

ಜಾಜ್ಪುರ್: ಒಡಿಶಾದ ಜಾಜ್ಪುರ್ ಜಿಲ್ಲೆಯ ಕೌಖಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಮುಲಪಲಾ ರಸ್ತೆ ಬದಿಯಲ್ಲಿ ಜನವರಿ 27ರಂದು ಸಂಶಯಾಸ್ಪದ ರೀತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣವು ಸುಮಾರು ಎರಡೂವರೆ ತಿಂಗಳ ಬಳಿಕ ತಾರ್ಕಿಕ ಅಂತ್ಯ ಕಂಡಿದೆ.
ಒಡಿಶಾ ರಾಜಧಾನಿ ಭುವನೇಶ್ವರದ ರಮಾದೇವಿ ಯೂನಿವರ್ಸಿಟಿ ವಿದ್ಯಾರ್ಥಿನಿ ಜರಾಫುಲಾ ನಾಯಕ್ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಳು. ಪ್ರಕರಣದ ಎರಡನೇ ಆರೋಪಿ ಎರಡೂವರೆ ತಿಂಗಳ ಬಳಿಕ ಸಿಕ್ಕಿಬಿದ್ದಿದ್ದು, ಆಕೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಎರಡನೇ ಆರೋಪಿಯನ್ನು ಅಮರೇಶ್ ರಾವತ್ ಎಂದು ಗುರುತಿಸಲಾಗಿದೆ. ಕೊಲೆಗೆ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಅಮರೇಶ್ನನ್ನು ಬಂಧಿಸಲಾಗಿದೆ. ಈತ ಪ್ರಕರಣದ ಪ್ರಮುಖ ಆರೋಪಿ ಹಾಗೂ ಕೊಲೆಯಾದ ಜರಾಪುಲಾಳ ಪ್ರಿಯಕರ ರಾಕೇಶ್ ಸ್ವೈನ್ ಸ್ನೇಹಿತ. ಆರೋಪಿಗಳಿಬ್ಬರು ಒಂದೇ ಗ್ರಾಮದವರು ಎಂದು ಜಾಜ್ಪುರ್ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿ.ಆರ್. ಮಾಹಿತಿ ನೀಡಿದ್ದಾರೆ.
ಅಮರೇಶ್ನನ್ನು ಭಾನುವಾರ ಬಂಧಿಸಲಾಗಿದ್ದು, ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ರಾಕೇಶ್ ಪರವಾಗಿ ಅಮರೇಶ್, ಯುವತಿಯ ಕೊಲೆ ನಡೆದ ಗೆಸ್ಟ್ ಹೌಸ್ ಅನ್ನು ಮೊದಲೇ ಬುಕ್ ಮಾಡಿದ್ದ. ಘಟನೆ ನಡೆದಾಗಿನಿಂದ ಆತ ಪರಾರಿಯಾಗಿದ್ದ, ಭಾನುವಾರ ಮಹತ್ವದ ಸುಳಿವಿನೊಂದಿಗೆ ಬಂಧಿಸಲಾಗಿದೆ.
ಜನವರಿ 26ರಂದು ರಾಕೇಶ್ ಮತ್ತು ಸ್ನೇಹಿತ ಅಮರೇಶ್ ಭುವನೇಶ್ವರದ ಖಾಸಗಿ ಗೆಸ್ಟ್ ಹೌಸ್ನಲ್ಲಿ ಕೊಲೆ ಮಾಡಿದ್ದಾರೆ. ಬಳಿಕ ರಾಕೇಶ್ ತನ್ನ ಮತ್ತೊಬ್ಬ ಸ್ನೇಹಿತ ಶೇಖರ್ ಸಹಾಯದಿಂದ ಸ್ಕೂಟರ್ನಲ್ಲಿ ಜರಾಪುಲಾಳ ಶವವನ್ನು ಕುಳಿತಿರುವ ರೀತಿಯಲ್ಲಿ ತೆಗೆದುಕೊಂಡು ಹೋಗಿ ಜಾಜ್ಪುರ್ದ ಕೋಕಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮುಲಪಲಾ ಚೌಕ್ ಸಮೀಪದ ರಸ್ತೆ ಬದಿಯಲ್ಲಿ ಎಸೆದಿದ್ದರು.
ಇಬ್ಬರ ನಡುವೆ ನಡೆದಿತ್ತು ದೈಹಿಕ ಸಂಪರ್ಕ
ಇದಕ್ಕೂ ಮುನ್ನ ಬಂಧನವಾಗಿರುವ ಆರೋಪಿ ರಾಕೇಶ್ ವಿಚಾರಣೆ ವೇಳೆ ಮಹತ್ವದ ಹೇಳಿಕೆಗಳನ್ನು ನೀಡಿದ್ದ. ನಾವಿಬ್ಬರು ಧರ್ಮಾ ವಿಹಾರದಲ್ಲಿರುವ ಶಿವಸಾಯಿ ಗೆಸ್ಟ್ಹೌಸ್ನ ನಂ-201ನೇ ರೂಮ್ನಲ್ಲಿ ಇಬ್ಬರ ತಂಗಿದ್ದೆವು. ಅಂದು ನಾವಿಬ್ಬರು ದೈಹಿಕ ಸಂಪರ್ಕ ನಡೆಸಿದೆವು ಎಂದು ರಾಕೇಶ್ ಒಪ್ಪಿಕೊಂಡಿದ್ದ. ಮಾರನೇ ದಿನ ಬೆಳಗ್ಗೆ ಜರಾಫುಲ್ಲಾ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾನೆ. ಇದರಿಂದ ಗಾಬರಿಗೊಂಡ ಆತ ತಕ್ಷಣ ತನ್ನ ಸ್ನೇಹಿತ ಶೇಖರ್ ಎಂಬಾತನನ್ನು ಕರೆ ಮಾಡಿ ಕರೆಸಿಕೊಂಡಿದ್ದಾನೆ. ಬಳಿಕ ಬೈಕ್ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಮಾರ್ಗ ಮಧ್ಯೆ ಆಕೆ ಮೃತಪಟ್ಟಿರುವುದು ತಿಳಿದು ಜಾಜ್ಪುರದ ಕೌಖಿಯಾ ಏರಿಯಾದ ರಸ್ತೆ ಬದಿಯಲ್ಲಿ ಶವ ಎಸೆದು ಅಲ್ಲಿಂದ ಪರಾರಿಯಾಗಿದ್ದಾಗಿ ರಾಕೇಶ್ ಬಾಯ್ಬಿಟ್ಟಿದ್ದ. ಆದರೆ, ಜರಾಫುಲ್ಲಾ ಸಾವಿಗೆ ಕಾರಣ ಏನೆಂಬುದು ನಿಖರವಾಗಿ ಹೇಳಿರಲಿಲ್ಲ. ಆದರೆ, ಇದೀಗ ಎರಡನೇ ಆರೋಪಿ ಬಂಧನದಿಂದ ಸತ್ಯಾಂಶ ಹೊರಬಂದಿದೆ.
ಘಟನೆ ಹಿನ್ನೆಲೆ ಏನು?
