ಚಂದ್ರ ಗ್ರಹದಲ್ಲಿ ಸೈಟು ಆಮಿಷ: ಹಣ ಕಳ್ಕೊಂಡು ಕಣ್ಣೀರಿಡುತ್ತಿರುವ ಬೆಂಗ್ಳೂರು ಮಹಿಳೆ..!

Cheating
Published on

ಬೆಂಗಳೂರು: ಸೈಟು, ಫ್ಲ್ಯಾಟ್, ಮನೆ, ವಿಲ್ಲಾ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚನೆ ಪ್ರಕರಣ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ವಂಚಕಿ, ಚಂದ್ರನ ಮೇಲೆ ಭೂಮಿ ಕೊಡಿಸುವ ಆಸೆ ಹುಟ್ಟಿಸಿ ಹಣ ಪಡೆದು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ನಗರ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾಲತಾಣದಲ್ಲಿ ಉಸ್ಕಾ ಅಬೂಬಕರ್ ಎಂಬಾಕೆ ಪರಿಚಯವಾಗಿ ಕ್ರಿಪ್ಟೊ ಕರೆನ್ಸಿ ವ್ಯವಹಾರ ತಜ್ಞೆ ಎಂದು ಹೇಳಿಕೊಂಡಳು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಕೊಡಿಸುವುದಾಗಿ ಆಮಿಷವೊಡ್ಡಿ 45,700 ರೂ. ಹೂಡಿಕೆ ಮಾಡುವಂತೆ ಪುಸಲಾಯಿಸಿದಳು. ಅದಕ್ಕೆ ಒಪ್ಪಿ 25 ಸಾವಿರ ರೂ. ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಿದೆ. ಆದರೆ, ಯಾವುದೇ ಲಾಭಾಂಶ ಕೊಡಲಿಲ್ಲ. ಸಂಪರ್ಕ ಮಾಡಲು ಪ್ರಯತ್ನಿಸಿದಾಗ ಲಭ್ಯವಾಗಲಿಲ್ಲ ಎಂದು ಮೋಸಕ್ಕೆ ಒಳಗಾದ ಮಹಿಳೆ ಆರೋಪಿಸಿದ್ದಾರೆ.

ಇದಾದ ಮೇಲೆ ಗೂಗಲ್ ಪೇ ಮೂಲಕ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆ ಜಾಡು ಪತ್ತೆ ಮಾಡಿದಾಗ ಆಕಾಶ್ ನಾರಾಯಣ್ ಎಂಬಾತನಿಗೆ ಸೇರಿದ ಐಸಿಐಸಿಐ ಬ್ಯಾಂಕ್ ಖಾತೆ ಆಗಿತ್ತು. ಈತ ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಸಹ ಬೆಳಕಿಗೆ ಬಂದಿದೆ. ಅಲ್ಲದೆ, ಚಂದ್ರನ ಮೇಲೆ ಸೈಟು ಕೊಡಿಸುವುದಾಗಿ ನಂಬಿಸಿ ಅಕ್ರಮವಾಗಿ ಹಲವರಿಂದ ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net