ನಾಲ್ಕು ದಿನಗಳ ಹಿಂದಷ್ಟೇ ಮದುವೆ ಆಗಿದ್ದ ನವದಂಪತಿ ಭೀಕರ ಅಂತ್ಯ: ತಿರುವಿನಲ್ಲಿ ಕಾದಿದ್ದ ಜವರಾಯ

Newlyweds
Published on

ತಿರುವಳ್ಳೂರು: ನಾಲ್ಕು ದಿನಗಳ ಹಿಂದಷ್ಟೇ ಮದುವೆ ಆಗಿದ್ದ ನವಜೋಡಿ ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ಅರಕ್ಕೊಣಮ್​ ಮೂಲದ ಮನೋಜ್​ ಕುಮಾರ್​ (31) ಮತ್ತು ಪೆರುಗಲಥೂರ್​ ಮೂಲದ ಕಾರ್ತಿಕಾ (30) ಮೃತ ದಂಪತಿ. ಕಾಂಕ್ರಿಟ್​ ಮಿಕ್ಸರ್​ ಲಾರಿ ಕಾರಿನ ಮೇಲೆ ಬಿದ್ದು ದುರ್ಘಟನೆ ಸಂಭವಿಸಿದೆ.

ಮನೋಜ್​ ಕುಮಾರ್​ ಅವರು ಮೆಡಿಕಲ್​ ರೆಪ್​ ಆಗಿ ಕೆಲಸ ಮಾಡುತ್ತಿದ್ದರು. ಕಾರ್ತಿಕಾ ಖಾಸಗಿ ಕ್ಲೀನಿಕ್​ ಒಂದರಲ್ಲಿ ವೈದ್ಯೆ ಆಗಿದ್ದರು. ಅಕ್ಟೋಬರ್​ 28ರಂದು ಇಬ್ಬರು ಮದುವೆ ಆಗಿದ್ದರು. ಭಾನುವಾರ ಕಾರ್ತಿಕಾ ಮನೆಗೆ ಹೋಗಿ ಅರಕ್ಕೊಣಮ್​ಗೆ ಹಿಂದಿರುಗುತ್ತಿದ್ದರು.

ಪೂನಮೆಲೀ-ಅರಕ್ಕೊಣಮ್​ ಹೆದ್ದಾರಿ ನಡುವಿನ ಕಡಂಬಥೂರ್​ ಸಮೀಪ ಭಾನುವಾರ ರಾತ್ರಿ 9.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ಎದರಿನಿಂದ ಬಂದ ಕಾಂಕ್ರಿಟ್​ ಮಿಕ್ಸರ್​ ಲಾರಿ ತಿರುವ ಪಡೆಯಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ​ ಕಾರಿನ ಮೇಲೆ ಬಿದ್ದಿದೆ.

ಮಿಕ್ಸರ್​ ಲಾರಿ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಘಟನೆ ನಡೆದ ಎರಡು ಗಂಟೆಯ ನಂತರ ಮಿಕ್ಸರ್​ ಲಾರಿಯನ್ನು ತೆರವುಗೊಳಿಸಲಾಯಿತು. ಇದರ ಬೆನ್ನಲ್ಲೇ ಸ್ಥಳಕ್ಕೆ ಆಂಬ್ಯುಲೆನ್ಸ್​ ದೌಡಾಯಿಸಿತು. ಆದರೆ, ಅಷ್ಟರಲ್ಲಾಗಲೇ ದಂಪತಿ ಸಾವಿಗೀಡಾಗಿದ್ದರು. ಮೃತದೇಹಗಳನ್ನು ವಶಕ್ಕೆ ಪಡೆದ ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಯ ಬೆನ್ನಲ್ಲೇ ಮಿಕ್ಸರ್​ ಲಾರಿ ಡ್ರೈವರ್​ ಎಸ್ಕೇಪ್​ ಆಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡ್ರೈವರ್​ಗಾಗಿ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net