More

    ಬಟ್ಟೆ ಮೇಲಿಂದ ಮುಟ್ಟಿದ್ರೆ ಲೈಂಗಿಕ ದೌರ್ಜನ್ಯವಲ್ಲ: ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಮೂರ್ತಿ ರಾಜೀನಾಮೆ

    ಮುಂಬೈ: ಸ್ಕಿನ್​ ಟು ಸ್ಕಿನ್​ (ಚರ್ಮ ಚರ್ಮಕ್ಕೂ) ಸಂಪರ್ಕವಿಲ್ಲದೆ ಸ್ಪರ್ಶಿಸುವುದನ್ನು ಲೈಂಗಿಕ ಕಿರುಕುಳ ಎಂದು ಹೇಳಲಾಗದು ಮತ್ತು ಪೊಕ್ಸೊ ಅಡಿಯಲ್ಲಿ ಅದನ್ನು ವ್ಯಾಖ್ಯಾನಿಸಲಾಗದು ಎಂದು ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠದ​ ನ್ಯಾಯಮೂರ್ತಿ ಪುಷ್ಪಾ ಗನೆದಿವಾಲಾ (53) ಅವರು ತಮ್ಮ ಸ್ಥಾನಕ್ಕೆ ಶುಕ್ರವಾರ (ಫೆ. 11) ರಾಜೀನಾಮೆ ನೀಡಿದ್ದಾರೆ.

    ಪುಷ್ಪಾ ಅವರು ಬಾಂಬೆ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಮೂರ್ತಿಯಾಗಿದ್ದರು. ಅವರು ಅಧಿಕಾರಾವಧಿ ಫೆ. 12ಕ್ಕೆ ಮುಗಿಯುತ್ತಿತ್ತು. ಆದರೆ, ಅವರ ಅಧಿಕಾರ ವಿಸ್ತರಣೆ ಬಯಕೆ ಈಡೇರಲಿಲ್ಲ. ಸುಪ್ರೀಂಕೋರ್ಟ್​ ಕೊಲಿಜಿಯಂ ಪುಷ್ಪಾರ ಅಧಿಕಾರ ಅವಧಿಯ ವಿಸ್ತರಣೆಗೆ ಶಿಫಾರಸು ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ.

    2007ರಲ್ಲಿ ಜಿಲ್ಲಾ ನ್ಯಾಯಾಧೀಶೆಯಾಗಿದ್ದ ಪುಷ್ಪಾ ಅವರನ್ನು 2019 ಫೆ. 13ರಂದು ಎರಡು ವರ್ಷಗಳ ಅವಧಿಗೆ ಬಾಂಬೆ ಹೈಕೋರ್ಟ್​ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಉನ್ನತ ದರ್ಜೆಗೆ ಏರಿಸಿತ್ತು. ಆದರೆ, 12 ವರ್ಷದ ಬಾಲಕಿಯೊಬ್ಬಳ ಸ್ತನಗಳನ್ನು ಬಟ್ಟೆಯ ಮೇಲಿಂದಲೇ ಉದ್ದೇಶಪೂರ್ವಕವಾಗಿ ಸ್ಪರ್ಶಿಸಿದ್ದ 39 ವರ್ಷದ ಪುರುಷನೊಬ್ಬನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಪುಷ್ಪಾ ಅವರು 2012ರಲ್ಲಿ ನೀಡಿದ ತೀರ್ಪು ತೀವ್ರ ವಿವಾದವನ್ನು ಹುಟ್ಟು ಹಾಕಿತು.

    ಸ್ಕಿನ್​ ಟು ಸ್ಕಿನ್​ (ಚರ್ಮ ಚರ್ಮಕ್ಕೂ) ಸಂಪರ್ಕವಿಲ್ಲದೆ ಸ್ಪರ್ಶಿಸುವುದನ್ನು ಲೈಂಗಿಕ ಕಿರುಕುಳ ಎಂದು ಹೇಳಲಾಗದು ಮತ್ತು ಪೊಕ್ಸೊ ಅಡಿಯಲ್ಲಿ ಅದನ್ನು ವ್ಯಾಖ್ಯಾನಿಸಲಾಗದು ಎಂದು ತೀರ್ಪು ನೀಡಿದ್ದರು. ಬಳಿಕ ಇದು ದೊಡ್ಡ ವಿವಾದವಾಗಿ ಈ ಪ್ರಕರಣ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಪುಷ್ಪಾ ಅವರು ನೀಡಿದ್ದ ತೀರ್ಪನ್ನು ವಜಾಗೊಳಿಸಿದ ಉನ್ನತ ನ್ಯಾಯಾಲಯ, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಜಾರಿಗೊಳಿಸಲಾದ ಪೋಕ್ಸೊ ಕಾಯ್ದೆಯಡಿ ಸ್ಪರ್ಶ ಎನ್ನುವುದಕ್ಕೆ ಚರ್ಮಕ್ಕೆ ಚರ್ಮ ತಾಕುವುದೆಂದು ‘ಸಂಕುಚಿತ ಮತ್ತು ಅಸಂಬದ್ಧ ವ್ಯಾಖ್ಯಾನ’ ನೀಡಿದಲ್ಲಿ ಅದು ಆ ಕಾಯ್ದೆಯ ಉದ್ದೇಶವನ್ನೇ ನಾಶಪಡಿಸಿದ ಹಾಗೆ ಎಂದು ಅಭಿಪ್ರಾಯ ಪಟ್ಟಿತು.

    “ಬಟ್ಟೆಗಳ ಮೇಲಿಂದ ಲೈಂಗಿಕ ಉದ್ದೇಶದಿಂದ ಮುಟ್ಟುವುದೂ ಪೋಕ್ಸೋ ಅಡಿ ಬರುತ್ತದೆ. ನ್ಯಾಯಾಲಯಗಳು ಸರಳ ಶಬ್ದಗಳಲ್ಲಿ ಮತ್ಯಾವುದೋ ಅರ್ಥವನ್ನು ಹುಡುಕಲು ಅತಿರೇಕದ ಆಸಕ್ತಿ ತೋರಬಾರದು” ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್​, ಎಸ್​.ರವೀಂದ್ರ ಭಟ್​ ಮತ್ತು ಬೇಲಾ ತ್ರಿವೇದಿ ಅವರುಗಳನ್ನೊಳಗೊಂಡ ಸುಪ್ರೀಂ ಕೋರ್ಟ್​ ನ್ಯಾಯಪೀಠ ತಾಕೀತು ಮಾಡಿತ್ತು.

    ಈ ವಿವಾದದ ನಂತರ, ಸುಪ್ರೀಂಕೋರ್ಟ್ ಕೊಲಿಜಿಯಂ, ಪುಷ್ಪಾ ಅವರನ್ನು ಬಾಂಬೆ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯನ್ನಾಗಿ ಮಾಡಲು ಜನವರಿ 20ರಂದು ಮಾಡಿದ್ದ ಶಿಫಾರಸನ್ನು ರದ್ದುಗೊಳಿಸಿತು. ಇದಾದ ಒಂದು ತಿಂಗಳ ನಂತರ, 2021ರ ಫೆಬ್ರವರಿಯಲ್ಲಿ, ಕೊಲಿಜಿಯಂ ಪುಷ್ಪಾ ಅವರನ್ನು ಖಾಯಂ ನ್ಯಾಯಮೂರ್ತಿಯನ್ನಾಗಿ ಮಾಡಲು ಪ್ರಸ್ತಾಪಿಸುವ ಬದಲು ಹೆಚ್ಚುವರಿ ನ್ಯಾಯಾಮೂರ್ತಿಯಾಗಿ ಅವರ ಅವಧಿಯನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಲು ಶಿಫಾರಸು ಮಾಡಿತು. ಆದರೆ, ಇದೀಗ ಅವರ ಅವಧಿ ಮುಗಿದಿದ್ದು, ಮತ್ತೆ ಜಿಲ್ಲಾ ಸೆಷೆನ್ಸ್​ ಕೋರ್ಟ್​ಗೆ ವಾಪಸ್​ ಬರಬೇಕಿದೆ. ಉನ್ನತ ಸ್ಥಾನದಿಂದ ಮತ್ತೆ ಕೆಳ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಹಳೇ ನೆನಪಲ್ಲಿ ಹೊಸ ಹಾವಳಿ…: ವಿಜಯವಾಣಿ ಸಿನಿಮಾ ವಿಮರ್ಶೆ

    ನಾಲ್ಕು ಗೋಡೆ ನಡುವಿನ ಕಥೆ-ವ್ಯಥೆ: ವಿಜಯವಾಣಿ ಸಿನಿಮಾ ವಿಮರ್ಶೆ

    ರಾಹುಕಾಲದ ಫಲ ಜಿ-23: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts