ಶೂಟಿಂಗ್​ ನೆಪದಲ್ಲಿ ಗಾಯಕಿಯನ್ನು ಕರೆದೊಯ್ದ ಇಬ್ಬರು: 12 ದಿನದ ಬಳಿಕ ಭಯಾನಕ ಸತ್ಯ ಬಯಲು!

Haryanvi Singer
Published on

ನವದೆಹಲಿ: ಮೇ 11ರಂದು ನಾಪತ್ತೆಯಾಗಿದ್ದ ದೆಹಲಿ ಮೂಲದ ಹರ್ಯಾನ್ವಿ ಗಾಯಕಿ ಎರಡು ವಾರಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾಳೆ. ಹರಿಯಾಣದ ರೋಹ್ಟಕ್​ ಜಿಲ್ಲೆಯ ಫ್ಲೈ ಓವರ್​ ಬಳಿ ಸಮಾಧಿ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಮೃತಳನ್ನು ಸಂಗೀತಾ ಎಂದು ಗುರುತಿಸಲಾಗಿದೆ.

ನಡೆದಿದ್ದೇನು?

ಮ್ಯೂಸಿಕ್​ ವಿಡಿಯೋ ಶೂಟಿಂಗ್​ಗೆ ಎಂದು ಹೇಳಿ ಇಬ್ಬರು ವ್ಯಕ್ತಿಗಳು ಗಾಯಕಿಯನ್ನು ದೆಹಲಿಯಿಂದ ರೊಹ್ಟಕ್​ಗೆ ಈ ತಿಂಗಳ ಆರಂಭದಲ್ಲಿ ಕರೆದುಕೊಂಡು ಹೋಗಿದ್ದರು. ಇದಾದ ಬಳಿಕ ಆಕೆಯನ್ನು ಸಂಪರ್ಕಿಸಲು ಅನೇಕ ದಿನಗಳವರೆಗೆ ಕುಟುಂಬಕ್ಕೆ ಸಾಧ್ಯವಾಗಲಿಲ್ಲ. ಆಕೆಯ ಫೋನ್​ ಕೂಡ ಸ್ವಿಚ್​ ಆಫ್​ ಆಗಿತ್ತು. ಇದರಿಂದ ಗಾಬರಿಗೊಂಡ ಕುಟುಂಬ ಮೇ 14ರಂದು ದೆಹಲಿಯ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಇದಾದ ಬಳಿಕ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು. ಶನಿವಾರ ಆಕೆಯ ಫೋನ್ ಸ್ವಿಚ್ ಆನ್ ಆಗಿರುವುದನ್ನು ಗಮನಿಸಿದ ಪೊಲೀಸರು ರವಿ ಎಂಬ ವ್ಯಕ್ತಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು. ನಂತರ, ಹರಿಯಾಣ ಪೊಲೀಸರು ಭೈರೋನ್ ಭೈನಿ ಗ್ರಾಮದ ಬಳಿಯ ಫ್ಲೈಓವರ್ ಬಳಿ ಶವವೊಂದನ್ನು ವಶಪಡಿಸಿಕೊಂಡರು. ಮೃತದೇಹ ಹರ್ಯಾನ್ವಿ ಗಾಯಕಿಯದ್ದು ಎಂದು ಗುರುತಿಸಲಾಯಿತು.

ಆರೋಪಿ ರವಿ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆಕೆಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನಷ್ಟು ವಿಚಾರಣೆ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net