ಅನ್ನಭಾಗ್ಯ ಅಕ್ಕಿ ಆಫ್ರಿಕಾ ಪಾಲು!; ಬಡವರ ಪಡಿತರಕ್ಕೆ ಕನ್ನ, ಬೃಹತ್ ದಂಧೆ ಬಯಲಿಗೆಳೆದ ಆಹಾರ ಇಲಾಖೆ

Front
ಅಹಾರ ಇಲಾಖೆಯ ಜಾಗೃತದಳ ತುಮಕೂರಿನ ರೈಸ್​ವಿುಲ್​ವೊಂದರ ಮೇಲೆ ದಾಳಿ ನಡೆಸಿ ಪತ್ತೆಹಚ್ಚಿದ ಅನ್ನಭಾಗ್ಯ ಅಕ್ಕಿ.
Published on

| ಹರೀಶ್ ಬೇಲೂರು ಬೆಂಗಳೂರು

ರಾಜ್ಯದಲ್ಲಿ ಬಡವರ ಹಸಿವು ನೀಗಿಸಲು ಬಳಕೆಯಾಗಬೇಕಾದ ಅನ್ನಭಾಗ್ಯದ ಅಕ್ಕಿ ಕಾಳಸಂತೆ ಪಾಲಾಗುತ್ತಿರುವುದು ಸಾಲದೆಂಬಂತೆ, ಇದೇ ಅಕ್ಕಿಗೆ ಪಾಲಿಶ್ ಮಾಡಿ ಹೊಳಪು ನೀಡಿ ಆಫ್ರಿಕಾ ರಾಷ್ಟ್ರಗಳಿಗೆ ಮಾರಾಟ ಮಾಡುತ್ತಿರುವ ಬೃಹತ್ ದಂಧೆ ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಅನ್ನಭಾಗ್ಯ ಅಕ್ಕಿಗೆ ವಿದೇಶಿ ಕನ್ನವನ್ನು ಆಹಾರ ಇಲಾಖೆಯ ತನಿಖಾ ತಂಡವೇ ಬಯಲಿಗೆಳೆದಿದೆ. ಅಕ್ಕಿ ಗಿರಣಿಗಳೇ ಈ ಅಕ್ರಮದಲ್ಲಿ ಭಾಗಿಯಾಗಿರುವುದು ದುರ್ದೈವದ ಸಂಗತಿ. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸರ್ಕಾರ ಪಡಿತರ ಚೀಟಿದಾರರಿಗೆ ಬಿಡುಗಡೆ ಮಾಡಿರುವ ಅಕ್ಕಿಯನ್ನು ಅಕ್ರಮವಾಗಿ ಖರೀದಿಸುವ ಅಕ್ಕಿ ಗಿರಣಿ ಮಾಲೀಕರು ನಂತರ ಅದನ್ನು ಶುದ್ಧೀಕರಿಸಿ ಗುಣಮಟ್ಟದ ಅಕ್ಕಿಯಾಗಿ ಪರಿವರ್ತಿಸಿ ವಿವಿಧ ಬ್ರಾ್ಯಂಡ್​ಗಳ ಹೆಸರಿನಲ್ಲಿ ಮರು ಪ್ಯಾಕಿಂಗ್ ಮಾಡುತ್ತಾರೆ. ಬಳಿಕ ಇದೇ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ವಿದೇಶಗಳಿಗೂ ರಫ್ತು ಮಾಡುತ್ತಿದ್ದಾರೆ. ರಾಜ್ಯದ ಮುಕ್ತ ಮಾರುಕಟ್ಟೆಯಲ್ಲೂ ಅನ್ನಭಾಗ್ಯದ ಅಕ್ಕಿಯನ್ನು ಪ್ರತಿ ಕೆಜಿ ಅಕ್ಕಿಗೆ 45 ರೂ.ನಿಂದ 60 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಅಧಿಕಾರಿಗಳ ಅಂದಾಜಿನ ಪ್ರಕಾರ ಕಳ್ಳದಾರಿಯಲ್ಲಿ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಗಳಿಕೆಯಾಗುತ್ತಿದೆ.

