More

    ಹಳೇ ನೆನಪಲ್ಲಿ ಹೊಸ ಹಾವಳಿ…: ವಿಜಯವಾಣಿ ಸಿನಿಮಾ ವಿಮರ್ಶೆ

    • ಚಿತ್ರ: ಲವ್ ಮಾಕ್ಟೇಲ್ 2
    • ನಿರ್ಮಾಣ: ಕೃಷ್ಣ ಟಾಕೀಸ್
    • ನಿರ್ದೇಶನ: ಡಾರ್ಲಿಂಗ್ ಕೃಷ್ಣ
    • ಪಾತ್ರವರ್ಗ: ಕೃಷ್ಣ, ಮಿಲನಾ ನಾಗರಾಜ್, ರೇಚಲ್ ಡೇವಿಡ್ ಮತ್ತಿತರರು.

    | ಮಂಜು ಕೊಟಗುಣಸಿ ಬೆಂಗಳೂರು

    ಪ್ರೀತಿಯೇ ಹಾಗೆ, ಅದು ಅಷ್ಟು ಸುಲಭಕ್ಕೆ ಕಳೆದು ಹೋಗುವಂತದ್ದಲ್ಲ. ಯಾವುದೋ ಅರೆ ಕ್ಷಣದಲ್ಲೋ, ಓದದೇ ಕೈಬಿಟ್ಟ ಪುಸ್ತಕದೊಳಗಿನ ಪುಟ ಇಣುಕಿ ನೋಡಿದಾಗಲೋ, ಜೋರು ಮಳೆ ನಿಂತ ಮೇಲೆ ತೊಟ್ಟಿಕ್ಕುವ ಹನಿಯಿಂದಲೋ, ಆಗಾಗ ತಣ್ಣಗೆ ಮೈ ಸವರುವ ತಂಗಾಳಿಯಿಂದಲೋ… ಆ ಪ್ರೀತಿ ಪದೇಪದೆ ನೆನಪಾಗುತ್ತಿರುತ್ತದೆ. ನೆಚ್ಚಿನ ಹೃದಯ ಜತೆಗಿಲ್ಲದಿದ್ದರೂ, ಅವರೊಂದಿಗೆ ಕಳೆದ ನೆನಪುಗಳೇ ಈ ಒಂದು ಜನ್ಮಕ್ಕೆ ಸಾಕೆನಿಸುತ್ತವೆ. ಆದಿಯ ಕಥೆಯೂ ಒಂಥರಾ ಹೀಗೆ. ನಿಧಿಯ ಅಗಲಿಕೆಯ ನೋವಿನಲ್ಲೇ ಭಾವುಕ ಲೋಕದಲ್ಲಿ ಆತನದ್ದು ಏಕಾಂಗಿ ಸಂಚಾರ. ‘ಲವ್ ಮಾಕ್ಟೇಲ್’ ಮೊದಲ ಭಾಗದಲ್ಲಿ ನಿಧಿಯ ಸಾವಿನೊಂದಿಗೆ ಸಿನಿಮಾ ಅಂತ್ಯ ಕಾಣುತ್ತದೆ. ‘ಲವ್ ಮಾಕ್ಟೇಲ್ 2’ರಲ್ಲಿ ಏನೆಲ್ಲ ಇರಬಹುದು ಎಂಬ ಕುತೂಹಲವೂ ಇಲ್ಲಿ ಸಹಜ. ಆ ಕೌತುಕಕ್ಕೆ ನಾಯಕ ನಟ ಮತ್ತು ನಿರ್ದೇಶಕ ‘ಡಾರ್ಲಿಂಗ್’ ಕೃಷ್ಣ ಆಯ್ಕೆ ಮಾಡಿಕೊಂಡ ಕಥೆ ಮದುವೆ ಪ್ರಹಸನ! ಪತ್ನಿ ಕಳೆದುಕೊಂಡ ಆದಿಗೆ ಎರಡನೇ ಮದುವೆ ಮಾಡಿಸುವುದು ಸ್ನೇಹಿತರ ಬಯಕೆ. ಅದು ನಿಧಿಯ ಆಸೆ ಕೂಡ. ಹಾಗಾದರೆ, ನಿಧಿನಾ ಮರೆತು ಆದಿ ಬೇರೆ ಹುಡುಗಿಯನ್ನ ಮದುವೆ ಆಗ್ತಾನಾ? ಈ ಪ್ರಶ್ನೆಗೆ ಉತ್ತರ ಬೇಕೆಂದರೆ ನೀವು ಚಿತ್ರ ನೋಡಲೇಬೇಕು.

    ಚಿತ್ರದ ಮೊದಲ ಭಾಗ ಸಂಪೂರ್ಣ ಹಾಸ್ಯಲೇಪಿತವಾಗಿ ಸಾಗಿದರೆ, ದ್ವಿತೀಯಾರ್ಧಕ್ಕೆ ಅಗಲಿದ ನಿಧಿಯ ಆಗಮನವೂ ಆಗಿ ಅಚ್ಚರಿ ಮೂಡಿಸುತ್ತದೆ. ಹಾಸ್ಯದ ಜತೆಜತೆಗೆ ಭಾವುಕತೆಯತ್ತಲೂ ಚಿತ್ರ ಮೆಲ್ಲಗೆ ಹೊರಳುತ್ತದೆ. ಸುತ್ತಾಟ, ಹುಡುಗಿಯರ ಜತೆಗಿನ ಓಡಾಟ … ಮೊದಲ ಭಾಗದ ಹಳೇ ನೆನಪುಗಳು ಇಲ್ಲಿಯೂ ಮರುಕಳಿಸುತ್ತವೆ. ನೋಡಿಸಿಕೊಂಡು ಹೋಗುತ್ತದೆ.

    ಮುಖ್ಯಪಾತ್ರಗಳ ಜತೆಗೆ ಸ್ನೇಹಿತರಾಗಿ ಸುಷ್ಮಾ- ವಿಜಯ್ ಪಾತ್ರಧಾರಿಗಳೂ ಹೆಚ್ಚಿನ ಸ್ಟ್ರೀನ್ ಸ್ಪೇಸ್ ಗಿಟ್ಟಿಸಿಕೊಂಡಿದ್ದಾರೆ. ಜೋ ಪಾತ್ರ ಭಾಗ ಎರಡರಲ್ಲೂ ಇಣುಕಿದೆಯಾದರೂ, ಆ ಪಾತ್ರದ ಆಗಮನದ ಉದ್ದೇಶ ಏನಿತ್ತು ಎಂಬುದಕ್ಕೆ ನಿರ್ದೇಶಕರ ಸ್ಪಷ್ಟನೆ ಇಲ್ಲ. ರೇಚಲ್ ಡೇವಿಡ್ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. ‘ಹೆಂಗೇ ನಾವು’ ಹುಡುಗಿ ಇಲ್ಲಿ ಸಭ್ಯ ಗೃಹಿಣಿ. ಇನ್ನುಳಿದಂತೆ ಕೃಷ್ಣ-ಮಿಲನಾ ಜೋಡಿ ಇಷ್ಟವಾಗುತ್ತದೆ. ಗಿರಿ ಕಿರಿದಾಗಿ ನಗಿಸುತ್ತಾರೆ.

    ಪ್ರೇಕ್ಷಕರ ಪಲ್ಸ್ ಅರಿತಿರುವ ಕೃಷ್ಣ, ಸಣ್ಣಸಣ್ಣ ಪಂಚಿಂಗ್ ಸಂಭಾಷಣೆಗಳನ್ನು ಬೆರೆಸಿ ಚಿತ್ರದುದ್ದಕ್ಕೂ ಮುದ ನೀಡುತ್ತಾ ಹೋಗುತ್ತಾರೆ. ನಕುಲ್ ಅಭಯಂಕರ್ ಅವರ ಹಾಡುಗಳ ಜತೆಗೆ ಹಿನ್ನೆಲೆ ಸಂಗೀತಕ್ಕೂ ಚಿತ್ರದಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಲವ್​ಸ್ಟೋರಿಗೆ ಬೇಕಿರುವ ಹಿತಕರ ಟ್ಯೂನ್ ಚಿತ್ರಕ್ಕೆ ಮತ್ತಷ್ಟು ಮೈಲೇಜ್ ತಂದುಕೊಟ್ಟಿದೆ. ಶ್ರೀ ಕ್ರೇಜಿಮೈಂಡ್ಸ್ ಕ್ಯಾಮರಾ ಕೆಲಸದ ಮೂಲಕ ಕಣ್ಣಿಗೆ ತಂಪೆರದಿದ್ದಾರೆ.

    ರಾಜ್ಯದ ಮತ್ತೊಂದು ಶಾಲೆಯಲ್ಲೂ ನಮಾಜ್; ಹಿಜಾಬ್ ಧರಿಸಿ ನಮಾಜ್ ಮಾಡಿದ ವಿದ್ಯಾರ್ಥಿನಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts