

ನವದೆಹಲಿ: ರಕ್ಷಣಾ ಕಾರ್ಯಾಚರಣೆಯ ವೇಳೆ ವ್ಯಕ್ತಿಯೊಬ್ಬ ಹೆಲಿಕಾಪ್ಟರ್ನಿಂದ ಕೆಳಗೆ ಬಿದ್ದು ದುರಂತ ಸಾವಿಗೀಡಾಗಿರುವ ಘಟನೆ ಜಾರ್ಖಂಡ್ನ ದಿಯೋಘಡ ಜಿಲ್ಲೆಯಲ್ಲಿ ನಡೆದಿದೆ.
ದಿಯೋಘಡ ಜಿಲ್ಲೆಯ ಬೈದ್ಯನಾಥ್ ದೇವಾಲಯಕ್ಕೆ ಅಳವಡಿಸಿರುವ ರೋಪ್ ವೇನಲ್ಲಿ ನಿನ್ನೆ (ಏ.11) ಎರಡು ಕೇಬಲ್ ಕಾರುಗಳು ಪರಸ್ಪರ ಡಿಕ್ಕಿಯಾಗಿ ಮೂವರು ಸಾವಿಗೀಡಾಗಿದ್ದಾರೆ. ಬೆಟ್ಟದ ಮೇಲಿರುವ ದೇವಾಲಯಕ್ಕೆ ತಲುಪಲು ಕೇಬಲ್ ಕಾರು ಅಳವಡಿಸಲಾಗಿದೆ. ಇವು ಪರಸ್ಪರ ಡಿಕ್ಕಿ ಹೊಡೆದಿರುವುದರಿಂದ ಉಳಿದ ಕೇಬಲ್ ಕಾರುಗಳು ಅಲ್ಲೇ ಸಿಲುಕಿಕೊಂಡಿದ್ದು, ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯಿತು.
ಮೃತಪಟ್ಟ ಮೂವರಲ್ಲಿ ಇಬ್ಬರು ಮಹಿಳೆಯರು. 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ದಿಯೋಘಡದ ಸದಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ 30 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಕೇಬಲ್ ಕಾರಿನಲ್ಲಿ ಸಿಲುಕಿದ್ದ 18 ಮಂದಿಯ ರಕ್ಷಣಾ ಕಾರ್ಯಾಚರಣೆ ವೇಳೆ ವ್ಯಕ್ತಿಯೊಬ್ಬ ಹೆಲಿಕಾಪ್ಟರ್ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿರ್ವಹಣಾ ಕೊರತೆಯೇ ಅಪಘಾತಕ್ಕೆ ಕಾರಣವಾಗಿರಬಹುದು. ತನಿಖಾ ತಂಡ ರಚಿಸಲಾಗಿದ್ದು, ಜೀವ ಉಳಿಸುವುದೇ ನಮ್ಮ ಆದ್ಯತೆ ಎಂದು ಜಾರ್ಖಂಡ್ ಸಚಿವ ಹಫೀಜುಲ್ ಹಸನ್ ಹೇಳಿದ್ದಾರೆ. ಒಟ್ಟು 48 ಕೇಬಲ್ ಕಾರ್ಗಳಿದ್ದು, ಅಲ್ಲೇ ಸಿಲುಕಿಕೊಂಡಿರುವ ಕಾರಣ ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗಿದೆ. ಈ ಬಗ್ಗೆ ಗೊದ್ದಾ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಅವರು ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)