ಭತ್ತ ಹಲ್ಲಿಂಗ್​ನಲ್ಲೂ ಧೋಖಾ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿರುವ ಭತ್ತವನ್ನು ಹಲ್ಲಿಂಗ್​ಗಾಗಿ (ಅಕ್ಕಿ ಮಾಡುವುದು) ಅಕ್ಕಿ ಗಿರಣಿಗಳಿಗೆ ನೀಡಲಾಗುತ್ತದೆ. ಇಲ್ಲಿಯೂ ಗಿರಣಿ ಮಾಲೀಕರು ವಂಚನೆ ದಾರಿ ಕಂಡುಕೊಂಡಿದ್ದಾರೆ. ಹಲ್ಲಿಂಗ್ ಕೆಲಸ ಬಿಟ್ಟು, ಅಕ್ಕಿ ಖರೀದಿಸಿ ಪಾಲಿಶ್ ಮಾಡುತ್ತಿದ್ದಾರೆ. ಇದು ‘ದಿ ಕರ್ನಾಟಕ ರೈಸ್ ಮಿಲ್ಲಿಂಗ್ ರೆಗ್ಯುಲೇಷನ್ ಆಂಡ್ ರೈಸ್ ಆಂಡ್ ಪ್ಯಾಡಿ ಪ್ರಕ್ಯೂರ್ ಮತ್ತು ಉದ್ದಿಮೆಗಳ ನೋಂದಣಿ’ ನಿಯಮಗಳಿಗೆ ವಿರುದ್ಧವಾದ ನಡೆ. ಯಾವುದೇ ಅಗತ್ಯ ವಸ್ತುಗಳ ಉತ್ಪಾದಕ, ಮಾರಾಟ, ಖರೀದಿದಾರ ಉತ್ಪನ್ನ ಮಾರಾಟ ಮಾಡುವಾಗ ಆಹಾರ ಸುರಕ್ಷತೆ ಕಾನೂನಿನ ಪ್ರಕಾರ ನಿರ್ದಿಷ್ಟ ಪಡಿಸಿರುವ ಶಾಸನೀಯ ವಿವರಗಳನ್ನು ಮಾರಾಟ ಮಾಡುವ ಅಥವಾ ಖರೀದಿಸುವ ಚೀಲಗಳ ಮೇಲೆ ಮುದ್ರಿಸಬೇಕು. ಆದರೆ ರೈಸ್​ವಿುಲ್ ಮಾಲೀಕರು ಪ್ಯಾಕಿಂಗ್ ವಿವರಗಳು ಮುದ್ರಿಸಿರುವುದಿಲ್ಲ.

ಗೌಪ್ಯತೆಗೆ ತಂತ್ರ: ರೈಸ್ ಮಿಲ್​ನಲ್ಲಿ ದಾಸ್ತಾನಿಟ್ಟಿರುವ ಭತ್ತವನ್ನು ಅಗತ್ಯ ಬಿದ್ದಾಗಷ್ಟೇ ಮಾಲೀಕರು ಹಲ್ಲಿಂಗ್ ಮಾಡುತ್ತಾರೆ. ಇದರಿಂದ ಬರುವ ಅಕ್ಕಿಯನ್ನು ತನಿಖೆ ವೇಳೆ ಅಧಿಕಾರಿಗಳಿಗೆ ತೋರಿಸಿ ಯಾವುದೇ ಅಕ್ರಮ ಪತ್ತೆಯಾಗದಂತೆ ಬಿಂಬಿಸುತ್ತಾರೆ. ಕಳೆದ ವಾರ ಆಹಾರ ಇಲಾಖೆಯ ತನಿಖಾ ದಳ ತುಮಕೂರು ಜಿಲ್ಲೆಯ ರೈಸ್ ಮಿಲ್ ಒಂದರ ಮೇಲೆ ನಡೆಸಿದ ದಾಳಿಯ ಸಂದರ್ಭದಲ್ಲಿ ಗಿರಣಿ ಮಾಲೀಕರು ನಡೆಸುವ ಕಳ್ಳಾಟ ಬಯಲಾಗಿದೆ. ಪ್ರತಿ ವರ್ಷ ಇಂತಹ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ರಾಜಕೀಯ ಹಾಗೂ ಹಣದ ಪ್ರಭಾವದಿಂದ ಅದೆಷ್ಟೋ ಪ್ರಕರಣಗಳು ಹಳ್ಳಹಿಡಿದಿವೆ.

ಹೆಚ್ಚು ಪಾಲಿಶ್ ಮಾಡಿರುವ ಅಕ್ಕಿಯನ್ನು ಬಳಸಿದರೆ ಹೃದಯ ಸಮಸ್ಯೆ ಉಂಟಾಗಲಿವೆ. ಪಾಲಿಶ್ ಆಗುವ ಅಕ್ಕಿಯ ಹೊರ ಪದರದಲ್ಲಿ ಬಿ ಕಾಂಪ್ಲೆಕ್ಸ್ ಸೇರಿ ಇನ್ನಿತರ ಪೋಷಕಾಂಶಗಳು ಹೊಗಲಿವೆ. ಆದ್ದರಿಂದ ಈ ಅಕ್ಕಿ ತಿಂದರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಗರ್ಭಿಣಿಯರು ಯಥೇಚ್ಛವಾಗಿ ಈ ಅಕ್ಕಿ ಸೇವಿಸಿದರೆ ಹುಟ್ಟುವ ಮಕ್ಕಳಲ್ಲಿ ಹೃದಯ ವೈಫಲ್ಯದಂತಹ ಗಂಭೀರ ಸಮಸ್ಯೆ ಕಾಡಲಿವೆ. ಬಾಣಂತಿಯರಿಗೂ ಈ ಅಕ್ಕಿ ಒಳ್ಳೆಯದಲ್ಲ.

| ಡಾ.ಸಿ.ಎನ್.ಮಂಜುನಾಥ್ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ

ಅಕ್ಕಿ ಗಿರಣಿ ಮಾಲೀಕರು ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಖರೀದಿಸಿ ಸಾರ್ಟೆಕ್ಸ್ ಮತ್ತು ಪಾಲಿಶ್ ಮಾಡಿ ಬೇರೆ ಬೇರೆ ಬ್ರಾ್ಯಂಡ್ ಹೆಸರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ಕಂಡುಬಂದಿದೆ. ಜತೆಗೆ, ಈ ಅಕ್ಕಿಯನ್ನು ವಿದೇಶಗಳಿಗೂ ರಫ್ತು ಮಾಡಲಾಗುತ್ತಿರುವ ಮಾಹಿತಿ ಇದೆ. ಪ್ರತಿ ವರ್ಷ ಇಂತಹ ನೂರಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ.

| ಜಾಗೃತ ದಳ ಮುಖ್ಯಸ್ಥರು ಆಹಾರ ಇಲಾಖೆ.

ಬಡವರಿಗೆ ಅನ್ಯಾಯ: ಹಸಿವು ಮುಕ್ತ ರಾಜ್ಯದ ಪರಿಕಲ್ಪನೆಯಿಂದ ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾವಿರಾರು ಕುಟುಂಬಗಳು ನೆಚ್ಚಿಕೊಂಡಿವೆ. ಆದರೆ ಈ ಅಕ್ಕಿಯನ್ನೂ ದಂಧೆಕೋರರು ನುಂಗಿ ಹಾಕುತ್ತಿರುವುದರಿಂದ ಬಡ ಫಲಾನುಭವಿಗಳು ಪಡಿತರ ಕೇಂದ್ರದಿಂದ ಖಾಲಿ ಕೈನಲ್ಲಿ ಹಿಂದಿರುಗಬೇಕಿದೆ. ಇನ್ನು ಅನ್ನಭಾಗ್ಯದ ಅಕ್ಕಿಗೆ ಸಾವಿರಾರು ಕೋಟಿ ರೂ. ವೆಚ್ಚ ಮಾಡುವ ಸರ್ಕಾರದ ಹಣ ಕೂಡ ದಂಧೆಕೋರರ ಖಜಾನೆ ತುಂಬಿಸುತ್ತಿದೆ.

ಯಾವ್ಯಾವ ದೇಶಕ್ಕೆ ರಫ್ತು?: ನೈಜೀರಿಯಾ, ಇಥಿಯೋಪಿಯಾ, ಈಜಿಪ್ಟ್, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಸುಡಾನ್ ಸೇರಿ ಆಫ್ರಿಕಾ ಖಂಡದ ರಾಷ್ಟ್ರಗಳಿಗೆ ರಾಜ್ಯದಿಂದ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯನ್ನು ಹೆಚ್ಚು ರಫ್ತು ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಆಹಾರ ಇಲಾಖೆಯ ಜಾಗೃತ ದಳದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಾರ್ಷಿಕ ಲಕ್ಷಾಂತರ ಕ್ವಿಂಟಾಲ್ ರಫ್ತಾಗಬಹುದೆಂದು ಅಂದಾಜಿಸಲಾಗಿದೆ.

ಅಕ್ರಮ ದಂಧೆಯ ಹೆಜ್ಜೆ

  • ಕಾಳದಂಧೆಕೋರರ ಜತೆ ಶಾಮೀಲಾಗಿ ಕಡಿಮೆ ಬೆಲೆಗೆ ಅಕ್ಕಿ ಖರೀದಿ
  • ಅಕ್ಕಿಯಲ್ಲಿನ ಕಲ್ಲು, ಮಣ್ಣು, ನುಚ್ಚು ತೆಗೆದು ಶುದ್ಧೀಕರಣ
  • ಪಾಲಿಶ್ ಮಾಡಿ ಕುಸುಬಲು ಅಕ್ಕಿ, ನುಚ್ಚು, ಬೆಣ್ತೆ ಅಕ್ಕಿ, ನುಚ್ಚು, ಸೋನಾ ಮಸೂರಿ ಮಾದರಿ ಅಕ್ಕಿ, ಸ್ಟೀಮ್ ಅಕ್ಕಿಯಾಗಿ ಪರಿವರ್ತನೆ
  • ದಪ್ಪ ಅಕ್ಕಿಯನ್ನು ಸಣ್ಣದಾಗಿ ಮಾಡಿ ಬೇರೆ ತಳಿಯ ಜತೆ ಮಿಶ್ರಣ
  • ಉತ್ತಮ, ಅತ್ಯುತ್ತಮವಾಗಿ ವಿಂಗಡಿಸಿ ಫಿಲ್ಟರ್ ಮಾಡಿ ಆಕರ್ಷಕವಾಗಿ ಕಾಣುವಂತೆ ಮಾಡುವುದು
  • ಈ ಅಕ್ಕಿಯನ್ನು ವಿವಿಧ ಬ್ರ್ಯಾಂಡ್​ ಹೆಸರಿನಲ್ಲಿ 50 ಕೆಜಿ ತೂಕದ ಗೋಣಿ ಚೀಲ, 25 ಕೆಜಿ ತೂಕದ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕಿಂಗ್ ಮಾಡಿ ದೇಶ-ವಿದೇಶಗಳಿಗೆ ರಫ್ತು
  • ರಾಜ್ಯದ ಮಾರುಕಟ್ಟೆಗಳಲ್ಲಿಯೂ ಹೆಚ್ಚಿನ ಬೆಲೆಗೆ ಮಾರಾಟ
  • ವಹಿವಾಟು, ದಾಸ್ತಾನಿನ ಖರೀದಿ, ಮಾರಾಟದ ಬಗ್ಗೆ ಲೆಕ್ಕ ಪತ್ರಗಳಿಲ್ಲ
  • ಪ್ಯಾಕೇಜಿಂಗ್ ಆಂಡ್ ಲೇಬಲಿಂಗ್ ವಿವರಗಳನ್ನು ನಮೂದಿಸಲ್ಲ, ದಾಳಿ ವೇಳೆ ಅಕ್ರಮ ಪತ್ತೆಯಾಗದಂತೆ ತಂತ್ರಜ್ಞಾನ ಅಳವಡಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net