More

    ಪದೋನ್ನತಿಗೆ ಇಂಜಿನಿಯರ್​ಗಳಿಂದ ಖೊಟ್ಟಿ ಪ್ರಮಾಣಪತ್ರ?; ನೈಜತೆ ತಿಳಿಯಲು ಛತ್ತೀಸಗಡ್ ಸರ್ಕಾರಕ್ಕೆ ಪತ್ರ ಬರೆದ ಅಧಿಕಾರಿಗಳು

    ಬೆಂಗಳೂರು: ಪದೋನ್ನತಿ ಪಡೆದುಕೊಳ್ಳಲು ಪಂಚಾಯತ್ ರಾಜ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಅಭಿಯಂತರರು ನಕಲಿ ವಿವಿಗಳ ಪ್ರಮಾಣ ಪತ್ರ ಸಲ್ಲಿಸಿದ್ದಾರೆಂಬ ಅನುಮಾನ ವ್ಯಕ್ತವಾಗಿದೆ. ವಿಜಯವಾಣಿಗೆ ಈ ಸಂಬಂಧ ಕೆಲವು ದಾಖಲೆ ಲಭ್ಯವಾಗಿದೆ. ಇದೇ ವೇಳೆ ಕೆಲವು ಇಂಜಿನಿಯರ್​ಗಳು ನಕಲಿ ಪ್ರಮಾಣ ಪತ್ರ ಸಲ್ಲಿಸಿರಬಹುದೆಂಬ ಗುಮಾನಿ ಇದ್ದು, ಸಮಗ್ರ ತನಿಖೆಗೆ ಇಲಾಖೆಯಲ್ಲೇ ಒತ್ತಾಯ ಕೇಳಿಬಂದಿದೆ.

    ಲಭ್ಯ ಒಂದು ಪ್ರಕರಣದಲ್ಲಿ ಸಿಕ್ಕ ದಾಖಲೆ ಪ್ರಕಾರ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಎಂ.ಪ್ರಭಾಕರ್ ಛತ್ತೀಸ್​ಗಡದ ವಿಶ್ವವಿದ್ಯಾಲಯದಿಂದ 2004ರಲ್ಲಿ ಬಿಟೆಕ್ ಪದವಿ ಪಡೆದಿರುವ ಬಗ್ಗೆ ಹಾಗೂ ಅವರ ಸೇವಾ ಪುಸ್ತಕದಲ್ಲಿ ಫೋರ್ಜರಿಯಾಗಿ ವಿವರ ದಾಖಲಿಸಿದ್ದಾರೆಂಬ ಬಗ್ಗೆ ಇಲಾಖೆಯಲ್ಲಿ ಆಂತರಿಕ ತನಿಖೆ ನಡೆದಿದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿದ್ದ ಅವರು 2019ರಲ್ಲಿ ಮಂಗಳೂರು ಯೋಜನಾ ಉಪ ವಿಭಾಗದಲ್ಲಿ ವರದಿ ಮಾಡಿಕೊಂಡು, ಕೆಸಿಎಸ್​ಆರ್ ನಿಯಮಾವಳಿ ನಿಯಮ 32ರಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ಪದೋನ್ನತಿ ಹೊಂದಿದ್ದರು. ಬಳಿಕ ಅವರ ಸೇವಾವಹಿಗೆ ಸಂಬಂಧಪಟ್ಟ ನಿಯಂತ್ರಣಾಧಿಕಾರಿಗಳಾದ ಕಾರ್ಯನಿರ್ವಾಹಕ ಇಂಜಿನಿಯರ್​ಗೆ ಸಲ್ಲಿಸಬೇಕಿತ್ತು. 2020ರ ಡಿಸೆಂಬರ್ 9ರವರೆಗೂ ಸೇವಾ ಪುಸ್ತಕ ನೀಡಿರಲಿಲ್ಲ ಎನ್ನಲಾಗಿದೆ.

    2021ರ ಜನವರಿ 8ರಂದು ಮಹಾಲೇಖಪಾಲರ ಆಡಿಟ್ ತಪಾಸಣೆ ನಡೆಯುವ ಕಾರಣ, ಸೇವಾವಹಿಯನ್ನು ಮೌಖಿಕವಾಗಿ ತಿಳಿಸಿದ ಮೇಲೆ 2020ರ ಡಿಸೆಂಬರ್ 9ರಂದು ಅವರು ಹಾಜರುಪಡಿಸಿದ್ದಾರೆ. ಈ ವೇಳೆ ಯಾರದೋ ಕೈಬರಹದಲ್ಲಿ ಮತ್ತು ಬೇರೆ ಬಣ್ಣದ ಶಾಯಿಯಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆಂದು ಸೇರ್ಪಡೆ ಮಾಡಿರುವುದು ಸ್ಪಷ್ಟವಾಗಿ ಕಾಣಿಸಿದೆ. 2004ರಲ್ಲಿ ಬಿಟೆಕ್ ಪದವಿ ಪಡೆದಿದ್ದೆಂದು 2006ರಲ್ಲಿ ಬರೆದಿರುವಂತೆ ಕಂಡುಬಂದಿದೆ.

