

ಮುಂಬೈ: ಬರ್ತಡೇ ಪಾರ್ಟಿಗೆಂದು ಮನೆಯಿಂದ ಆಚೆ ಬಂದ 16 ವರ್ಷದ ಹುಡುಗಿಯ ಮೇಲೆ ಅನೇಕ ಮಂದಿ ಹಲವು ಬಾರಿ ಅತ್ಯಾಚಾರ ಎಸಗಿರುವ ಘಟನೆ ಮೇ 31ರಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಸಹಾಯ ಕೇಳಿದಾಗ ಆಕೆಯ ಫ್ರೆಂಡ್ಸ್ ಕೂಡ ರೇಪ್ ಮಾಡಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ.
ಆರೋಪಿಗಳನ್ನು 18 ರಿಂದ 23ರ ನಡುವಿನ ವಯೋಮಾನದವರು ಎಂದು ಹೇಳಲಾಗಿದೆ. ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಮೇ 31ರಂದು ಸಂತ್ರಸ್ತೆ ಮನೆಯಿಂದ ಹೊರಬಂದಿದ್ದಾಳೆ. ಈ ಸಮಯದಲ್ಲಿ ಕಾರಿನಲ್ಲಿ ಬಂದು ನಾಲ್ವರು ವ್ಯಕ್ತಿಗಳು ಆಕೆಯನ್ನು ಒಳಗೆ ಎಳೆದುಕೊಂಡು ರೇಪ್ ಮಾಡಿದ್ದಾರೆ. ಈ ವೇಳೆ ಇಬ್ಬರು ಕಾರಿನ ಹೊರಗಡೆ ನಿಂತು ಕಾವಲು ಕಾಯುತ್ತಿದ್ದರು.
ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾದಾಗ ರಾತ್ರಿಯಾಗಿದ್ದರಿಂದ ಹೆದರಿದ ಸಂತ್ರಸ್ತೆ, ಸಹಾಯ ಕೋರಿ ತನ್ನ ಸ್ನೇಹಿತರ ಮನೆಗೆ ತೆರಳಿದ್ದಾಳೆ. ಈ ವೇಳೆ ಸ್ನೇಹಿತನೂ ಸಹ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಮತ್ತೊಬ್ಬ ಸ್ನೇಹಿತನ ಮನೆಗೆ ತೆರಳಿದಾಗಲೂ ಆಕೆಯ ಮೇಲೆ ರೇಪ್ ಆಗಿದೆ.
ಯಾವಾಗ ಮಗಳು ಮನೆಗೆ ಬಾರದಿದ್ದಾಗ ಪಾಲಕರು ಆ ರಾತ್ರಿಯೇ ಮಾಲ್ವಾನಿ ಪೊಲೀಸ್ ಠಾಣೆಗೆ ತೆರಳಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಹುಡುಗಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಜೂನ್ 1ರಂದು ಹುಡುಗಿ ಮನೆಗೆ ಹಿಂದಿರುಗಿದ್ದಾಳೆ.
ಮನೆಗೆ ಬಂದ ಸಂತ್ರಸ್ತೆ ತನ್ನ ತಾಯಿಯ ಎದುರು ನಡೆದಿದ್ದನ್ನು ವಿವರಿಸಿದ್ದಾಳೆ. ತಕ್ಷಣ ಆಕೆಯ ತಾಯಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಶುಕ್ರವಾರ ಮತ್ತು ಶನಿವಾರ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಹಿಂತೆ (ಐಪಿಸಿ) ಮತ್ತು ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಹುಡುಗಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ಖಚಿತವಾಗಿದೆ. ಇದೀಗ ಪೊಲೀಸ್ ತನಿಖೆ ಪ್ರಗತಿಯಲ್ಲಿರುವುದಾಗಿ ಮುಂಬೈ ಪೊಲೀಸ್ ವಕ್ತಾರ ಚೈತನ್ಯ ಎಸ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)