More

    ಲೋಕಲ್ ಫೈಟ್​ಗೆ ಗ್ರಹಣ?; ಜಿಪಂ-ತಾಪಂ ಪುನರ್ ವಿಂಗಡಣೆಗೆ ಪ್ರತ್ಯೇಕ ಆಯೋಗ

    ಬೆಂಗಳೂರು: ವಾರ್ಡ್​ಗಳ ಮರುವಿಂಗಡಣೆ ಕಾರಣ ಮುಂದಿಟ್ಟು ಬಿಬಿಎಂಪಿ ಚುನಾವಣೆ ಮುಂದೂಡುವಲ್ಲಿ ಯಶಸ್ವಿಯಾಗಿದ್ದ ಸರ್ಕಾರ ಇದೀಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ವಿಚಾರದಲ್ಲೂ ಅದೇ ತಂತ್ರಗಾರಿಕೆಗೆ ಮೊರೆ ಹೋಗಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಅಧಿಕಾರವನ್ನು ರಾಜ್ಯ ಚುನಾವಣೆ ಆಯೋಗದಿಂದ ಬೇರ್ಪಡಿಸಿ ಅದಕ್ಕೆಂದೇ ಪ್ರತ್ಯೇಕ ಆಯೋಗವನ್ನು ರಚಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶನಿವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಮುಂಬರುವ ಅಧಿವೇಶನದಲ್ಲಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಅನುಮೋದನೆ ನೀಡಲಾಗಿದೆ. ಈ ಬೆಳವಣಿಗೆಯಿಂದಾಗಿ ಡಿಸೆಂಬರ್ ಒಳಗೆ ನಡೆಯಬೇಕಿದ್ದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಮುಂದಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ.

    ಪ್ರತ್ಯೇಕ ಆಯೋಗ: ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರತ್ಯೇಕ ಕ್ಷೇತ್ರ ಪುನರ್ವಿಂಗಡಣಾ ಆಯೋಗ ರಚಿಸಲಾಗುತ್ತದೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆ ಕೆಲಸವನ್ನು ಈ ಆಯೋಗ ನಿರ್ವಹಿಸಲಿದೆ. ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸಭೆಯ ಬಳಿಕ ಸಂಪುಟದ ನಿರ್ಣಯಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ನೂತನ ಆಯೋಗದಿಂದ ಹೊಸದಾಗಿ ಕ್ಷೇತ್ರ ಪುನರ್ ವಿಂಗಣೆಗೆ ಆಗಬೇಕೆಂಬ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ತಿಳಿಸುವುದಾಗಿ ಹೇಳಿದರು.

    ಕಾರಣವೇನು?: ಕಾನೂನಿನ ಪ್ರಕಾರವೇ ರಾಜ್ಯ ಚುನಾವಣಾ ಆಯೋಗದಿಂದ ಕ್ಷೇತ್ರ ಪುನರ್ವಿಂಗಡಣೆಗೆ ಅವಕಾಶವಿಲ್ಲ. ಕಳೆದ ಬಾರಿ ತಪ್ಪಾಗಿ ಈ ಪ್ರಕ್ರಿಯೆ ನಡೆದುಹೋಗಿದೆ. ಇದರಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆಯೂ ದೋಷಪೂರಿತವಾಗಿದೆ ಎಂದು ಆರೋಪಿಸಿ 2,000ಕ್ಕೂ ಅರ್ಜಿ ಸಲ್ಲಿಕೆಯಾಗಿವೆ. ಇಂತಹ ಸಮಸ್ಯೆ ತಪ್ಪಿಸಲು ಪ್ರತ್ಯೇಕ ಆಯೋಗ ರಚನೆಗೆ ತೀರ್ವನಿಸಲಾಯಿತು ಎಂದು ತಿಳಿಸಿದರು.

    ಕಾರ್ಯನಿರ್ವಹಣೆ ಹೇಗೆ?

    1. ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆ
    2. ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಸದಸ್ಯರಾದರೆ, ಆಯುಕ್ತರು ಸದಸ್ಯ ಕಾರ್ಯದರ್ಶಿ
    3. ಅಗತ್ಯ ಇರುವ ಸಂದರ್ಭಗಳಲ್ಲಿ ಸೀಮಿತ ಕಾಲಾವಧಿಗೆ ಆಯೋಗ ರಚನೆ ನಂತರ ವಿಸರ್ಜನೆ
    4. ಪ್ರತ್ಯೇಕ ಆಯೋಗ ಸಿದ್ಧಪಡಿಸುವ ಕ್ಷೇತ್ರ ಪುನರ್ವಿಂಗಡಣಾ ವರದಿಗಳಿಗೆ 2 ಹಂತಗಳಲ್ಲಿ ಸಲಹೆ, ಆಕ್ಷೇಪಣೆ ಸ್ವೀಕರಿಸಿ, ಇತ್ಯರ್ಥ
    5. ಜಿಲ್ಲಾಧಿಕಾರಿ ಹಂತದಲ್ಲಿ ಮೊದಲು ಆಕ್ಷೇಪಣೆ ಸ್ವೀಕಾರ, ಬಳಿಕ ಕ್ಷೇತ್ರ ಪುನರ್ವಿಂಗಡಣಾ ಆಯೋಗವೇ ಆಕ್ಷೇಪಣೆ ಸ್ವೀಕರಿಸಿ, ವಿಲೇವಾರಿ ಮಾಡುವ ವ್ಯವಸ್ಥೆ

    ನಾಳೆಯೇ ಹೈಕೋರ್ಟ್​ಗೆ: ಸಂಪುಟದ ನಿರ್ಣಯವನ್ನು ಸೋಮವಾರವೇ ಹೈಕೋರ್ಟ್ ಗಮನಕ್ಕೆ ತರಲು ಸರ್ಕಾರ ನಿರ್ಧರಿಸಿದೆ. ಹೈಕೋರ್ಟ್ ಒಪ್ಪಿದರೆ ಹೊಸದಾಗಿ ರಚನೆಯಾಗಲಿರುವ ಆಯೋಗ ಮತ್ತೊಮ್ಮೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣಾ ಪ್ರಕ್ರಿಯೆ ನಡೆಸಲಿದೆ. ಬಳಿಕ ಆಕ್ಷೇಪಣೆಗೆ ಅವಕಾಶ ಮಾಡಿಕೊಡಲಿದೆ. ಬಳಿಕ ಮೀಸಲಾತಿ ನಿಗದಿಯಾಗಿ, ಚುನಾವಣೆ ನಡೆಯುವುದು.

    ಎಲೆಕ್ಷನ್ ಕತೆಯೇನು?: ಹೈಕೋರ್ಟ್ ಒಪ್ಪಿ, ಆಕ್ಷೇಪಣೆ, ಮೀಸಲಾತಿ ನಿಗದಿಯಾಗುವ ಪ್ರಕ್ರಿಯೆ ಮುಗಿಯಲು ಸಾಕಷ್ಟು ಕಾಲ ಹಿಡಿಯುತ್ತದೆ. ಹೀಗಾಗಿ 2021ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ಸರ್ಕಾರದ ಪ್ರಸ್ತಾವನೆಯನ್ನು ನ್ಯಾಯಾಲಯ ಒಪ್ಪದೇ ಹೋದರಷ್ಟೇ ಡಿಸೆಂಬರ್ ವೇಳೆಗೆ ಚುನಾವಣೆ ನಡೆಯಬಹುದು.

    ರಾಜಕೀಯ ಗೊಂದಲ: ಚುನಾವಣಾ ಆಯೋಗ ಜಿಲ್ಲಾ ಪಂಚಾಯತಿ ಸೀಟುಗಳ ಸಂಖ್ಯೆ 1,191 ಹಾಗೂ ತಾಲೂಕು ಪಂಚಾಯತಿ ಸ್ಥಾನಗಳ ಸಂಖ್ಯೆ 3,285ಕ್ಕೆ ಹೆಚ್ಚಿಸಿ ಚುನಾವಣೆ ನಡೆಸಲು ಉತ್ಸುಕವಾಗಿತ್ತು. ಆದರೆ, ಕ್ಷೇತ್ರ ಪುನರ್ ವಿಂಗಡಣೆ ಸರಿಯಾಗಿಲ್ಲ ಎಂಬ ವಾದ ಮೂರು ಪಕ್ಷಗಳಲ್ಲಿತ್ತು. ಸರಿಯಾದ ರೀತಿಯಲ್ಲಿ ಆಕ್ಷೇಪಣೆಗೆ ಸ್ಪಂದನೆ ಸಿಗಲಿಲ್ಲ. ಕ್ಷೇತ್ರ ಹೆಚ್ಚಿಸಬೇಕೆಂದು ಏನೇನೋ ಮಾಡಿಬಿಟ್ಟಿದ್ದಾರೆಂಬ ಬಹಿರಂಗ ಹೇಳಿಕೆ ಬಂದಿತ್ತು. ಜತೆಗೆ ಮೀಸಲಾತಿ ನಿಗದಿ ಮಾಡಿದ್ದರ ಬಗ್ಗೆ ಖುದ್ದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು. ಕರೊನಾ ಕಾರಣಕ್ಕೆ ಡಿಸೆಂಬರ್​ವರೆಗೆ ಚುನಾವಣೆ ಮುಂದೂಡಬೇಕೆಂದು ಸರ್ಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು, ಆದರೆ ಇದ್ದಕ್ಕಿದ್ದಂತೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಮೀಸಲಾತಿ ವಿಭಾಗಗಳನ್ನು ಘೊಷಿಸಲಾಗಿದೆ ಎಂದು ಹೇಳಿದ್ದರು.

    ಡಿಲಿಮಿಟೇಶನ್ ಕಮಿಷನ್ ನೇಮಕ ಮಾಡಿದ್ದ ವಿಚಾರವನ್ನು ಕೋರ್ಟ್​ಗೆ ತಿಳಿಸುತ್ತೇವೆ. ಕೋರ್ಟ್ ಒಪ್ಪಿದರೆ ಹೊಸದಾಗಿ ಮಾಡಿಕೊಡುತ್ತೇವೆ. ಈ ಹಿಂದೆ ಕ್ಷೇತ್ರ ಪುನರ್ ವಿಂಗಡಣೆ ಸರ್ಕಾರದ ಹಂತದಲ್ಲಿತ್ತು. ಆದರೆ, ಯಾವುದೋ ಕಾರಣಕ್ಕೆ ಅದನ್ನು ಆಯೋಗಕ್ಕೆ ವರ್ಗಾಯಿಸಲಾಗಿತ್ತು. ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲದಿರುವುದರಿಂದ ಕಮಿಷನ್ ರಚಿಸಲಾಗುತ್ತದೆ.

    | ಮಾಧುಸ್ವಾಮಿ ಕಾನೂನು ಮತ್ತು ಸಂಸದೀಯ ಸಚಿವ

    ಆನ್​ಲೈನ್ ಜೂಜು ಬ್ಯಾನ್: ರಾಜ್ಯದಲ್ಲಿ ಆನ್​ಲೈನ್ ಜೂಜಿಗೆ ಬ್ರೇಕ್ ಹಾಕುವುದಕ್ಕಾಗಿ ಕಾನೂನಿನ ಬೇಲಿ ನಿರ್ವಿುಸಲು ಸರ್ಕಾರ ಮುಂದಾಗಿದೆ. ಆನ್​ಲೈನ್ ಜೂಜು ನಿಷೇಧಿಸುವ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ. ಈ ಸಂಬಂಧ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಹೈಕೋರ್ಟ್ ಸೂಚನೆಯಂತೆಯೇ ಆನ್​ಲೈನ್ ಜೂಜು ನಿಯಂತ್ರಣಕ್ಕೆ ಪೂರಕವಾಗಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದರು. ಹಣ ಹೂಡಿಕೆಯ ಆನ್​ಲೈನ್ ಆಟಗಳ ವಿರುದ್ಧ ಕ್ರಮ ಜರುಗಿಸಲು ಅವಕಾಶ ಕಲ್ಪಿಸಲು ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದರು.

    ಯಾವ್ಯಾವ ಆಟ?: ಆಟದ ನೆಪದಲ್ಲಿ ಲಾಭ ಮಾಡಿಕೊಳ್ಳುವುದು, ಆನ್​ಲೈನ್ ಬಾಜಿ ಕಟ್ಟುವುದು, ಟೋಕನ್ ಪದ್ಧತಿ, ವರ್ಚುಯಲ್ ಅಥವಾ ಯಾವುದೇ ರೂಪದಲ್ಲಿ ಹಣ ವಹಿವಾಟು ಮಾಡುವುದನ್ನು ಪರಿಗಣಿಸಲಾಗುತ್ತದೆ. ಲಾಟರಿ ಬೆಟ್ಟಿಂಗ್, ಕುದುರೆ ರೇಸ್ ಈ ಪಟ್ಟಿಯಲ್ಲಿ ಸೇರಿಸಿಲ್ಲ. ಆನ್​ಲೈನ್ ಗೇಮಿಂಗ್ ಅಂದರೆ ಯಾವುದು, ಅದರಲ್ಲಿ ಜೂಜು ಎಂದು ಪರಿಗಣನೆಯಾಗುವುದು ಯಾವುದು ಎಂಬ ಬಗ್ಗೆ ಬಗ್ಗೆ ಪ್ರಸ್ತಾವನೆಯಲ್ಲಿ ವಿಶ್ಲೇಷಿಸಲಾಗಿದೆ.

    ಜಾಗ ಕಬಳಿಸಲು ಸಹೋದರರಿಬ್ಬರ ರೌಡಿಸಂ; ವೃದ್ಧ ದಂಪತಿಯಿಂದ ಪೊಲೀಸರಿಗೆ ದೂರು

    ಡಾ.ರಾಜಕುಮಾರ್-ಡಾ.ವಿಷ್ಣುವರ್ಧನ್​ ಅಭಿಮಾನಿಗಳ ಅಪೂರ್ವ ಸಂಗಮ; ಜಂಟಿ ಹೋರಾಟಕ್ಕೂ ಸಜ್ಜಾದ ಅಭಿಮಾನಿಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts