More

    ರಾಹುಕಾಲದ ಫಲ ಜಿ-23: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕೆ

    ನವದೆಹಲಿ: ಕೇಂದ್ರ ಮುಂಗಡ ಪತ್ರಕ್ಕೆ ಸಂಬಂಧಿಸಿದ ಸಂಸತ್ ಅಧಿವೇಶನದ ಮೊದಲ ಚರಣ ಶುಕ್ರವಾರ ಸಂಪನ್ನವಾಗಿದೆ. ಬಜೆಟ್ ವಿಚಾರವಾಗಿ ಸಂಸತ್​ನಲ್ಲಿ ವಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಸಲದ ಮುಂಗಡ ಪತ್ರದಿಂದ ಬಡವರನ್ನು ಹೊರಗಿಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸೇರಿ ಇತರೆ ನಾಯಕರು ಟೀಕಿಸಿದ್ದರು. ವಿಶೇಷವಾಗಿ, ರಾಹುಲ್ ಗಾಂಧಿ ಮತ್ತು ಚಿದಂಬರಂ ಟೀಕೆಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ‘ನಿಮ್ಮ ಪ್ರಕಾರ ಬಡತನ ಎಂದರೆ ಏನು? ಸ್ಪಷ್ಟವಾಗಿ ಹೇಳಿ. ಈಗ ಇರುವ ಸನ್ನಿವೇಶವನ್ನು ಬಡತನ ಎಂದು ಹೇಳುತ್ತೀರಾ? ಇದನ್ನು ಬಗೆಹರಿಸಬೇಕು ಎಂದು ಹೇಳುತ್ತೀರಾ? ನೀವಿನ್ನೂ 2013ರ ಮನಸ್ಥಿತಿಯಿಂದ ಹೊರಬಂದಿಲ್ಲ ಎಂದು ಹೇಳಿದರು.

    ಇದಕ್ಕೆ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೆದಿ ಆಕ್ಷೇಪ ವ್ಯಕ್ತಪಡಿಸಿ, ಬಡವರನ್ನು ಲೇವಡಿ ಮಾಡುತ್ತಿದ್ದೀರಿ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ನಾನು ಬಡವರನ್ನು ಲೇವಡಿ ಮಾಡುತ್ತಿಲ್ಲ. ಯಾರು ಮಾಡಿದ್ದರೋ ಅವರ ಪಕ್ಷದ ಜತೆಗೆ ನಿಮ್ಮ ಪಕ್ಷ ಮೈತ್ರಿ ಮಾಡಿಕೊಂಡಿದೆ. ನೀವು ಹೇಳುವ ಬಡತನ ಯಾವುದು? ನಿಮ್ಮ ಮಾಜಿ (ಕಾಂಗ್ರೆಸ್ ) ಅಧ್ಯಕ್ಷರ ಪ್ರಕಾರ ಬಡತನ ಎಂದರೆ ಆಹಾರದ ಕೊರತೆ, ಹಣ ಅಥವಾ ಭೋಗವಸ್ತು ಅಲ್ಲ. ಆತ್ಮವಿಶ್ವಾಸ ಇತ್ತು ಎಂದರೆ ಬಡತನದಿಂದ ಮೇಲೆಬರಬಹುದು. ಇದು ಒಂದು ಮನಸ್ಥಿತಿ ಎಂದು ಅವರು ಹೇಳಿದ್ದರು. ಅವರ ಹೆಸರನ್ನು ನಾನಿಲ್ಲಿ ಹೇಳುತ್ತಿಲ್ಲ ಎಂದರು.

    ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಕಾಲ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ‘ಭಾರತಕ್ಕೆ ಅಮೃತ ಕಾಲವಲ್ಲ, 2014ರಿಂದ ರಾಹುಕಾಲ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ, ರಾಹುಕಾಲದ ಫಲವೇ ಜಿ-23. ಹಿರಿಯ ನಾಯಕರೆಲ್ಲ ಪಕ್ಷ ಬಿಡುತ್ತಿದ್ದಾರಲ್ಲ ಇದುವೇ ರಾಹುಕಾಲ. ಕಾಂಗ್ರೆಸ್ ಪಕ್ಷ 44 ಸ್ಥಾನ ಗೆದ್ದು ರಾಹುಲ್ ಕಾಲ ಎದುರಿಸಿದ್ದರೆ ಅಚ್ಚರಿ ಏನಿಲ್ಲ. ಅದರಿಂದ ಹೊರಬರಲಾಗದೆ ಪಕ್ಷ ಒದ್ದಾಡುತ್ತಿದೆ ಎಂದು ಲೇವಡಿ ಮಾಡಿದರು.