ಒಡಿಶಾದ ಜಾಜ್ಪುರ್ ಜಿಲ್ಲೆಯ ಕೌಖಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಮುಲಪಲಾದ ರಸ್ತೆ ಬದಿಯಲ್ಲಿ ಜನವರಿ 27ರಂದು ಯುವತಿಯ ಮೃತದೇಹವೊಂದು ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರಿಗೆ ಮೃತದೇಹವು ಯುವತಿ ಜರಾಫುಲಾ ನಾಯಕ್ ಎಂದು ಗುರುತಿಸಿದರು. ಪ್ರಕರಣ ಸಂಬಂಧ ಜಾಜ್ಪುರ್ ಪೊಲೀಸರು ಕಮಿಷನರೇಟ್ ಪೊಲೀಸ್ ಸಹಕಾರದೊಂದಿಗೆ ಸುಂದರ್ಪಾದ ಏರಿಯಾದಲ್ಲಿ ದಾಳಿ ನಡೆಸಿ ಆರೋಪಿ ಹಾಗೂ ಜರಾಫುಲ್ಲಾ ಪ್ರಿಯಕರ ರಾಕೇಶ್ ಬಂಧಿಸಲಾಯಿತು.
ಬರ್ತಡೇ ಎಂದು ಭುವನೇಶ್ವರಕ್ಕೆ ಬಂದಿದ್ದಳು
ಜರಾಫುಲಾ ಮಯೂರ್ಬಂಜ್ ಜಿಲ್ಲೆಯ ನಿವಾಸಿ. ಆರ್ಡಿ ಮಹಿಳಾ ಯೂನಿವರ್ಸಿಟಿಯ ವಿದ್ಯಾರ್ಥಿನಿಯಾಗಿದ್ದ ಜರಾಫುಲಾ ಜನವರಿ 24ರಂದು ಆಕೆಯ ಚಕ್ರಧರ್ ಟೀಚರ್ ಮಗಳ ಬರ್ತಡೇ ಕಾರ್ಯಕ್ರಮಕ್ಕೆ ತೆರಳುವುದಾಗಿ ಮನೆಗೆ ಹೇಳಿ ಹೊರಟ್ಟಿದ್ದಳು. 25ರಂದು ಬರ್ತಡೇ ಸಮಾರಂಭ ನಡೆದಿತ್ತು. ಮಾರನೇ ದಿನ ಅಂದರೆ 26ನೇ ತಾರೀಖು ಬೆಳಗ್ಗೆ 11 ಗಂಟೆಗೆ ಚಕ್ರಧರ್, ಜಲಾಫುಲಾಳನ್ನು ಜಯದೇವ್ ವಿವಾರ್ ಸ್ಕ್ವೇರ್ಗೆ ಡ್ರಾಪ್ ಮಾಡಿದ್ದರು. ಖಾಸಗಿ ಬಸ್ ಮೂಲಕ ಊರಿಗೆ ಮರಳಲು ಮುಂದಾಗಿದ್ದಳು. ಹೊಟ್ಟೆ ನೋವಿದೆ ಆಸ್ಪತ್ರೆಗೆ ಹೋಗಿ ನಂತರ ಬಸ್ನಲ್ಲಿ ಊರಿಗೆ ಮರಳುತ್ತೇನೆಂದು ಹೇಳಿದ್ದಳು. ಆದರೆ, ಮಧ್ಯಾಹ್ನ 3 ಗಂಟೆಗೆ ಫೋನ್ ಮಾಡಿ, ಹೊಟ್ಟೆ ನೋವಿದೆ, ಫ್ರೆಂಡ್ಸ್ ಮನೆಯಲ್ಲಿ ಉಳಿದುಕೊಂಡಿರುವುದಾಗಿ ಮತ್ತು ನಾಳೆ ಬೆಳಗ್ಗೆ ಬರುವುದಾಗಿ ಹೇಳಿದಳು. ಅಂದು ರಾತ್ರಿಯಿಡಿ ಎಷ್ಟೇ ಫೋನ್ ಮಾಡಿದರು ಸ್ವೀಕರಿಸಲಿಲ್ಲ.
