ಮೈಸೂರು ಮೇಯರ್​ ಚುನಾವಣೆ: ಹೀಗಿದೆ ಜೆಡಿಎಸ್-ಬಿಜೆಪಿ ನಡುವಿನ ಕೊಡು-ಕೊಳ್ಳುವಿಕೆ ಒಪ್ಪಂದ!

Mysuru Mayor
Published on

ಮೈಸೂರು: ಭಾರೀ ಕುತೂಹಲ ಸೃಷ್ಟಿಸಿರುವ ಸಾಂಸ್ಕೃತಿಕ ನಗರಿ ಮೈಸೂರಿನ ಮಹಾನಗರ ಪಾಲಿಕೆಯ ಮೇಯರ್​ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಕೊಡು-ಕೊಳ್ಳುವಿಕೆ ಒಪ್ಪಂದ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಇಂದು ಮೇಯರ್​ ಚುನಾವಣೆ ನಡೆಯಲಿದ್ದು, ಈ ಬಾರಿ ಆರು ತಿಂಗಳ ಅಲ್ಪಾವಧಿಗೆ ಬಿಜೆಪಿಗೆ ಮೇಯರ್ ಹುದ್ದೆ ದೊರೆಯಲಿದೆ ಎಂಬ ಮಾತುಗಳು ಕೇಳಿಬಂದಿದೆ. ಮುಂದಿನ ಎರಡೂ ಪೂರ್ಣಾವಧಿಗೆ ಜೆಡಿಎಸ್‌ಗೆ ಮೇಯರ್ ಗಾದಿ ಸಿಗಲಿದೆಯಂತೆ. ಈ ಬಾರಿ ಹೆಚ್ಚು ಸ್ಥಾಯಿ ಸಮಿತಿ ಜೆಡಿಎಸ್‌ಗೆ ಹಾಗೂ ಮುಂದೆ ಪ್ರಭಾವಿ ಸ್ಥಾಯಿ ಸಮಿತಿಗಳು ಬಿಜೆಪಿಗೆ ನೀಡುವ ಷರತ್ತಿಗೆ ಜೆಡಿಎಸ್ ಮತ್ತು ಬಿಜೆಪಿಯ ಬಹುತೇಕ ಎಲ್ಲ ನಾಯಕರೂ ಸಮ್ಮಿತಿಸಿದ್ದಾರೆನ್ನಲಾಗಿದೆ.

ವರಿಷ್ಠರ ನಿರ್ಧಾರಕ್ಕೆ ಬಿಜೆಪಿ ಪಾಲಿಕೆ ಸದಸ್ಯರಿಂದಲೂ ಒಪ್ಪಿಗೆಯಾಗಿದೆ. ಆದರೆ, ಜೆಡಿಎಸ್‌ನ ಕೆಲವು ಸದಸ್ಯರಿಂದ ಅಸಮಾಧಾನ ವ್ಯಕ್ತವಾಗಿದೆಯಂತೆ. ಅನಿವಾರ್ಯವಾಗಿ ಬಿಜೆಪಿಗೆ ಸಹಕಾರ ನೀಡಲು ಒಲ್ಲದ ಮನಸ್ಸಿನಿಂದ ಜೆಡಿಎಸ್ ಕಾರ್ಪೋರೇಟರ್‌ಗಳು ಒಪ್ಪಿದ್ದಾರೆಂದು ತಿಳಿದುಬಂದಿದೆ.

ಮೇಯರ್ ಹುದ್ದೆಗೆ ಮೂರೂ ಪಕ್ಷಗಳಿಂದ ಸೆಣಸಾಟ ಆರಂಭವಾಗಿದೆ. ಕಾಂಗ್ರೆಸ್ ನಿಂದ ಶಾಂತಕುಮಾರಿ, ಬಿಜೆಪಿಯಿಂದ ಸುನಂದಾ ಪಾಲನೇತ್ರ ಮೇಯರ್​ ಅಭ್ಯರ್ಥಿಗಳಾಗಿದ್ದಾರೆ. ಇನ್ನೂ ಅಭ್ಯರ್ಥಿಯ ಆಯ್ಕೆಯ ಗೊಂದಲದಲ್ಲಿ ಜೆಡಿಎಸ್ ಮುಳುಗಿದೆ. ಪ್ರೇಮಾ ಶಂಕರೇಗೌಡ ಹಾಗೂ ಅಶ್ವಿನಿ ಅನಂತು ಜೆಡಿಎಸ್ ಮೇಯರ್ ಆಕಾಂಕ್ಷಿಗಳಾಗಿದ್ದಾರೆ.

ಯಾರಾಗಳಿದ್ದಾರೆ ಮೈಸೂರಿನ ಮೊದಲ ಪ್ರಜೆ.?

ಬಿಜೆಪಿ ಅತಿ ಹೆಚ್ಚು ಸದಸ್ಯರ ಬಲ ಹೊಂದಿದ್ದು, ಕಾಂಗ್ರೆಸ್​ ಎರಡನೇ ಸ್ಥಾನದಲ್ಲಿದೆ. ಜೆಡಿಎಸ್ ನಿರ್ಧಾರದ ಮೇಲೆ ಇಂದಿನ ಮೇಯರ್ ಆಯ್ಕೆ ಚುನಾವಣೆ ನಿಂತಿದೆ. ಒಟ್ಟು ಪಾಲಿಕೆ ಸದಸ್ಯರ ಸಂಖ್ಯೆ 64. ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿ 8+64=72 ಆಗುತ್ತದೆ. ಇಂದಿನ ಮೇಯರ್ ಚುನಾವಣೆಯಲ್ಲಿ 72 ಸದಸ್ಯರು ಮತ ಚಲಾಯಿಸಲಿದ್ದಾರೆ.

ಪಕ್ಷಗಳ ಬಲಾಬಲ ಹೀಗಿದೆ...

ಬಿಜೆಪಿ 22 +1+2=25 (ಸಂಸದರು+ಇಬ್ಬರು ಶಾಸಕರು)

ಕಾಂಗ್ರೆಸ್ 19+1=20 (ಶಾಸಕರು) ಈ ಪೈಕಿ ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನಾ ಮತ ಚಲಾಯಿಸುವಂತಿಲ್ಲ.

ಜೆಡಿಎಸ್ 17+1+3=21 (ಒಬ್ಬರು ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು.)

ಪಕ್ಷೇತರ- 5 (ಈ ಪೈಕಿ ಇಬ್ಬರು ಪಕ್ಷೇತರರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಹಾಗೂ ಒಬ್ಬರು ಬಿಜೆಪಿಗೆ ಸೇರ್ಪಡೆ)

ಬಿಎಸ್ಪಿ-1

ಇಲ್ಲಿ ಮ್ಯಾಜಿಕ್ ನಂಬರ್ ಅವಶ್ಯಕತೆ ಇಲ್ಲ. ಯಾರು ಅತಿ ಹೆಚ್ಚು ಮತಗಳನ್ನ ಪಡೆಯುವ ಪಕ್ಷವೇ, ಗೆಲುವಿನ ಪಕ್ಷವಾಗಲಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net