    ಒಂದು ಹಂತದಲ್ಲಿ ಸರ್ಕಾರ ಅವರಿಂದ ಸ್ಪಷ್ಟನೆ ಬಯಸಿ 2004-05ರಿಂದ ಈ ವರೆಗೂ ವೃಂದ ಬದಲಾವಣೆಗೆ ಪ್ರಯತ್ನಿಸಿಲ್ಲವೇಕೆ ಎಂದು ಕೇಳಿತ್ತು. ಅದಕ್ಕವರು 2009ರಲ್ಲಿ ವಿಶ್ವವಿದ್ಯಾಲಯದಿಂದ ಸರ್ಟಿಫಿಕೇಟ್ ಪಡೆದಿದ್ದು, ವಿಳಂಬಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಿದ್ದರು. ಇನ್ನೊಂದು ದಾಖಲೆ ಪ್ರಕಾರ, ಈ ಅಧಿಕಾರಿಯು ದಾಖಲೆ ಪುಸ್ತಕದಲ್ಲಿ ಫೋರ್ಜರಿಯಾಗಿ ಪದವಿ ಮಾಹಿತಿ ದಾಖಲಿಸಿರುವುದು, ಹಿರಿಯ ಅಧಿಕಾರಿಯ ವರದಿ ಮತ್ತು ಪದೋನ್ನತಿ ಪ್ರಸ್ತಾವನೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನೀಡಿರುವ ಸ್ಪಷ್ಟನೆ ಆಧರಿಸಿ ತಪ್ಪಿತಸ್ಥ ಎಂದು ಸೂಪರಿಂಟೆಂಡಿಂಗ್ ಇಂಜಿನಿಯರ್ ಮುಖ್ಯಅಭಿಯಂತರರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಛತ್ತೀಸ್​ಗಡದ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಪ್ರಮಾಣ ಪತ್ರದ ನೈಜತೆ ವರದಿ ನೀಡುವಂತೆಯೂ ಕೋರಲಾಗಿದೆ. ಅಲ್ಲಿಂದ ವರದಿ ಪಡೆಯುವ ನಿರೀಕ್ಷೆಯಲ್ಲಿ ಸರ್ಕಾರ ಇದೆ. ಇದೇ ರೀತಿ ಪ್ರಕರಣಗಳು ಇನ್ನಷ್ಟು ಇರಬಹು ದೆಂಬ ಸಂಶಯ ಅಧಿಕಾರಿಗಳಿಗಿದೆ. ಪ್ರತಿಯೊಂದು ಬಡ್ತಿ ಪ್ರಕರಣದಲ್ಲೂ ದಾಖಲೆ ಪುನರ್ ಪರಿಶೀಲನೆ ಅಗತ್ಯವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿಜವಾಣಿಗೆ ಪ್ರತಿಕ್ರಿಯಿಸಿದರು.

    ಇಬ್ಬರಿಗೆ ಗೇಟ್ ಪಾಸ್: ಮೂರು ವರ್ಷದ ಕೆಳಗೆ ಆರಂಭವಾದ ಹುದ್ದೆ ಭರ್ತಿ ಪ್ರಕ್ರಿಯೆ ವೇಳೆ ಅಸಿಸ್ಟೆಂಟ್ ಇಂಜಿನಿಯರ್ ಹಾಗೂ ಜ್ಯೂನಿಯರ್ ಇಂಜಿನಿಯರ್ ಹುದ್ದೆಗೆ ಇಬ್ಬರು ನಕಲಿ ದಾಖಲೆ ನೀಡಿ ಸಿಕ್ಕಿಬಿದ್ದಿದ್ದರು. ಒಬ್ಬ ವ್ಯಕ್ತಿ ತನ್ನ ಬಂಡವಾಳ ಬಯಲಾಗುತ್ತಿದ್ದಂತೆ ನೇಮಕ ಆದೇಶ ಪಡೆದುಕೊಳ್ಳಲಿಲ್ಲ. ಆದರೆ, ಡಿಪ್ಲೊಮೊ ನಕಲಿ ಪ್ರಮಾಣ ಪತ್ರ ಕೊಟ್ಟಿದ್ದ ವ್ಯಕ್ತಿಯ ವಿರುದ್ಧ ಇದೀಗ ಇಲಾಖೆ ಕ್ರಿಮಿನಲ್ ಪ್ರಕರಣ ಹೂಡಿದೆ ಮತ್ತು ಆತನನ್ನು ಕೆಲಸದಿಂದ ವಜಾ ಮಾಡಿದೆ.

    ದಾಖಲೆಯಲ್ಲಿ ಏನೆಲ್ಲ ಉಲ್ಲೇಖ?

    1. ಬಿಟೆಕ್(ಸಿವಿಲ್) ಪದವಿ ಪ್ರಮಾಣ ಪತ್ರದ ನೈಜತೆ ಕುರಿತು ಸಂಶಯ.
    2. ಸೇವಾ ಪುಸ್ತಕದಲ್ಲಿ ಪೋರ್ಜರಿ ಮಾಹಿತಿ
    3. ಗಂಭೀರ ಆರೋಪ ಇರುವವರಿಗೆ ದೊಡ್ಡ ಜವಾಬ್ದಾರಿ ನೀಡಿದರೆ ದಾಖಲೆ ತಿರುಚುವ ಸಾಧ್ಯತೆ
    4. ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬಹು ದೆಂದು ಪ್ರಭಾರ ಹುದ್ದೆ ನಿರಾಕರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts