ಜೀವನದ ಬಹುದೊಡ್ಡ ಕನಸು ನನಸಾದ ಬೆನ್ನಲ್ಲೇ ಸಿನಿಮಾ, ಟಿವಿ ಶೋಗಳಿಗೆ ಗುಡ್​ಬೈ ಹೇಳಿದ ನಟಿ ರೋಜಾ!

Roja
Published on

ವಿಜಯವಾಡ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಸಚಿವ ಸಂಪುಟ ಪುನಾರಚನೆ ಮಾಡಿದ್ದು, ಈ ಬಾರಿ ಅನೆಕ ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ. ಅದರಲ್ಲಿ ನಟಿ ಹಾಗೂ ನಗರಿ ಕ್ಷೇತ್ರದ ಶಾಸಕಿ ರೋಜಾ ಕೂಡ ಒಬ್ಬರು. ಇದೇ ಮೊದಲ ಬಾರಿಗೆ ಸಚಿವೆಯಾಗಿ ರೋಜಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಅವರ ಬಹುದೊಡ್ಡ ಕನಸು ನನಸಾಗುತ್ತಿದೆ.

ಸದ್ಯ ರೋಜಾ ಅವರು ರಾಜಕೀಯದಲ್ಲಿ ಬಿಜಿಯಾಗಿರುವುದರ ಜತೆಗೆ ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮನರಂಜನೆಯನ್ನು ಸಹ ನೀಡುತ್ತಿದ್ದರು. ಅಲ್ಲದೆ, ಆಗಾಗ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿಯೂ ಕಾಣಸಿಕೊಳ್ಳುತ್ತಿದ್ದರು. ಶಾಸಕಿಯಾಗಿ ತೆಲುಗಿನ ಪ್ರಖ್ಯಾತ ಶೋ ಜಬರ್ದಸ್ತ್​ನಲ್ಲಿ ಭಾಗವಹಿಸಿ ಡಾನ್ಸ್​ ಮಾಡುವ ಮೂಲಕ ಈ ಹಿಂದೆ ಅನೇಕ ಬಾರಿ ವಿವಾದಕ್ಕೂ ಗುರಿಯಾಗಿದ್ದಾರೆ.

ಇದೀಗ ರೋಜಾ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿದ್ದು, ಇದರಿಂದ ಖುಷಿಯಾಗಿರುವ ಅವರ ಒಂದು ನಿರ್ಧಾರಕ್ಕೆ ಬಂದಿದೆ. ಆಂಧ್ರ ವಿಧಾನಸಭೆ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ಸಂಪೂರ್ಣ ರಾಜಕೀಯ ಕಡೆ ಗಮನಹರಿಸಲು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಸಿನಿಮಾ ಮತ್ತು ಜಬರ್ದಸ್ತ್​ ಟಿವಿ ಕಾರ್ಯಕ್ರಮಕ್ಕೆ ಗುಡ್​ಬೈ ಹೇಳಲಿದ್ದಾರೆ. ಇದು ರೋಜಾ ಅವರಿಗೆ ಧನಾತ್ಮಕ ಪ್ರಭಾವ ಬೀರಿದರೂ, ಅವರ ಕಲಾ ಅಭಿಮಾನಿಗಳಿಗೆ ಇದು ದುಃಖದ ಸಂಗತಿಯಾಗಿದೆ.

ಈಗಾಗಲೇ ಜಬರ್ದಸ್ತ್ ಶೋನಲ್ಲಿ ಬೇರೆ ಬೇರೆ ಹಿರಿಯ ನಟಿಯರನ್ನು ಕರೆತರಲಾಗುತ್ತಿದೆ. ರೋಜಾ ಅವರು ಕಾರ್ಯಕ್ರಮವನ್ನು ಕೈ ಬಿಟ್ಟಿದ್ದು, ಅವರ ಜಾಗಕ್ಕೆ ಯಾರು ಬರುತ್ತಾರೋ ಕಾದು ನೋಡಬೇಕಿದೆ. ಸಚಿವ ಸ್ಥಾನಕ್ಕೆ ಸಿಕ್ಕಿದ್ದಕ್ಕೆ ರೋಜಾಗೆ ಜಬರ್ದಸ್ತ್ ಕಲಾವಿದರು ಹಾಗೂ ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ರೋಜಾಗೆ ಯಾವ ರೀತಿಯ ಸಚಿವ ಸ್ಥಾನ ಸಿಗಲಿದೆ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net