

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ, ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ಸ್ಟಾಕ್ಹೋಮ್ನಲ್ಲಿ ಗುರುವಾರ (ಜೂನ್ 30) ನಡೆದ ಡೈಮಂಡ್ ಲೀಗ್ನಲ್ಲಿ 89.94 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಜಯಿಸಿದ್ದಲ್ಲದೆ, ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
24 ವರ್ಷ ವಯಸ್ಸಿನ ನೀರಜ್, 2021ರ ಆಗಸ್ಟ್ 7ರಂದು ಟೋಕಿಯೋ ಒಲಿಂಪಿಕ್ಸ್ನಲ್ಲಿ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದರು. 2021ರ ಮಾರ್ಚ್ನಲ್ಲಿ ಪಟಿಯಾಲಾದಲ್ಲಿ ಜಾವೆಲಿನ್ ಅನ್ನು 88.07 ಮೀಟರ್ ದೂರಕ್ಕೆ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
ಇದೀಗ ಒಂದೇ ತಿಂಗಳಲ್ಲಿ ಎರಡು ಬಾರಿ ತಮ್ಮ ಒಲಿಂಪಿಕ್ಸ್ ದಾಖಲೆಯನ್ನು ನೀರಜ್ ಚೋಪ್ರಾ ಮುರಿದಿದ್ದಾರೆ. ಕಳೆದ ಜೂನ್ 15ರಂದು ಫಿನ್‌ಲ್ಯಾಂಡ್‌ನ ಸ್ಪರ್ಧೆಯ ಮೊದಲ ಸುತ್ತಿನಲ್ಲಿ 86.92 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ನೀರಜ್, 2ನೇ ಅವಕಾಶದಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಮುಟ್ಟಿಸಿದರು. ಆ ಮೂಲಕ ತನ್ನದೇ ಹಿಂದಿನ ದಾಖಲೆಯನ್ನು ಮುರಿದ್ದರು. ಇದೀಗ ಸ್ಟಾಕ್ಹೋಮ್ನಲ್ಲಿ ಗುರುವಾರ (ಜೂನ್ 30) ನಡೆದ ಡೈಮಂಡ್ ಲೀಗ್ನಲ್ಲಿ 89.94 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನದೊಂದಿಗೆ ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
ಡೈಮಂಡ್ ಲೀಗ್ನಲ್ಲಿ ನೀರಜ್ ಚೋಪ್ರಾ ಎರಡನೇ ಸ್ಥಾನ ಪಡೆದರೆ, ಆ್ಯಂಡರ್ಸನ್ ಪೀಟರ್ 90.31 ಮೀಟರ್ ಎಸೆಯುವ ಮೂಲಕ ಮೊದಲ ಸ್ಥಾನದೊಂದಿಗೆ ವಿಶ್ವ ಚಾಂಪಿಯನ್ ಎನಿಸಿಕೊಂಡರು.
ಮೊದಲ ಬಾರಿಗೆ ಡೈಮಂಡ್ ಲೀಗ್ ಮೀಟ್‌ನಲ್ಲಿ ಅಗ್ರ 3 ರಲ್ಲಿ ಸ್ಥಾನ ಪಡೆದ ನೀರಜ್ ಚೋಪ್ರಾ, ಒಟ್ಟು 6 ಥ್ರೋಗಳನ್ನು ಎಸೆದರು. ಮೊದಲ ಎಸೆತದಲ್ಲೇ 89.94 ಮೀಟರ್ ಮೂಲಕ ತಮ್ಮದೇ ದಾಖಲೆಯನ್ನು ಮುರಿದರು. ಉಳಿದ ಐದು ಎಸೆತಗಳಲ್ಲಿ ಕ್ರಮವಾಗಿ 84.37 ಮೀ, 87.46 ಮೀ, 84.77 ಮೀ, 86.67 ಮೀ, ಮತ್ತು 86.84 ಮೀ. ಎಸೆದರು. (ಏಜೆನ್ಸೀಸ್)