    ಮುಂಗಡಪತ್ರ ಎಂದರೆ ಅದು ಸ್ಥಿರತೆ ಒದಗಿಸುವಂತದ್ದು. ಹಣದುಬ್ಬರ ಪ್ರಮಾಣ 2008ರ ಆರ್ಥಿಕ ಹಿಂಜರಿತದ ಕಾಲಕ್ಕೆ ಹೋಲಿಸಿದರೆ ಕಡಿಮೆಯೇ ಇದೆ. ಬೆಲೆ ಏರಿಕೆ ಕುರಿತ ಟೀಕೆಗಳು ನಿರಾಧಾರವಾದವು. ಈ ಸಲದ ಜಿಡಿಪಿ ಶೇಕಡ 9.2 ಅಂದಾಜಿಸಲಾಗಿದೆ. ಅರ್ಥ ವ್ಯವಸ್ಥೆ ಏಳು ವರ್ಷ ಹಿಂದೆ 110 ಲಕ್ಷ ಕೋಟಿ ಇದ್ದದ್ದು ಈಗ 232 ಲಕ್ಷ ಕೋಟಿ ರೂಪಾಯಿಗೆ ಏರಿದೆ.

    | ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆ

    ಆದಿತ್ಯನಾಥರ ಹೇಳಿಕೆ ಖಂಡಿಸಿ ವಿಪಕ್ಷ ಸಭಾತ್ಯಾಗ: ಬಿಜೆಪಿಗೆ ಮತ ಹಾಕದಿದ್ದರೆ ಉತ್ತರ ಪ್ರದೇಶ ಇನ್ನೊಂದು ಕಾಶ್ಮೀರವೋ, ಕೇರಳವೋ ಅಥವಾ ಪ.ಬಂಗಾಳವೋ ಆದೀತು ಎಂಬ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರ ಹೇಳಿಕೆ ಲೋಕಸಭೆಯಲ್ಲಿ ಪ್ರತಿಧ್ವನಿಸಿತು. ಕಾಂಗ್ರೆಸ್, ಟಿಎಂಸಿ ಸೇರಿ ವಿಪಕ್ಷ ಸದಸ್ಯರು ಈ ವಿಚಾರ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.

    ಲೋಕಸಭೆಯ ಉತ್ಪಾದಕತೆ 121%: ಲೋಕಸಭೆಯ ಉತ್ಪಾದಕತೆ ಶೇಕಡ 121 ದಾಖಲಾಗಿದೆ. ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ 12 ಗಂಟೆ ಮೀಸಲಿರಿಸಿದ್ದರೂ 15 ಗಂಟೆ 13 ನಿಮಿಷ ಕಲಾಪ ನಡೆದಿದೆ. 60 ಸದಸ್ಯರು ನೇರ ಭಾಗಿಯಾದರೆ, ಇನ್ನು 60 ಸದಸ್ಯರು ಲಿಖಿತರೂಪದಲ್ಲಿ ಸಲ್ಲಿಸಿದ್ದರು. ಬಜೆಟ್ ಚರ್ಚೆಗೆ 12 ಗಂಟೆ ಮೀಸಲಾಗಿತ್ತು. ಆದರೆ, 15 ಗಂಟೆ 33 ನಿಮಿಷ ಕಲಾಪ ನಡೆಯಿತು. 81 ಸದಸ್ಯರು ನೇರ, 63 ಸದಸ್ಯರು ಲಿಖಿತವಾಗಿ ಅಭಿಪ್ರಾಯ ಮಂಡಿಸಿದ ರೆಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.

    ಸಂಸತ್​ನಲ್ಲಿ ಹೇಳಿದ್ದು-ಕೇಳಿದ್ದು

    1. ಬಂಜಾರ ಸಮುದಾಯಕ್ಕೆ ಮೀಸಲಾತಿ ಬೇಕು. ಬಂಜಾರ ಭಾಷೆಯನ್ನು ಎಂಟನೇ ಷೆಡ್ಯೂಲ್​ಗೆ ಸೇರಿಸಬೇಕು ಎಂದು ಕಾಂಗ್ರೆಸ್ ಸಂಸದ ಸುರೇಶ್ ಧನೋರ್ಕರ್ ಲೋಕಸಭೆಯಲ್ಲಿ ಆಗ್ರಹಿಸಿದರು.
    2. ರಸಗೊಬ್ಬರ ಕೊರತೆ ಇಲ್ಲ, ಯೂರಿಯಾ ಬೆಲೆ ಏರಿಕೆ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ರಸಗೊಬ್ಬರ ಸಚಿವ ಮನ್​ಸುಕ್ ಮಾಂಡವೀಯ ಲೋಕಸಭೆಗೆ ತಿಳಿಸಿದರು.
    3. ಅಫ್ಘಾನಿಸ್ತಾನದ ಪರಿಸ್ಥಿತಿಯು ಸಹಜ ಕಾಳಜಿ ವ್ಯಕ್ತಪಡಿಸುವಂಥದ್ದಾಗಿದ್ದು, ನೆರೆಹೊರೆಯ ರಾಷ್ಟ್ರಗಳು ಮತ್ತು ಕೇಂದ್ರ ಏಷ್ಯಾ ರಾಷ್ಟ್ರಗಳು ಇಂಥದ್ದೇ ಕಾಳಜಿ, ಕಳವಳವನ್ನು ಹೊಂದಿವೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಲೋಕಸಭೆಗೆ ತಿಳಿಸಿದರು.
    4. ಆನ್​ಲೈನ್ ಗೇಮ್್ಸ ಮತ್ತು ಅದರಿಂದ ಬಳಕೆದಾರರಿಗೆ ಆಗುತ್ತಿರುವ ಹಾನಿಯ ವಿಚಾರ ಸರ್ಕಾರದ ಗಮನದಲ್ಲಿದೆ. ಆದಾಗ್ಯೂ, ಅವುಗಳನ್ನು ಜೂಜಿನ ಕೆಟಗರಿಗೆ ತರಬೇಕೆಂಬ ಪ್ರಸ್ತಾವನೆ ಬಂದಿಲ್ಲ ಎಂದು ರಾಜ್ಯಸಭೆಗೆ ಸರ್ಕಾರ ತಿಳಿಸಿದೆ.
    5. ಹಿಂಪಡೆಯಲಾದ 3 ಕೃಷಿ ಕಾನೂನುಗಳನ್ನು ಭವಿಷ್ಯದಲ್ಲಿ ಮತ್ತೆ ಜಾರಿಗೊಳಿಸುವಂತಹ ಯಾವುದೇ ಚಿಂತನೆ, ಯೋಜನೆ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಾಜ್ಯಸಭೆಗೆ ತಿಳಿಸಿದರು.
    6. ರಾಜ್ಯಸಭೆಯಲ್ಲಿ ಬಜೆಟ್ ಅಧಿವೇಶನದ ನಿಶ್ಚಿತ ಕಲಾಪದ ಅವಧಿಗಿಂತ ಅರ್ಧಗಂಟೆ ಹೆಚ್ಚು ಕಲಾಪ ನಡೆದಿದೆ. ಅಧಿವೇಶನದ ಮೊದಲ ಚರಣ ಕೊನೆಗೊಂಡಿದ್ದು, ಯಾವುದೇ ಬಲವಂತದ ಕಲಾಪ ಮುಂದೂಡಿಕೆ ಆಗಿಲ್ಲ. ಇದು ಈ ಸದನದ ಪ್ರತಿಯೊಬ್ಬ ಸದಸ್ಯನ ಗರಿಮೆ ಎಂದು ರಾಜ್ಯಸಭೆಯ ಡೆಪ್ಯೂಟಿ ಚೇರ್ಮನ್ ಹರಿವಂಶ್ ಹೇಳಿದರು.
    7. ಟಾಯ್ ಇಂಡಸ್ಟ್ರಿಯನ್ನು ಪಿಎಲ್​ಐ ಸ್ಕೀಮ್ ವ್ಯಾಪ್ತಿಗೆ ತರುವಂತಹ ಯಾವುದೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts