಧಿಕಾರಿಗಳಿಗೆ ಶಾಕ್​​!

Tax Officers
Published on

ಚೆನ್ನೈ: ಬರೋಬ್ಬರಿ ಒಂದು ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಲಾಗಿದೆ ಎಂದು ತಮಿಳುನಾಡಿನ ತಿರುಪಟ್ಟೂರ್​ ಜಿಲ್ಲೆಯ ಅಂಬೂರ್​ ಬಳಿಯಿರುವ ಮೆಲ್ಮಿಟ್ಟಲಂ ಗ್ರಾಮದ ಕೂಲಿ ಕೆಲಸ ಮಾಡುವ ಮಹಿಳೆ ಮನೆಯನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹುಡುಕಿಕೊಂಡ ಬಂದ ವಿಚಿತ್ರ ಘಟನೆ ವರದಿಯಾಗಿದೆ.

ಜಿ ಕೃಷ್ಣವೇಣಿ (44) ಮತ್ತು ಆಕೆಯ ಪತಿ ಗೋವಿದಾಸಾಮಿ ಅಂಬೂರ್​ನಲ್ಲಿರುವ ಶೂ ಫ್ಯಾಕ್ಟರಿಯಲ್ಲಿ ಕಳೆದ ಕೆಲ ವರ್ಷಗಳಿಂದ ಕೆಲಸ ಕೂಲಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್​ 31ರ ಬೆಳಗ್ಗೆ 11.30ರ ಸುಮಾರಿಗೆ ಕೆಲ ಆದಾಯ ತೆರಿಗೆ ಅಧಿಕಾರಿಗಳು ಕೃಷ್ಣವೇಣಿಯನ್ನು ಹುಡುಕಿಕೊಂಡು ಸರ್ಕಾರಿ ವಾಹನದಲ್ಲಿ ಮೆಲ್ಮಿಟ್ಟಲಂ ಗ್ರಾಮಕ್ಕೆ ಆಗಮಿಸುತ್ತಾರೆ. ಗ್ರಾಮಕ್ಕೆ ಆಗಮಿಸುವ ಅಧಿಕಾರಿಗಳು ಒಂದು ಕೋಟಿ ತೆರಿಗೆ ವಂಚನೆ ಸಂಬಂಧ ಕೃಷ್ಣವೇಣಿ ಎಂಬುವರನ್ನು ಹುಡುಕುತ್ತಿದ್ದೇವೆ ಎಂದು ಹೇಳುತ್ತಾರೆ. ಈ ವಿಚಾರ ಕೇಳಿದ ಗ್ರಾಮಸ್ಥರು ಅಚ್ಚರಿಗೀಡಾಗುತ್ತಾರೆ.

ಚೆನ್ನೈನ ತಾಂಬರಂನಲ್ಲಿರುವ ಲೆದರ್​ ಹಾಗೂ ಗುಜರಿ ಕಂಪನಿಯ ಮಾಲೀಕರಾಗಿದ್ದಾರೆ. ಅವರು ಒಂದು ಕೋಟಿ ರೂ. ತೆರಿಗೆ ವಂಚನೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಬಳಿಕ ಗ್ರಾಮಸ್ಥರು ಕೃಷ್ಣವೇಣಿ ಅವರ ಮನೆಯನ್ನು ಅಧಿಕಾರಿಗಳಿಗೆ ತೋರಿಸುತ್ತಾರೆ. ತಮ್ಮ ಮನೆಗೆ ದಿಢೀರನೇ ಅಧಿಕಾರಿಗಳು ಬಂದಿದ್ದನ್ನು ನೋಡಿ ಆಕೆ ಶಾಕ್​ ಆಗುತ್ತಾಳೆ. ಯಾಕೆ ಬಂದ್ರಿ? ಏನಾಗ್ಬೇಕಿತ್ತು ನಿಮಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸುತ್ತಾಳೆ. ಅಧಿಕಾರಿಗಳು ತಾವು ಬಂದಿದ್ದಕ್ಕೆ ಕಾರಣ ಹೇಳಿದಾಗ ಒಂದು ಕ್ಷಣ ಕೃಷ್ಣವೇಣಿಗೆ ಸಿಡಿಲು ಬಂಡಿದಂತಾಗುತ್ತದೆ.

ಒಂದೊಂದು ರೂಪಾಯಿಗೂ ಬೆವರಿನ ಜತೆ ರಕ್ತವನ್ನು ಹರಿಸುವ ನಾವು ಒಂದು ಕೋಟಿ ಎಂದೂ ನೋಡಿಲ್ಲ. ನೀವು ಹೇಳಿದ ತಾಂಬರಂ ಪ್ರದೇಶವೂ ಎಲ್ಲಿದೆ ಅಂತಾ ನಮಗೆ ತಿಳಿದಿಲ್ಲ. ಆಸ್ಪತ್ರೆ ಉದ್ದೇಶದಿಂದ ಒಂದೆರೆಡು ಬಾರಿ ಚೆನ್ನೈಗೆ ಹೋಗಿ ಬಂದಿದ್ದೇವೆ ಹೊರತು ಮತ್ತೆ ಅತ್ತ ಸುಳಿದೂ ಇಲ್ಲ ಕೃಷ್ಣವೇಣಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇತ್ತ ಕೃಷ್ಣವೇಣಿಯನ್ನು ಹುಡುಕಿಕೊಂಡ ಬಂದ ಅಧಿಕಾರಿಗಳಿಗೂ ಕೂಡ ಶಾಕ್​ ಆಗುತ್ತದೆ. ಆಕೆಯ ಜೀವನ ಸ್ಥಿತಿಯನ್ನು ನೋಡಿ ಈಕೆ ಒಂದು ಕೋಟಿ ರೂ. ಅದು ತೆರಿಗೆ ವಂಚನೆ ಮಾಡಲು ಹೇಗೆ ಸಾಧ್ಯ ಎಂದು ಅಂದುಕೊಳ್ಳುತ್ತಾರೆ. ಬಳಿಕ ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬರುತ್ತದೆ. ಅದೇನೆಂದರೆ, ಕೆಲ ದುಷ್ಕರ್ಮಿಗಳು ಆಧಾರ್​ ಕಾರ್ಡ್​ ಮಾಹಿತಿ ಸೇರಿದಂತೆ ಕೃಷ್ಣವೇಣಿಯ ಸರ್ಕಾರಿ ದಾಖಲೆಗಳನ್ನು ಹೇಗೋ ಪಡೆದುಕೊಂಡು ಅವಳ ಹೆಸರಿನಲ್ಲಿ ಅಕ್ರಮವಾಗಿ ಚೆನ್ನೈ ವ್ಯವಹಾರ ನಡೆಸುತ್ತಿದ್ದಾರೆ.

ತನಿಖೆಯ ನಂತರ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ಕೃಷ್ಣವೇಣಿಯಾಗಲಿ ಅಥವಾ ಅವರ ಕುಟುಂಬವಾಗಲಿ ಚೆನ್ನೈ ನಡೆಯುತ್ತಿರುವ ವ್ಯವಹಾರಕ್ಕೆ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಇದೀಗ ಆರೋಪಿಗಳ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net