ಜರಾಫುಲಾಳ ಮೃತದೇಹ ಮಾರನೇ ದಿನ ಅಂದರೆ ಜ. 27ರಂದು ಮುಲಪಲಾದ ರಸ್ತೆಯ ಬದಿಯಲ್ಲಿ ಪತ್ತೆಯಾಗುತ್ತದೆ. ಮೃತದೇಹವನ್ನು ಪಕ್ಕದಲ್ಲಿ ಬಿದ್ದಿದ್ದ ಬ್ಯಾಗ್ನಲ್ಲಿದ್ದ ಮಾಹಿತಿ ಆಧಾರದಲ್ಲಿ ವಿಳಾಸವನ್ನು ಪತ್ತೆ ಹಚ್ಚಿ ಮಾಹಿತಿ ನೀಡಲಾಗುತ್ತದೆ. ಇದರಿಂದ ಶಾಕ್ ಆಗುವ ಕುಟುಂಬ ಶೋಕ ಸಾಗರದಲ್ಲಿ ಮುಳುಗುತ್ತದೆ. ತಕ್ಷಣವೇ ಸ್ಥಳೀಯ ಯುವಕನ ವಿರುದ್ಧ ಜರಾಫುಲಾಳ ತಂದೆ ಕೊಲೆ ಆರೋಪ ಮಾಡುತ್ತಾರೆ.
ಊರಿನಲ್ಲಿ ಪೈಪ್ಲೈನ್ ಕೆಲಸ ಮಾಡಿಕೊಂಡಿದ್ದ ರಾಕೇಶ್ ನನ್ನ ಮಗಳನ್ನು ಲವ್ ಮಾಡುತ್ತಿದ್ದ. ಲಾಕ್ಡೌನ್ ಬಳಿಕ ಯೂನಿವರ್ಸಿಟಿ ಬಿಟ್ಟು ಮಗಳು ಊರಿಗೆ ಬಂದಿದ್ದಾಗ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು. ಇಬ್ಬರು ವಾಟ್ಸ್ಆ್ಯಪ್ ಮತ್ತು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು ಎಂದು ರಮಾಕಾಂತ್ ದೂರಿದ್ದರು. ಅಲ್ಲದೆ, ಜರಾಫುಲ್ಲಾ ಭುವನೇಶ್ವರಕ್ಕೆ ಬಂದಾಗಲೆಲ್ಲ ರಾಕೇಶ್ ಜತೆ ಹೆಚ್ಚು ಸಮಯ ಕಳೆಯುತ್ತಿದ್ದಳಂತೆ.
ಆರೋಪಿ ರಾಕೇಶ್ ಸಿಕ್ಕಿಬಿದ್ದಿದ್ಹೇಗೆ?
ಸಂಶಯಾಸ್ಪದ ರೀತಿಯಲ್ಲಿ ಜರಾಫುಲಾಳ ಮೃತದೇಹ ಪತ್ತೆಯಾದ ಮೇಲೆ ಅನುಮಾನಗೊಂಡ ಪೊಲೀಸರು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಾರೆ. ಇಬ್ಬರು ಯುವಕರು ಸ್ಕೂಟರ್ನಲ್ಲಿ ಬಂದು ಯುವತಿಯ ಮೃತದೇಹವನ್ನು ಎಸೆದು ಸ್ಕೂಟರ್ನಲ್ಲಿ ಪರಾರಿಯಾಗುವ ದೃಶ್ಯ ದಾಖಲಾಗಿರುತ್ತದೆ. ಸ್ಥಳೀಯರು ಸಹ ಇಬ್ಬರು ಯುವಕರು ಸ್ಕೂಟರ್ನಲ್ಲಿ ಬಂದಿದ್ದಾಗಿ ಹೇಳುತ್ತಾರೆ. ಪ್ರಕರಣ ದಾಖಲಿಸಿಕೊಂಡು ಅಖಾಡಕ್ಕೆ ಇಳಿದ ಜಾಜ್ಪುರ್ ಪೊಲೀಸರು ಆರೋಪಿ ರಾಕೇಶ್ನನ್ನು ಬಂಧಿಸಿದರು. (ಏಜೆನ್ಸೀಸ್)