ಸ್ಕೂಟರ್​ನಲ್ಲಿ ಶವ ಕೂರಿಸ್ಕೊಂಡು ಬಂದು ರಸ್ತೆ ಬದಿ ಎಸೆದ ಯುವಕರು: ಬರ್ತಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ!

Odisha Girl
Published on

ಭುವನೇಶ್ವರ್​: ಒಡಿಶಾದ ಜಾಜ್​ಪುರ್​ ಜಿಲ್ಲೆಯ ಕೌಖಿಯಾ ಪೊಲೀಸ್​ ಠಾಣಾ ವ್ಯಾಪ್ತಿಯ ಮುಲಪಲಾದ ರಸ್ತೆ ಬದಿಯಲ್ಲಿ ಜನವರಿ 27ರಂದು ಯುವತಿಯ ಮೃತದೇಹವೊಂದು ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಮೃತ ಯುವತಿಯನ್ನು ಜರಾಫುಲಾ ನಾಯಕ್​ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಜಾಜ್​ಪುರ್​ ಪೊಲೀಸರು ಕಮಿಷನರೇಟ್ ಪೊಲೀಸ್ ಸಹಕಾರದೊಂದಿಗೆ ಸುಂದರ್​​ಪಾದ ಏರಿಯಾದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ರಾಕೇಶ್​ ಎಂದು ಗುರುತಿಸಲಾಗಿದೆ. ಸದ್ಯ ಜಾಜ್​ಪುರ್​ ಪೊಲೀಸರ ವಶದಲ್ಲಿರುವ ರಾಕೇಶ್​ನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಯುವತಿ ಜರಾಫುಲಾ ಮಯೂರ್​ಬಂಜ್​ ಜಿಲ್ಲೆಯ ನಿವಾಸಿ. ಆರ್​ಡಿ ಮಹಿಳಾ ಯೂನಿವರ್ಸಿಟಿಯ ವಿದ್ಯಾರ್ಥಿನಿಯಾಗಿದ್ದ ಜರಾಫುಲಾಳನ್ನು ಭುವನೇಶ್ವರದಲ್ಲಿ ಕೊಲೆ ಮಾಡಲಾಗಿದೆ. ಆರೋಪಿ ರಾಕೇಶ್​ ಸಾಕ್ಷ್ಯಾಧಾರಗಳನ್ನು ನಾಶ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

ಆಘಾತಕಾರಿಯೆಂದರೆ ಕೊಲೆ ಮಾಡಿದ ಬಳಿಕ ಜರಾಪುಲಾಳ ಮೃತದೇಹವನ್ನು ರಾಕೇಶ್​ ತನ್ನ ಸ್ನೇಹಿತನ ಜತೆ ಸೇರಿಕೊಂಡು ಮುಲಪಲಾದಲ್ಲಿ ಎಸೆದು ಬಂದಿದ್ದರು. ಸ್ಕೂಟರ್​​ನಲ್ಲಿ ಮೃತದೇಹವನ್ನು ಕೂರಿಸಿಕೊಂಡು ಹೋಗಿ ಯಾರಿಗೂ ಗೊತ್ತಾಗದಂತೆ ಎಸೆದುಬಂದಿದ್ದರು. ಇದೀಗ ರಾಕೇಶ್​ ಬಂಧಿಯಾಗಿದ್ದು, ಸ್ಕೂಟರ್​ ಓಡಿಸುತ್ತಿದ್ದ ರಾಕೇಶ್​ ಸ್ನೇಹಿತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಓರ್ವ ಡಿಸಿಪಿ ಪ್ರಕರಣ ಸಮಗ್ರ ತನಿಖೆಯನ್ನು ನಡೆಸುತ್ತಿದ್ದಾರೆ.

ಜನವರಿ 27ರಂದು ಒಡಿಶಾದ ಜಾಜ್​ಪುರ್​ ಜಿಲ್ಲೆಯ ಕೌಖಿಯಾ ಪೊಲೀಸ್​ ಠಾಣಾ ವ್ಯಾಪ್ತಿಯ ಮುಲಪಲಾದ ರಸ್ತೆಯ ಬದಿಯಲ್ಲಿ ಪತ್ತೆಯಾಗಿದ್ದ ಜರಾಪುಲಾಳ ಮೃತದೇಹವನ್ನು ಪಕ್ಕದಲ್ಲಿ ಬಿದ್ದಿದ್ದ ಬ್ಯಾಗ್​ನಲ್ಲಿದ್ದ ಮಾಹಿತಿ ಆಧಾರದಲ್ಲಿ ಪತ್ತೆಹಚ್ಚಲಾಗಿತ್ತು.

ಜರಾಫುಲಾ ಎಲ್ಲಿಗೆ ಹೋಗಿದ್ದಳು?

ಈ ಬಗ್ಗೆ ಮಾಹಿತಿ ನೀಡಿರುವ ಜಲಾಫುಲಾ ತಂದೆ ರಮಾಕಾಂತ್​, ಜನವರಿ 24ರಂದು ಜಲಾಫುಲಾ ಆಕೆಯ ಚಕ್ರಧರ್ ಟೀಚರ್​ ಮಗಳ ಬರ್ತಡೇ ಕಾರ್ಯಕ್ರಮಕ್ಕೆಂದು ತೆರಳಿದ್ದಳು. 25ರಂದು ಬರ್ತಡೇ ಸಮಾರಂಭ ನಡೆದಿತ್ತು. ಮಾರನೇ ದಿನ ಅಂದರೆ 26ನೇ ತಾರೀಖು ಬೆಳಗ್ಗೆ 11 ಗಂಟೆಗೆ ಚಕ್ರಧರ್​, ಜಲಾಫುಲಾಳನ್ನು ಜಯದೇವ್​ ವಿವಾರ್​ ಸ್ಕ್ವೇರ್​ಗೆ ಡ್ರಾಪ್​ ಮಾಡಿದ್ದರು. ಖಾಸಗಿ ಬಸ್​ ಮೂಲಕ ಊರಿಗೆ ಮರಳಲು ಮುಂದಾಗಿದ್ದಳು. ಹೊಟ್ಟೆ ನೋವಿದೆ ಆಸ್ಪತ್ರೆಗೆ ಹೋಗಿ ನಂತರ ಬಸ್​ನಲ್ಲಿ ಊರಿಗೆ ಮರಳುತ್ತೇನೆಂದು ಹೇಳಿದ್ದಳು. ಆದರೆ, ಮಧ್ಯಾಹ್ನ 3 ಗಂಟೆಗೆ ಫೋನ್​ ಮಾಡಿ, ಹೊಟ್ಟೆ ನೋವಿದೆ, ಫ್ರೆಂಡ್ಸ್​ ಮನೆಯಲ್ಲಿ ಉಳಿದುಕೊಂಡಿರುವುದಾಗಿ ಮತ್ತು ನಾಳೆ ಬೆಳಗ್ಗೆ ಬರುವುದಾಗಿ ಹೇಳಿದಳು. ಅಂದು ರಾತ್ರಿಯಿಡಿ ಎಷ್ಟೇ ಫೋನ್​ ಮಾಡಿದರು ಸ್ವೀಕರಿಸಲಿಲ್ಲ. ಚಕ್ರಧರ್ ಸರ್ ಒಬ್ಬರೇ ಭುವನೇಶ್ವರದಲ್ಲಿ ಆಕೆಯ ಸ್ಥಳೀಯ ರಕ್ಷಕರಾಗಿದ್ದರು ಎನ್ನುತ್ತಾರೆ ರಮಾಕಾಂತ್​.

ಸ್ಥಳೀಯ ಯುವಕ ಮೇಲೆ ಗಂಭೀರ ಆರೋಪ

ಹೀಗಿರುವಾಗ ಜರಾಫುಲಾಳ ಮೃತದೇಹ ಮಾರನೇ ದಿನ ಅಂದರೆ ಜ. 27ರಂದು ಮುಲಪಲಾದ ರಸ್ತೆಯ ಬದಿಯಲ್ಲಿ ಪತ್ತೆಯಾಗುತ್ತದೆ. ಮೃತದೇಹವನ್ನು ಪಕ್ಕದಲ್ಲಿ ಬಿದ್ದಿದ್ದ ಬ್ಯಾಗ್​ನಲ್ಲಿದ್ದ ಮಾಹಿತಿ ಆಧಾರದಲ್ಲಿ ವಿಳಾಸವನ್ನು ಪತ್ತೆ ಹಚ್ಚಿ ಮಾಹಿತಿ ನೀಡಲಾಗುತ್ತದೆ. ಇದರಿಂದ ಶಾಕ್​ ಆಗುವ ಕುಟುಂಬ ಶೋಕ ಸಾಗರದಲ್ಲಿ ಮುಳುಗುತ್ತದೆ. ಮಗಳ ಕೊಲೆಯಾಗಿದೆ ಎಂದು ಗೊತ್ತಾದ ತಕ್ಷಣವೇ ಸ್ಥಳೀಯ ಯುವಕನ ವಿರುದ್ಧ ಜರಾಫುಲಾಳ ತಂದೆ ಗಂಭೀರ ಆರೋಪ ಮಾಡಿದ್ದಾರೆ. ಕೊಲೆಗೆ ಆತನೇ ಕಾರಣ ಎಂದು ದೂರಿದ್ದಾರೆ. ಆತನೇ ರಾಕೇಶ್​.

ಊರಿನಲ್ಲಿ ಪೈಪ್​ಲೈನ್​ ಕೆಲಸ ಮಾಡಿಕೊಂಡಿದ್ದ ರಾಕೇಶ್​ ನನ್ನ ಮಗಳನ್ನು ಲವ್​ ಮಾಡುತ್ತಿದ್ದ. ಲಾಕ್​ಡೌನ್​ ಬಳಿಕ ಯೂನಿವರ್ಸಿಟಿ ಬಿಟ್ಟು ಮಗಳು ಊರಿಗೆ ಬಂದಿದ್ದಾಗ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು. ಇಬ್ಬರು ವಾಟ್ಸ್​ಆ್ಯಪ್​ ಮತ್ತು ವಿಡಿಯೋ ಕಾಲ್​ ಮೂಲಕ ಮಾತನಾಡುತ್ತಿದ್ದರು ಎಂದು ರಮಾಕಾಂತ್​ ದೂರಿದ್ದಾರೆ.

ಆರೋಪಿ ರಾಕೇಶ್​ ಸಿಕ್ಕಿಬಿದ್ದಿದ್ಹೇಗೆ?

ಸಂಶಯಾಸ್ಪದ ರೀತಿಯಲ್ಲಿ ಜರಾಫುಲಾಳ ಮೃತದೇಹ ಪತ್ತೆಯಾದ ಮೇಲೆ ಅನುಮಾನಗೊಂಡ ಪೊಲೀಸರು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಾರೆ. ಇಬ್ಬರು ಯುವಕರು ಸ್ಕೂಟರ್​ನಲ್ಲಿ ಬಂದು ಯುವತಿಯ ಮೃತದೇಹವನ್ನು ಎಸೆದು ಸ್ಕೂಟರ್​​ನಲ್ಲಿ ಪರಾರಿಯಾಗುವ ದೃಶ್ಯ ದಾಖಲಾಗಿರುತ್ತದೆ. ಸ್ಥಳೀಯರು ಸಹ ಇಬ್ಬರು ಯುವಕರು ಸ್ಕೂಟರ್​ನಲ್ಲಿ ಬಂದಿದ್ದಾಗಿ ಹೇಳುತ್ತಾರೆ. ಪ್ರಕರಣ ದಾಖಲಿಸಿಕೊಂಡು ಅಖಾಡಕ್ಕೆ ಇಳಿದ ಜಾಜ್​ಪುರ್​ ಪೊಲೀಸರು ಆರೋಪಿ ರಾಕೇಶ್​ನನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net