More

    ಸಂಪಾದಕೀಯ: ಕೊನೆಗೂ ಸಂಶಯಕ್ಕೆ ತೆರೆ

    ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನಕ್ಕೆ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಹಾಗೂ ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರೇಲ್ (ವಿವಿಪ್ಯಾಟ್) ವ್ಯವಸ್ಥೆಯನ್ನು ಈಗಾಗಲೇ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಆದರೆ ಇವುಗಳ ಕಾರ್ಯಕ್ಷಮತೆ ಬಗ್ಗೆ ಆಗಿಂದಾಗ್ಗೆ ಸಂಶಯಗಳು ವ್ಯಕ್ತವಾಗುತ್ತಲೇ ಬಂದಿವೆ.

    ಈ ಬಗ್ಗೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್​ಗಳಲ್ಲಿ ಸುಮಾರು 40 ಪ್ರಕರಣಗಳು ದಾಖಲಾಗಿ, ಎಲ್ಲವೂ ತಿರಸ್ಕೃತಗೊಂಡಿದ್ದವು. ಆದರೂ, ಕೆಲವು ದಿನಗಳ ಹಿಂದೆ ಕೇರಳದಲ್ಲಿ ನಡೆದ ‘ಅಣಕು ಮತದಾನ’ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಹೆಚ್ಚುವರಿ ಮತಗಳು ಇವಿಎಂಗಳಲ್ಲಿ ದಾಖಲಾಗಿ ದೇಶಾದ್ಯಂತ ಸುದ್ದಿಯಾಯಿತು. ‘ಇವಿಎಂಗಳನ್ನು ಈ ರೀತಿ ಯಾರದೋ ಪರ ಫಲಿತಾಂಶ ಬರುವಂತೆ ತಾಂತ್ರಿಕವಾಗಿ ಬದಲಿಸಲು ಸಾಧ್ಯ. ಹಾಗಾಗಿ ಈ ಯಂತ್ರಗಳ ಬದಲು ಮೊದಲಿನಂತೆ ಮತಪತ್ರ ಬಳಸುವುದು ಸೂಕ್ತ’ ಎಂಬ ವಾದವನ್ನು ಮುಂದಿಟ್ಟುಕೊಂಡು ಕೆಲವರು ಸುಪ್ರೀಂ ಕೋರ್ಟ್​ನ ಮೆಟ್ಟಿಲು ಹತ್ತಿದ್ದರು.

    ಈ ವಿಷಯದಲ್ಲಿ ತಾಂತ್ರಿಕವಾಗಿ ವಿಸõತ ಅಧ್ಯಯನಪೂರ್ಣ ರೀತಿಯಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಂಕರ್ ದತ್ತ್ತಾ ಹಾಗೂ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಪೀಠ ಎಲ್ಲ ಸಂಶಯಗಳಿಗೆ ತೆರೆ ಎಳೆದಿದೆ. ‘ವ್ಯವಸ್ಥೆಯ ಬಗ್ಗೆ ಕುರುಡಾಗಿ ಅಪನಂಬಿಕೆ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ. ಇದರಿಂದಾಗಿ, ಇವಿಎಂಗಳ ಬಗ್ಗೆ ಕೆಲವರ ಮನಸ್ಸಿನಲ್ಲಿದ್ದ ಅನುಮಾನ ನಿವಾರಣೆ ಆದಂತಾಗಿದೆ. ಇವಿಎಂಗಳ ಬಗ್ಗೆ ಪದೇಪದೆ ಸಂಶಯ ವ್ಯಕ್ತಪಡಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಗೊಂದಲ ಮೂಡಿಸುತ್ತಿದ್ದ ಪಟ್ಟಭದ್ರ ಹಿತಾಸಕ್ತಿಗಳಿಗಂತೂ ಸುಪ್ರೀಂಕೋರ್ಟ್​ನ ಈ ತೀರ್ಪು ‘ಕಪಾಳ ಮೋಕ್ಷ’ವೇ ಸರಿ. ನ್ಯಾಯಮೂರ್ತಿಗಳ ಸ್ಪಷ್ಟ ಅಭಿಪ್ರಾಯದಿಂದಾಗಿ, ಇವಿಎಂಗಳ ಮೂಲಕ ನಡೆಯುವ ಮತದಾನದ ವಿಶ್ವಾಸಾರ್ಹತೆಗೆ ಮತ್ತೊಮ್ಮೆ ದೃಢೀಕರಣ ಸಿಕ್ಕಂತಾಗಿದೆ.

    ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಅದನ್ನು ಸಾಧ್ಯವಿರುವ ಕಡೆಗಳಲ್ಲಿ ಅನ್ವಯಿಸಿ ಪ್ರಯೋಜನ ಪಡೆಯಬೇಕೇ ಹೊರತು, ಅಪನಂಬಿಕೆಗಳಿಂದ ದೇಶವನ್ನು ಹಿಂದಕ್ಕೆ ಕೊಂಡೊಯ್ಯಬಾರದು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಕೆಲವು ಸಲಹೆಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈಗಿರುವ ಪದ್ಧತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಯಾದೃಚ್ಛಿಕವಾಗಿ (ರ್ಯಾಂಡಮ್ ಆಗಿ) ಆಯ್ಕೆ ಮಾಡಿಕೊಂಡ ಐದು ಇವಿಎಂಗಳ ವಿವಿಪ್ಯಾಟ್ ಸ್ಲಿಪ್​ಗಳನ್ನು ಮಾತ್ರ ಎಣಿಕೆ ಮಾಡಿ ಅದರ ಕ್ಷಮತೆಯನ್ನು ದೃಢಪಡಿಸಲಾಗುತ್ತಿದೆ. ಎಲ್ಲ ವಿವಿಪ್ಯಾಟ್ ಸ್ಲಿಪ್​ಗಳ ಯಾಂತ್ರಿಕ ಎಣಿಕೆಯನ್ನು ಸಾಧ್ಯವಾಗಿಸುವ ಕುರಿತು ಚಿಂತಿಸಬೇಕು ಎಂದು ಸುಪ್ರೀಂಕೋರ್ಟ್ ನೀಡಿರುವ ಸಲಹೆಯನ್ನು ಜಾರಿಗೆ ತರಲು ಮುಂದಿನ ದಿನಗಳಲ್ಲಿ ಆಯೋಗ ಸಿದ್ಧವಾಗಬೇಕಿದೆ. ಅದು ಸಾಧ್ಯವಾದರೆ ಇವಿಎಂ ಮತ್ತು ವಿವಿ ಪ್ಯಾಟ್​ಗಳ ವಿಷಯದಲ್ಲಿ ಇರುವ ಅಲ್ಪಸ್ವಲ್ಪ ಶಂಕೆಗಳನ್ನೂ ದೂರ ಮಾಡಿದಂತಾಗುತ್ತದೆ.

    ಸರ್ವಿಸ್ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಚುನಾವಣಾ ಕರ್ತವ್ಯದಲ್ಲಿದ್ದ ಸೈನಿಕ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts