More

    ವೃದ್ಧೆ ಕೊಲೆ ಪ್ರಕರಣದ ಮೂರನೇ ಆರೋಪಿ ಬಂಧನ

    ಶಿವಮೊಗ್ಗ: ಹೊಳಲೂರು ಗ್ರಾಮದ ಜಯಮ್ಮ(62) ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯ ಅತ್ತೆ ಕೈವಾಡವೂ ಇದ್ದು, ಆಕೆಯನ್ನೂ ಬಂಧಿಸಲಾಗಿದೆ. ಇದರೊಂದಿಗೆ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ.

    ಆರೋಪಿ ಕೋಡೂರು ಗ್ರಾಮದ ಕೆ.ಕೆ.ಮಯೂರನಿಗೆ ಹೊಳಲೂರಿನ ಜಯಮ್ಮ ಅವರ ಮನೆ ಸಮೀಪದಲ್ಲೇ ಮಯೂರನ ಅತ್ತೆ ಇದ್ದರು. ಆಗಾಗ್ಗೆ ಮಯೂರ ತನ್ನ ಅತ್ತೆ ಮನೆಗೆ ಬಂದಾಗ ಜಯಮ್ಮ ಅವರ ಪರಿಚಯವೂ ಆಗಿತ್ತು. ಜಯಮ್ಮ ಬಡ್ಡಿಗೆ ಹಣ ನೀಡುತ್ತಿದ್ದ ಮತ್ತು ಒಡವೆಗಳನ್ನು ಹೊಂದಿರುವ ಬಗ್ಗೆ ಅತ್ತೆಯೇ ಮಯೂರನಿಗೆ ಮಾಹಿತಿ ನೀಡಿದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮಯೂರನ ಅತ್ತೆಯನ್ನೂ ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಎರಡು ವರ್ಷದಿಂದ ಹಿಂದೆ ಜಯಮ್ಮನಿಂದ ಮಯೂರ 60 ಸಾವಿರ ರೂ. ಸಾಲ ಪಡೆದಿದ್ದ. ಅದಕ್ಕೆ ಹಲವು ತಿಂಗಳು ಬಡ್ಡಿಯನ್ನೂ ಕಟ್ಟಿದ್ದ. ಇತ್ತೀಚೆಗೆ ಕೆಲ ತಿಂಗಳಿಂದ ಬಡ್ಡಿಯನ್ನೂ ಕೊಟ್ಟಿರಲಿಲ್ಲ. ಹಾಗಾಗಿ ಜಯಮ್ಮ ಪದೇಪದೆ ಫೋನ್ ಮಾಡಿ ಕೊಟ್ಟ ಹಣ ವಾಪಸ್ ಕೊಡುವಂತೆ ಕೇಳುತ್ತಿದ್ದಳು. ಅದೇ ಸಿಟ್ಟಿಗೆ ಆರೋಪಿಗಳು ಕೊಲೆಗೆ ಸ್ಕೆಚ್ ಹಾಕಿದ್ದರು ಎಂದರು.

    ವೃದ್ಧೆ ಕೊಲೆ, ಆರೋಪಿ ಬಂಧನ
    ಆರೋಪಿ ಮಯೂರ ಮಾ.18ರಂದು ರಿಪ್ಪನ್‌ಪೇಟೆಗೆ ಹಣ ಕೊಡುವುದಾಗಿ ಜಯಮ್ಮ ಅವರನ್ನು ಕರೆಸಿಕೊಂಡಿದ್ದ. ಈ ಭಾಗದಲ್ಲಿ ಶಕ್ತಿಶಾಲಿ ದೇವಸ್ಥಾನವಿದ್ದು ಅಲ್ಲಿ ಬೇಡಿಕೊಂಡರೆ ಬಡ್ಡಿಗೆ ಕೊಟ್ಟಿರುವ ಹಣ ನಿಮಗೆ ಸಿಗಲಿದೆ ಎಂದು ಪುಸಲಾಯಿಸಿದ್ದರು. ಅದೇ ಹಣದಲ್ಲಿ ಕಡಿಮೆ ದರದಲ್ಲಿ ನಿವೇಶನ ಕೊಡಿಸುವುದಾಗಿ ಹೇಳಿ ಸ್ನೇಹಿತನ ಕಾರಿನಲ್ಲಿ ಆಕೆಯನ್ನು ಹತ್ತಿಸಿಕೊಂಡು ಹುಂಚ ದೇವಸ್ಥಾನಕ್ಕೆ ಕರೆದೊಯ್ದಿದ್ದರು. ಪುನಃ ಅಲ್ಲಿಂದ ಬೇರೊಂದು ದೇವಸ್ಥಾನಕ್ಕೆ ಕರೆದೊಯ್ಯುವ ಯೋಜನೆ ಹಾಕಿಕೊಂಡಿದ್ದರು. ಅಲ್ಲಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೋಡಿ ವಾಪಸಾಗಿದ್ದರು. ಅದೇ ದಿನ ಕಾರಿನಲ್ಲಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ಅನುಮಾನ ಬಾರದಂತೆ ರಾತ್ರಿ ಆರೋಪಿ ಮಯೂರನೇ ನೀರಿನಲ್ಲಿ ಈಜಿಕೊಂಡು ಮೃತದೇಹವನ್ನು ಮಧ್ಯೆ ಕೆರೆಯಲ್ಲಿ ಬಿಟ್ಟು ಬಂದಿದ್ದ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts